Advertisement

BJP ಮಸಾಲೆ ಅರೆಯಲು ನಮಗೂ ಗೊತ್ತು: ಸಿ.ಟಿ.ರವಿ

09:44 PM Aug 21, 2023 | Team Udayavani |

ಬೆಂಗಳೂರು: ಮಸಾಲೆ ಅರೆಯೋದು ಡಿ.ಕೆ.ಶಿವಕುಮಾರ್‌ ಅವರಿಗೆ ಮಾತ್ರ ಗೊತ್ತಿರುವ ವಿದ್ಯೆಯಲ್ಲ, ನಮಗೂ ಗೊತ್ತಿದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

Advertisement

ಕೋರ್‌ ಕಮಿಟಿ ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಯಾರೂ ಕೋಳಿಯನ್ನು ಕೇಳಿ ಖಾರ ಅರೆಯುವುದಿಲ್ಲ. ಮಲೆನಾಡು ಅಡುಗೆ ತಿಂದವರಿಗೆ ನಮ್ಮ ಮಸಾಲೆ ಶೈಲಿ ಗೊತ್ತಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಹಿರಿಯ ನಾಯಕರ ಜತೆ ಸುದೀರ್ಘ‌ವಾಗಿ ಚರ್ಚೆ ನಡೆದಿದೆ. ಪ್ರಸ್ತುತ ರಾಜಕೀಯ, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ನಡೆಸಿದ್ದೇವೆ. ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 3 ತಿಂಗಳು ಕಳೆದಿದೆ. ಈ ಅವಧಿಯಲ್ಲಿ ರಾಜ್ಯದ ಜನತೆಗೆ ಬೆಲೆ ಏರಿಕೆಯ ಉಡುಗೊರೆಯನ್ನಷ್ಟೇ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ಮತ್ತು ಮಂತ್ರಿಗಳ ನಡುವೆ ವರ್ಗಾವಣೆಗಾಗಿ ಗಲಾಟೆ ನಡೆಯುತ್ತಿದೆ. ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರದಲ್ಲಿ ತೊಡಗಿದೆ. ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಕ್ಕೆ ವರ್ಗಾಯಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹೊರಹಾಕಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಆ. 28ರಂದು ಬೆಂಗಳೂರಿನಲ್ಲಿ ಸಮಗ್ರ ಹೋರಾಟ ನಡೆಸುತ್ತೇವೆ ಎಂದರು.

ಕೆಲವರು ಪಕ್ಷ ಬಿಟ್ಟು ಹೋಗುತ್ತಾರೆ ಎನ್ನುವುದು ಊಹಾಪೋಹ. ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಸೈದ್ಧಾಂತಿಕವಾಗಿ ಪಕ್ಷ ಕಟ್ಟಿದ್ದೇವೆ. ಯಾರ್ಯಾರು ಪಕ್ಷ ಬಿಟ್ಟು ಹೋಗುತ್ತಾರೆಂಬ ಚರ್ಚೆಯಲ್ಲಿ ಹುರುಳಿಲ್ಲ. ಪಕ್ಷ ಕಟ್ಟಿದವರಿಗೆ ಪಕ್ಷ ಬೆಳೆಸುವುದು, ಉಳಿಸುವುದು ಗೊತ್ತು. ಸೋಮಶೇಖರ್‌ ಜತೆ ನಾನೂ ಮಾತನಾಡಿದ್ದೇನೆ. ಅವರು ಎಲ್ಲೂ ಹೋಗುವುದಿಲ್ಲ. ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ಪಕ್ಷಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಚಂದ್ರಯಾನ ಕುರಿತು ಪ್ರಕಾಶ್‌ ರಾಜ್‌ ಮಾಡಿರುವ ವ್ಯಂಗ್ಯದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರಿಗೆ ಭಾರತದ ಅಸ್ಮಿತೆ ಬಗ್ಗೆ ಅಸಮಾಧಾನವಿದೆ. ಭಾರತ ವಿಕಾಸವಾದಾಗ ಕೆಲವರಿಗೆ ಅಸಹನೆ, ಸಂಕಟ ಶುರುವಾಗುತ್ತದೆ. ಈ ಸಂಕಟವನ್ನು ನಾನಾ ರೀತಿ ವ್ಯಕ್ತಪಡಿಸುತ್ತಾರೆ. ಭಾರತಕ್ಕೆ ವಿಶ್ವಮಟ್ಟದಲ್ಲಿ ಮನ್ನಣೆ ಸಿಕ್ಕಿದರೆ ಕೆಲವರಿಗೆ ಹಸಿಮೆಣಸಿನ ಕಾಯಿ ಇಟ್ಟಂತೆ ಆಗುತ್ತದೆ ಎಂದು ವ್ಯಂಗ್ಯವಾಡಿದರು.

ನಾಗಮೋಹನ್‌ ದಾಸ್‌ ಸಮಿತಿಗೆ ವಿರೋಧ
40 ಪರ್ಸೆಂಟ್‌ ಕಮಿಷನ್‌ ಆರೋಪದ ಬಗ್ಗೆ ತನಿಖೆ ನಡೆಸಲು ರಚಿಸಿರುವ ನ್ಯಾ| ನಾಗಮೋಹನ್‌ ದಾಸ್‌ ಸಮಿತಿ ಬಗ್ಗೆ ಸಿ.ಟಿ. ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾಗಮೋಹನ್‌ದಾಸ್‌ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಾರೆಂಬ ವಿಶ್ವಾಸ ನಮಗಿಲ್ಲ. ಹಿಂದೆ ಅವರು ಕಾಂಗ್ರೆಸ್‌ ಮರ್ಜಿಯಲ್ಲಿ ಕೆಲಸ ಮಾಡಿದ್ದಾರೆಂಬ ಬಗ್ಗೆ ನಮಗೆ ಅನುಮಾನವಿದೆ. ಕಾಂಗ್ರೆಸ್‌ ಟೂಲ್‌ ಕಿಟ್‌ ರೀತಿ ಕೆಲಸ ಮಾಡಬೇಕೆಂದು ಈ ಸಮಿತಿ ರಚಿಸಲಾಗಿದೆ ಎಂದು ಆರೋಪಿಸಿದರು.

ಮಧ್ಯಾಂತರ ವರದಿ ತಂದು ಲೋಕಸಭಾ ಚುನಾವಣೆಗೆ ಕಾರ್ಯಸೂಚಿ ಸಿದ್ಧಪಡಿಸಲು ಹೊರಟಿದ್ದಾರೆ. ಕೇವಲ ಸುಳ್ಳು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತನಿಖೆ ಮಾಡಲೇಬೇಕೆಂಬ ಉದ್ದೇಶವಿದ್ದರೆ 2013ರಿಂದ ನಡೆದ ಭ್ರಷ್ಟಾಚಾರದ ಬಗ್ಗೆಯೂ ಲೋಕಾಯುಕ್ತ ತನಿಖೆಯಾಗಲಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next