ಹೊಸದಿಲ್ಲಿ; ಆರ್ಥಿಕತೆ ಕುಸಿಯುತ್ತಿರುವ ಬಗ್ಗೆ ದೇಶದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವಂತೆ, ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟೀಕರಣ ನೀಡುವ ಯತ್ನ ಮಾಡಿದ್ದಾರೆ. ಉಳಿದ ದೇಶಗಳಿಗೆ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ನಾವೇ ಚೆನ್ನಾಗಿದ್ದೇವೆ ಎಂದು ಹೇಳಿದ್ದಾರೆ. ಚೀನ-ಅಮೆರಿಕ ವ್ಯಾಪಾರ ಯುದ್ಧ, ಆ ದೇಶಗಳ ಕರೆನ್ಸಿ ಅಪಮೌಲ್ಯಗಳಿಂದಾಗಿ ಆರ್ಥಿಕತೆ ನಿಧಾನವಾಗಿದೆ. ಅಮೆರಿಕ, ಚೀನದ ಜಿಡಿಪಿ ಮಟ್ಟಕ್ಕೆ ಹೋಲಿಸಿದರೆ ನಮ್ಮದೇ ಚೆನ್ನಾಗಿದೆ ಎಂದು ಹೇಳಿದರು. ಅಲ್ಲದೇ ವಿಶ್ವಾದ್ಯಂತ ಎಲ್ಲ ದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಹೇಳಿದರು.
ಇದೇ ವೇಳೆ ಆರ್ಥಿಕತೆ ಚಿಗಿರಿಕೊಳ್ಳಲು ಕೆಲವೊಂದು ಕ್ರಮ ಕೈಗೊಂಡಿದ್ದಾಗಿ ಹೇಳಿದರು. ಆರ್ಥಿಕತೆ ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ಕಳೆದ ಕೆಲ ವಾರಗಳಿಂದ ನಿರ್ಮಲಾ ಅವರು ನಿರಂತರ ಸಭೆಗಳನ್ನು ನಡೆಸುತ್ತಿದ್ದು, ಅದರಂಗವಾಗಿ ಕೈಗೊಂಡ ತೀರ್ಮಾನಗಳನ್ನು ಪ್ರಕಟಿಸಿದರು.
ದೀರ್ಘಾವಧಿ/ಅಲ್ಪಾವಧಿ ಬಂಡವಾಳ ಲಾಭದ ಮೇಲಿನ ಸುಂಕಗಳನ್ನು ತೆಗೆಯುವುದು, ಸ್ಟಾರ್ಟಪ್‌ಗ್ಳ ಮೇಲಿನ ಏಜೆಂಲ್ ಟ್ಯಾಕ್ಸ್ ರದ್ದು, ಕಾರ್ಪೊರೆಟ್ ಸಾಮಾಜಿಕ ಜವಾಬ್ದಾರಿ ಕುರಿತ ಪ್ರಕರಣಗಳನ್ನು ಕ್ರಿಮಿನಲ್ ಪ್ರಕರಣಗಳಾಗಿ ಪರಿಗಣಿಸದೇ ಇರುವುದು ಇತ್ಯಾದಿ ಪ್ರಮುಖ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಸಣ್ಣ ಅತಿ ಸಣ್ಣ ಕೈಗಾರಿಕೆಗಳಿಗೆ ಬಾಕಿ ಇರುವ ಜಿಎಸ್‌ಟಿ ರಿಟರ್ನ್ಸ್ ಅನ್ನು 30 ದಿನಗಳೊಳಗೆ ಪಾವತಿಸುವುದಾಗಿ ಹೇಳಿದ್ದಾರೆ.
ತೆರಿಗೆ ಪಾವತಿಯ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗುವುದು, ಸುಧಾರಣೆ ನಮ್ಮ ಪ್ರಮುಖ ಅಜೆಂಡಾ ಆಗಿದೆ. ಆರ್ಥಿಕತೆ ಕುಸಿತದ ಭೀತಿಯನ್ನು ಹೋಗಲಾಡಿಸಲಾಗುವುದು ಎಂದು ಹೇಳಿದರು.