ಹುಬ್ಬಳ್ಳಿ: ಮೇ 23 ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತದೆ ಎನ್ನುವುದು ಬಿಜೆಪಿ ನಾಯಕರ ಭ್ರಮೆ. ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳಿದ್ದು, ಸರಕಾರವನ್ನು ಉಳಿಸಿಕೊಳ್ಳುತ್ತೇವೆ ಎಂದು ಸಚಿವ ಡಿ.ಕೆ.ಶಿವಕುಮಾರ ಹೇಳಿದರು.
ಶಾಸಕರು, ಸಚಿವರು ಬರುತ್ತಾರೆ: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಮೇ 8ರಿಂದ ಶಾಸಕರು, ಸಚಿವರು ಆಗಮಿಸಲಿದ್ದಾರೆ. ಪ್ರಚಾರ ಕಾರ್ಯ ಮತ್ತಷ್ಟು ಚುರುಕುಗೊಳ್ಳಲಿದೆ. ವೇದಿಕೆ ಸಭೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ನಾಯಕರನ್ನು ಮನೆ ಮನೆಗೆ ಕರೆದುಕೊಂಡು ಹೋಗಿ ಮತಯಾಚನೆ ಮಾಡಬೇಕು. ನಮಗೆ ಮತ ಹಾಕಲ್ಲ ಎನ್ನುವವರ ಮನೆಗೂ ಹೋಗಿ ಮತ ಕೇಳಬೇಕೆಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಎಚ್.ಕೆ. ಪಾಟೀಲ, ಆರ್.ವಿ. ದೇಶಪಾಂಡೆ, ಜಮೀರ್ ಅಹ್ಮದ್, ಸತೀಶ ಜಾರಕಿಹೊಳಿ, ಯು.ಟಿ. ಖಾದರ್, ಶಿವಶಂಕರೆಡ್ಡಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ. ಚುನಾವಣೆ ಮುಗಿಯುವವರೆಗೂ ನಾನು ಇಲ್ಲಿಯೇ ಇರುತ್ತೇನೆ. ಪಕ್ಷದ ಕಾರ್ಯಕರ್ತರು, ಮುಖಂಡರು ಬಿಜೆಪಿ ನಾಯಕರ ಬಗ್ಗೆ ಯಾವುದೇ ಹೇಳಿಕೆ ಕೊಡಬಾರದು ಎಂದರು.
ಲೀಡ್ ಕೊಟ್ಟವರು ನಾಯಕರು: ಕೇವಲ ಬಿಳಿ ಬಟ್ಟೆ ಹಾಕಿಕೊಂಡು ಓಡಾಡಿದರೆ ನಾಯಕರಾಗಲ್ಲ. ತಮ್ಮ ಬೂತ್‌ಗಳಲ್ಲಿ ಲೀಡ್ ಕೊಟ್ಟರೆ ಅವರೆ ನಿಜವಾದ ನಾಯಕರು. ಚುನಾವಣೆಯ ಪ್ರತಿಯೊಂದು ಕಾರ್ಯಗಳನ್ನು ಒಂದು ಪ್ರತ್ಯೇಕ ತಂಡ ಮೇಲ್ವಿಚಾರಣೆ ಮಾಡುತ್ತದೆ. ಪಕ್ಷದಲ್ಲಿ ನಿಜವಾಗಿ ದುಡಿಯುವ ಕಾರ್ಯಕರ್ತರಿಗೆ ಮಾತ್ರ ಉತ್ತಮ ಸ್ಥಾನ ಮಾನ ದೊರೆಯಲಿದೆ ಎಂದರು.
Advertisement
ಕುಂದಗೋಳದಲ್ಲಿ ಕಾಂಗ್ರೆಸ್ ಚುನಾವಣೆ ಪ್ರಚಾರ ಕಚೇರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ನಾಯಕರು ಹೇಳುತ್ತಿರುವಂತೆ ಯಾವುದೂ ಆಗಲ್ಲ. ಮೂರ್‍ನಾಲ್ಕು ದಶಕಗಳಿಂದ ರಾಜಕಾರಣ ಮಾಡಿದ್ದೇನೆ. ನಾವು ಸರಕಾರ ಉಳಿಸಿಕೊಳ್ಳುತ್ತೇವೆ. ಈ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕುಸುಮಾವತಿ ಅವರನ್ನು ಗೆಲ್ಲಿಸುವುದು ನಮ್ಮ ಮುಂದಿರುವ ಏಕೈಕ ಗುರಿ. ಪ್ರತಿಯೊಬ್ಬರ ಮನೆಗೂ ನಮ್ಮ ಅಭ್ಯರ್ಥಿಯ ಕರಪತ್ರದೊಂದಿಗೆ ಮತಯಾಚನೆ ಮಾಡಬೇಕು. ರಾಜ್ಯದ ಇಡೀ ಕಾಂಗ್ರೆಸ್ ಪಕ್ಷವೇ ಕುಸುಮಾವತಿ ಅವರ ಪರ ನಿಂತಿದೆ ಎಂದರು.
Related Articles
Advertisement
ಅವಕಾಶ ನೀಡೋಣ: ನಮ್ಮ ಪಕ್ಷದಲ್ಲೇ ಇದ್ದು, ಹಿಂದಿನ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದವರಿಗೆ ತಿದ್ದಿಕೊಳ್ಳಲು ಮತ್ತೂಂದು ಅವಕಾಶ ನೀಡೋಣ. ವಿರೋಧಿ ಚಟುವಟಿಕೆ ಮಾಡಿದವರ ಬಗ್ಗೆ ನೀಡಿರುವ ಸಂಪೂರ್ಣ ಮಾಹಿತಿ ನನ್ನಲ್ಲಿದೆ. ಅವರ ಪ್ರತಿ ಚಟುವಟಿಕೆಯ ಮೇಲೂ ನಮ್ಮ ಕಣ್ಣು ಇರುತ್ತದೆ. ನಿಮ್ಮ ಆತ್ಮಸಾಕ್ಷಿ ಮೆಚ್ಚುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಶಿವಳ್ಳಿಯವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದರು.
ಜೆಡಿಎಸ್ ಮುಖಂಡ ಎಂ.ಎಸ್. ಅಕ್ಕಿ ಮಾತನಾಡಿ, ಮೈತ್ರಿ ಸರಕಾರ ಬೀಳಿಸಲು ತಂತ್ರಗಾರಿಕೆ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಅವಕಾಶ ನೀಡಬಾರದು. ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.
ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ, ಸಚಿವ ಶಿವಶಂಕರರಡ್ಡಿ, ಶಾಸಕಿ ಸೌಮ್ಯರೆಡ್ಡಿ, ವೀರಣ್ಣ ಮತ್ತಿಕಟ್ಟಿ, ಐ.ಜಿ. ಸನದಿ ಇನ್ನಿತರರಿದ್ದರು..
ಅಭ್ಯರ್ಥಿ ಕುಸುಮಾವತಿ ಅವರ ಪರವಾದ ಕರಪತ್ರಗಳನ್ನು ಪ್ರತಿಯೊಂದು ಮನೆಗೆ ತಲುಪಿಸಿ ಮತಯಾಚಿಸಬೇಕು. ಗ್ರಾಮಕ್ಕೆ ಬರುವಾಗ ನಮ್ಮ ಅನುಮತಿ ಪಡೆಯಬೇಕು ಎನ್ನುವ ಮುಖಂಡರ ನಡವಳಿಕೆಯನ್ನು ನಾವು ಸಹಿಸಲ್ಲ. ಅಭ್ಯರ್ಥಿ ಹಾಗೂ ಅವರೊಡನೆ ಇರುವ ತಂಡ ಮುಕ್ತವಾಗಿ ಪ್ರತಿ ಹಳ್ಳಿಗೆ ಹೋಗಿ ಪ್ರಚಾರ ಮಾಡಲಿದೆ. –ಡಿ.ಕೆ. ಶಿವಕುಮಾರ,ಸಚಿವ