Advertisement

ಗುಲಾಮಗಿರಿಯಿಂದ ಸ್ವತಂತ್ರರಾಗಿದ್ದೇವೆ: ನಡಹಳ್ಳಿ

03:47 PM Apr 30, 2022 | Shwetha M |

ಮುದ್ದೇಬಿಹಾಳ: 75 ವರ್ಷದ ಗುಲಾಮಗಿರಿಯಿಂದ ನಾವೀಗ ಸ್ವತಂತ್ರರಾಗಿದ್ದೇವೆ. ವಿಶೇಷವಾಗಿ ಮುದ್ದೇಬಿಹಾಳ ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಬದಲಾವಣೆ ಆಗಿದೆ. ಆ ಸ್ವಾತಂತ್ರ್ಯ, ಬದಲಾವಣೆ ಸದ್ಬಳಕೆ ಆಗಬೇಕಾದರೆ ನಮಗೆ ಸಿಗುತ್ತಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಮುದ್ದೇಬಿಹಾಳ ತಾಲೂಕಿನ ಅರಸನಾಳ ಗ್ರಾಮದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಅರಸನಾಳದಿಂದ ಹಿರೇಮುರಾಳವರೆಗಿನ 4.5 ಕಿಮೀ ರಸ್ತೆಯನ್ನು 1.80 ಕೋಟಿ ಅನುದಾನದಲ್ಲಿ ಡಾಂಬರೀಕರಣ ಮಾಡುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ಜನಕ್ಕೆ ನೀರು ಮತ್ತು ವಿದ್ಯುತ್‌ ಕೊಡುವುದು ನನ್ನ ಸಂಕಲ್ಪವಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಹಲವು ಕೆಲಸಗಳು ಆಗಿವೆ. ಹಿರೇಮುರಾಳದಲ್ಲಿ 110 ಕೆವಿ ಸ್ಟೇಷನ್‌ ಪ್ರಾರಂಭಿಸಿದ್ದು, ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಇದರಿಂದ ವಿದ್ಯುತ್‌ನ ಗುಣಮಟ್ಟ ಸುಧಾರಣೆ ಆಗತೊಡಗಿದೆ. ಹಿರೇಮುರಾಳ ಭಾಗದಲ್ಲಿ 110 ಕೆವಿ ಸ್ಟೇಷನ್‌ನಿಂದ 7 ತಾಸು ವಿದ್ಯುತ್‌ ದೊರಕುತ್ತಿದೆ. ಉಳಿದೆಡೆ ಇನ್ನೂ ಈ ಸೌಕರ್ಯ ಪ್ರಾರಂಭಗೊಂಡಿಲ್ಲ. ಶೀಘ್ರ ಇಡೀ ತಾಲೂಕಿಗೆ ಮಂಜೂರಾಗಿರುವ 8 ಹೊಸ ಸ್ಟೇಷನ್‌ ಗಳು ಶೀಘ್ರ ಕಾರ್ಯಾರಂಭ ಮಾಡಲಿವೆ ಎಂದರು.

ಹಿರೇಮುರಾಳದಲ್ಲಿ ಹೊಸದಾಗಿ ರಸ್ತೆ ನಿರ್ಮಿಸಲು 40 ಕೋಟಿ ರೂ. ಅನುದಾನದ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿದೆ ಎಂದರು.

ಬಿಜೆಪಿ ಹಿರಿಯ ಮುಖಂಡ ಎಂ.ಎಸ್‌. ಪಾಟೀಲ ನಾಲತವಾಡ ಮಾತನಾಡಿ, ಶಾಸಕ ನಡಹಳ್ಳಿಯವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದರು.

Advertisement

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ, ನಾಲತವಾಡ ಪಪಂ ಮಾಜಿ ಸದಸ್ಯ ಬಸವರಾಜ ತಿರುಮುಖೆ, ತಾಪಂ ಮಾಜಿ ಸದಸ್ಯ ಖಾಜಾಹುಸೇನ್‌ ಎತ್ತಿನಮನಿ, ಬಸವರಾಜ ಸರೂರ, ಬಸಪ್ಪ ಕೆಸಾಪುರ, ಮುತ್ತು ಪಾಟೀಲ, ಗುರುಸ್ವಾಮಿ ಹಿರೇಮಠ, ಷಣ್ಮುಖಯ್ಯ ಹಿರೇಮಠ, ಎಇಇ ವಿಜಯಕುಮಾರ ನಾಯಕ ವೇದಿಕೆಯಲ್ಲಿದ್ದರು. ಹಿರೇಮುರಾಳ, ನಾಲತವಾಡ, ನೆರಬೆಂಚಿ, ಅರೆಮುರಾಳ, ಜಂಗಮುರಾಳ, ಅರಸನಾಳ ಗ್ರಾಮಗಳ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next