Advertisement

ರಾಜಕೀಯ ಕಾರ್ಯದರ್ಶಿಗಳ ನೇಮಕಕ್ಕೆ ದಾರಿಸುಗಮ

06:00 AM Dec 22, 2018 | |

ವಿಧಾನಸಭೆ: ದೆಹಲಿಯ ಬಿಸಿಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸಮ್ಮಿಶ್ರ ಸರ್ಕಾರ, ಸಚಿವ ಸ್ಥಾನ ವಂಚಿತ ಶಾಸಕರಿಗೆ ನೀಡಲಾಗುವ ರಾಜಕೀಯ ಕಾರ್ಯದರ್ಶಿ ಸ್ಥಾನವನ್ನು ಲಾಭದಾಯಕ ಹುದ್ದೆಯಿಂದ ಹೊರಗಿಡಲು ನಿರ್ಧರಿಸಿದೆ.ಈ ಸಂಬಂಧ 2018ನೇ ಸಾಲಿನ ಕರ್ನಾಟಕ ವಿಧಾನಮಂಡಲದ (ಅನರ್ಹತಾ ನಿವಾರಣಾ) ತಿದ್ದುಪಡಿ ವಿಧೇಯಕಕ್ಕೆ ಎರಡೂ ಸದನಗಳಲ್ಲಿ ಅಂಗೀಕಾರ ನೀಡಲಾಯಿತು.

Advertisement

ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತ ಶಾಸಕರಿಗೆ ಸಂಪುಟ ದರ್ಜೆಯ ಸ್ಥಾನಮಾನ ಕಲ್ಪಿಸಲು ಅವಕಾಶ ಒದಗಿಸಲು 2018ನೇ ಸಾಲಿನ ಕರ್ನಾಟಕ ವಿಧಾನಮಂಡಲದ (ಅನರ್ಹತಾ ನಿವಾರಣಾ) ತಿದ್ದುಪಡಿ ವಿಧೇಯಕಕ್ಕೂ ಎರಡೂ ಸದನಗಳಲ್ಲಿ ಅಂಗೀಕಾರ ನೀಡಲಾಯಿತು. ಶಾಸಕರು ರಾಜಕೀಯ ಕಾರ್ಯದರ್ಶಿ ಹುದ್ದೆ ಹೊಂದಿದರೆ, ಲಾಭದಾಯಕ ಹುದ್ದೆ ಎಂದು ಪರಿಗಣಿಸುವುದರಿಂದ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರುವಂತಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ಲಾಭದಾಯಕ ಹುದ್ದೆ ವ್ಯಾಪ್ತಿಯಿಂದ ಹೊರಗಿಡಲು ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ದೆಹಲಿ ಸೇರಿ ಕೆಲವು ರಾಜ್ಯಗಳಲ್ಲಿ ರಾಜಕೀಯ ಕಾರ್ಯದರ್ಶಿ ನೇಮಕ ಸಂಬಂಧ ಅದು ಲಾಭದಾಯಕ ಹುದ್ದೆ ಎಂದು ಪರಿಗಣಿತವಾಗಿ ವಿವಾದ ಉಂಟಾಗಿದ್ದರಿಂದ  ದೆಹಲಿ ಪ್ರಕರಣದಲ್ಲಿ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಶಾಸಕರು ತಮ್ಮ ಸದಸ್ಯತ್ವ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ  ಮುಂಜಾಗರೂಕತಾ ಕ್ರಮವಾಗಿ ಈ ವಿಧೇಯಕ ತಂದು ಸರ್ಕಾರ ತನ್ನ ಹಾದಿ ಸುಗಮಗೊಳಿಸಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅವರು ಬಿಜೆಪಿಯವರ ಘೋಷಣೆಗಳ ನಡುವೆಯೇ ವಿಧೇಯಕದ ಪರ್ಯಾಲೋಚನೆ ಮಾಡಿದರು. ನಂತರ ಸಭಾಧ್ಯಕ್ಷ ರಮೇಶ್‌ ಕುಮಾರ್‌ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ ಎಂದು ಘೋಷಿಸಿದರು.

ಇದಲ್ಲದೇ, ಕರ್ನಾಟಕ ಸಿವಿಲ್‌ ಸೇವೆಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ನೇಮಕಾತಿಯಲ್ಲಿ ಅರ್ಹತೆ ಆಧಾರದಲ್ಲಿ ಸಾಮಾನ್ಯ ವರ್ಗದಡಿಯಲ್ಲಿಯೂ ಅವಕಾಶ ಕಲ್ಪಿಸಲು ಕರ್ನಾಟಕ ಸಿವಿಲ್‌ ಸೇವೆಗಳ (ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಾರ್ಯಧಾನ) ವಿಧೇಯಕ 2018 ವಿಧೇಯಕವನ್ನು ಎರಡೂ ಸದನಗಳಲ್ಲಿ ಯಾವುದೇ ಚರ್ಚೆಯಿಲ್ಲದೇ ಅಂಗೀಕರಿಸಲಾಯಿತು.

1995ರ ಸಿವಿಲ್‌ ನೇಮಕಾತಿಯಲ್ಲಿರುವ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸ್ಪರ್ಧಾತ್ಮಕವಾಗಿ ಅರ್ಹತೆ ಹೊಂದಿದ್ದರೂ ಸಾಮಾನ್ಯ ವರ್ಗದ ಅಡಿಯಲ್ಲಿ ಹುದ್ದೆ ಪಡೆಯಲು ಅವಕಾಶ ವಂಚಿತರಾಗುತ್ತಿದ್ದರು. ಸಿವಿಲ್‌ ಸೇವೆಗಳ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೂ ಸಾಮಾನ್ಯ ವರ್ಗದ ಹುದ್ದೆಗಳಿಗೆ ಅವಕಾಶ ಕಲ್ಪಿಸಿ 1995ರಿಂದಲೇ ಅನ್ವಯವಾಗುವಂತೆ ಕಾನೂನಿಗೆ ತಿದ್ದುಪಡಿ ತರಲಾಗಿದೆ.

Advertisement

ವಿವಿ ತಿದ್ದುಪಡಿ ಕಾಯ್ದೆಗೆ ಅಂಗೀಕಾರ
ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಮೂವರು ಸಿಂಡಿಕೇಟ್‌ ಸದಸ್ಯರನ್ನು ನಾಮ ನಿರ್ದೇಶನ ಮಾಡಲು
ಅವಕಾಶ ಕಲ್ಪಿಸುವ 2018ನೇ ಸಾಲಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕಕ್ಕೆ
ಅಂಗೀಕಾರ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next