Advertisement

ಪಿಯು ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಎಚ್ಚರವಹಿಸಿದ್ದೇವೆ

10:32 AM Oct 18, 2019 | Sriram |

ಬೆಂಗಳೂರು: ಪ್ರಸಕ್ತ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಮತ್ತು ಪರೀಕ್ಷೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ.

Advertisement

ಬುಧವಾರ ನಗರದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಯಾವುದೇ ಕಾರಣಕ್ಕೂ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಕೂಡದು, ಸಾಮೂಹಿಕ ನಕಲು ಸಹಿತವಾಗಿ ಯಾವುದೇ ರೀತಿಯ ಪರೀಕ್ಷಾ ಅಕ್ರಮ ನಡೆಯದಂತೆ ಎಚ್ಚರ ವಹಿಸುವ ಸಂಬಂಧ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೌಲ್ಯಮಾಪನ ಕಾರ್ಯವನ್ನು ಎಚ್ಚರಿಕೆಯಿಂದ ಮಾಡಬೇಕು, ತಪ್ಪು ಮೌಲ್ಯಮಾಪನದಿಂದ ಯಾವ ವಿದ್ಯಾರ್ಥಿಗೂ ಅನ್ಯಾಯವಾಗದಂತೆ ನಿಗಾ ವಹಿಸಬೇಕು ಎಂದು ಪಿಯು ಇಲಾಖೆ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದೇವೆ ಮತ್ತು ಅಧಿಕಾರಿಗಳ ಸಭೆ ಕೂಡ ಕರೆದು ಚರ್ಚಿಸಿದ್ದೇವೆ ಎಂದರು.

ಕಿಂಗ್‌ಪಿನ್‌ಗಳ ಮೇಲೆ ನಿಗಾ
ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಪೂರ್ಣವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಿಂಗ್‌ಪಿನ್‌ಗಳ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿದ್ದೇವೆ. ಕಿಂಗ್‌ಪಿನ್‌ಗಳು ಹೊರಗೆ ಬಾರದಂತೆ ಎಲ್ಲ ರೀತಿಯ ಕ್ರಮ ವಹಿಸಲು ಪೊಲೀಸ್‌ ಇಲಾಖೆಗೂ ತಿಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಶಿಕ್ಷಕರು, ಉಪನ್ಯಾಸಕರ ಸಮಸ್ಯೆಗೆ ಶೀಘ್ರ ಪರಿಹಾರ
ಮೌಲ್ಯಮಾಪನದ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆ ಅಥವಾ ಬಹಿಷ್ಕಾರ ಇತ್ಯಾದಿ ಯಾವುದನ್ನೂ ಮಾಡಬಾರದು. ಶಿಕ್ಷಕರು ಮತ್ತು ಉಪನ್ಯಾಸಕರ ಯಾವುದೇ ಸಮಸ್ಯೆ ಇದ್ದರೂ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಶಿಕ್ಷಕ, ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಸಭೆಯನ್ನು ಕರೆಯಲಿದ್ದೇವೆ ಎಂದರು.

Advertisement

ಪ್ರಶ್ನೆ ಪತ್ರಿಕೆಗಳನ್ನು ಶೇಖರಿಸಿಡುವ ಜಿಲ್ಲಾ ಖಜಾನೆಗೆ ಇನ್ನಷ್ಟು ಭದ್ರತೆ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದರಿಂದ ಆರಂಭಗೊಂಡು, ಪರೀಕ್ಷಾ ಕೇಂದ್ರಕ್ಕೆ ವಿತರಣೆಯವರೆಗೂ ಎಲ್ಲ ರೀತಿಯ ಸುರಕ್ಷಾ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೇ ಪರೀಕ್ಷೆ ಬರೆಯಬಹುದು ಎಂದರು.

ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರುವ ಜತೆಗೆ ಪ್ರವಾಹದಿಂದಾಗಿ 22 ಜಿಲ್ಲೆಗಳ ಶಾಲಾ, ಕಾಲೇಜು ಮಕ್ಕಳ ಸಮಸ್ಯೆಗೂ ಸರಕಾರ ಸ್ಪಂದಿಸುತ್ತಿದೆ. ಪೀಠೊಪಕರಣಗಳ ಅಳವಡಿಕೆ ಮತ್ತು ಕೊಠಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ತುರ್ತು ಪರಿಹಾರಕ್ಕೆ 500 ಕೋ. ರೂ. ಬಂದಿದೆ. ಶೈಕ್ಷಣಿಕವಾಗಿ ಮಕ್ಕಳಿಗೆ ಶಕ್ತಿ ತುಂಬವ ಕೆಲಸವನ್ನು ಮಾಡಲಿದ್ದೇವೆ. ಪಠ್ಯಪುಸ್ತಕ ಮತ್ತು ಎರಡನೇ ಜತೆ ಸಮವಸ್ತ್ರ ದಸರೆ ರಜೆ ಮುಗಿದು ಶಾಲೆ ಪುನರಾರಂಭಗೊಂಡಾಗ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next