ಬೆಳಗಾವಿ: ಎಲ್ಲ ಸಾಹುಕಾರಗಳು ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೂ ಜಗಳವಿಲ್ಲ. ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಪಕ್ಕಾ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಗೋಕಾಕ, ಹುಕ್ಕೇರಿ, ಅಥಣಿ ಸೇರಿದಂತೆ ಎಲ್ಲ ಸಾಹುಕಾರರು ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಚುನಾವಣೆ ವೇಳೆ ಕೆಲ ಸಣ್ಣಪುಟ್ಟ ಸಮಸ್ಯೆ, ಗೊಂದಲಗಳು ಇರುತ್ತವೆ. ಅವುಗಳನ್ನು ಪಕ್ಷದ ವೇದಿಕೆಯಲ್ಲಿ ಪರಿಹರಿಸುತ್ತಾರೆ. ಜಿಲ್ಲೆಯ ಎಲ್ಲ ನಾಯಕರು, ಸಂಸದರು, ಶಾಸಕರು, ಮುಖಂಡರು ಸೇರಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಅರುಣ ಶಹಾಪುರ ಅವರು ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದು, ವಾಯವ್ಯ ಮತಕ್ಷೇತ್ರ ವ್ಯಾಪ್ತಿ ಅತಿ ದೊಡ್ಡದಾಗಿರುವುದರಿಂದ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು, ಶಾಸಕರು, ಸಂಸದರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಅಡ್ಡಮತದಾನ ಮಾಡಿದ ಇಬ್ಬರನ್ನೂ ಪಕ್ಷದಿಂದ ಹೊರಹಾಕುತ್ತೇವೆ: ಸಿ.ಎಂ.ಇಬ್ರಾಹಿಂ
ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆ ನಡೆದಿರುವುದರಿಂದ ನಂತರದಲ್ಲಿ ಸಂಪುಟ ವಿಸ್ತರಣೆ ಆಗಲಿದೆ. ಫಲಿತಾಂಶ ಮುಗಿದ ಬಳಿಕ ಸಚಿವ ಸ್ಥಾನದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಗೆ ಬೆಂಬಲ ನೀಡುವ ಕುರಿತು ಪಕ್ಷದ ಮಟ್ಟದಲ್ಲಿ ಚರ್ಚೆ ಆಗಿದೆ. ಅವರ ಬೆಂಬಲ ಬೇಡ ಎಂದು ಯಾರಾದರೂ ಹೇಳಿರುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಅದನ್ನು ಪಕ್ಷದ ವರಿಷ್ಠರು ಗಮನಿಸುತ್ತಾರೆ ಎಂದರು.