ರಾಯಚೂರು: ಅನರ್ಹ ಶಾಸಕರ ಪ್ರಕರಣದಲ್ಲಿ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಮೀಪದ ಯರಮರಸ್ ಸರ್ಕ್ಯೂಟ್ ಹೌಸ್ ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನರ್ಹ ಶಾಸಕರ ವಿಚಾರದ ಬಗ್ಗೆ ನಾನು ಹೆಚ್ಚೇನು ಮಾತನಾಡುವುದಿಲ್ಲ. ಪಕ್ಷಾಂತರ ಕಾಯ್ದೆ ಪ್ರಕಾರವೇ ಅನರ್ಹತೆ ಮಾಡಲಾಗಿದೆ. 15 ಶಾಸಕರು ಯಾವುದೇ ಬಲವಾದ ಕಾರಣಕ್ಕೆ ರಾಜೀನಾಮೆ ನೀಡಿಲ್ಲ. ಬಿಜೆಪಿ ಸೇರಬೇಕು ಎಂಬ ಏಕೈಕ ಕಾರಣಕ್ಕೆ ರಾಜೀನಾಮೆ ನೀಡಿದ್ದರಿಂದ ಅವರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಲಾಯಿತು ಎಂದರು.
ಪ್ರಮಾಣ ವಚನ ಸ್ವೀಕರಿಸುವಾಗಲೇ ಅನರ್ಹ ಶಾಸಕರಿಗೂ ಸಚಿವ ಸ್ಥಾನ ನೀಡುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಅಮಿತ್ ಶಾ ಅನರ್ಹರಿಗೆ ಟಿಕೆಟ್ ಪಕ್ಕಾ ಎಂದಿದ್ದರು. ಈಗ ಅವರೆಲ್ಲಿ ಎಂದು ಪ್ರಶ್ನಿಸಿದರು.
ಅನರ್ಹರು ಮತ್ತೆ ಪಕ್ಷ ಬಂದಲ್ಲಿ ಸೇರಿಸಿಕೊಳ್ಲುವ ಪ್ರಶ್ನೆಯೆ ಇಲ್ಲ ಎಂದು ಪುನರುಚ್ಛರಿಸಿದರು.
ಮೂರು ದಿನದ ಅಧಿವೇಶನದಲ್ಲಿ ಏನು ಚರ್ಚೆ ಮಾಡಲು ಸಾಧ್ಯ. ಬೆಳಗಾವಿಯಲ್ಲಿ 20 ದಿನ ನಡೆಸುವಂತೆ ಪತ್ರ ಬರೆಯಲಾಗಿತ್ತು. ನೆರೆ ಬರ ವಿಚಾರವೇ ನಮ್ಮ ಮೊದಲ ಆದ್ಯತೆ ಎಂದು ತಿಳಿಸಿದರು.