Advertisement

ಮಾದಕ ವಸ್ತುಗಳ ಚಟದಿಂದ ಹೊರಬರುವ ವಿಧಾನಗಳು

01:25 PM Dec 18, 2022 | Team Udayavani |

ಮೊದಲನೇ ಹಂತ: ಬದಲಾಗಲು ದೃಢ ನಿರ್ಧಾರ ಮಾಡುವುದು

Advertisement

ಮಾದಕ ವಸ್ತುಗಳ ಚಟದಿಂದ ಒದ್ದಾಡುತ್ತಿರುವ ವ್ಯಕ್ತಿ ಅದರಿಂದ ಹೊರಬರಲು ಪ್ರಯತ್ನಿಸುವಾಗ ತೆಗೆದುಕೊಳ್ಳಬೇಕಾದ ತುಂಬಾ ಜಟಿಲವಾದ ಮತ್ತು ದೊಡ್ಡದಾದ ನಿರ್ಧಾರವೆಂದರೆ: ಬದಲಾಗಲು ನಿರ್ಧರಿಸುವುದು. ಬದಲಾಗಲು ನಿರ್ಧರಿಸುವುದು ತುಂಬಾ ಗೊಂದಲದಿಂದ ಕೂಡಿದ ನಿರ್ಧಾರವೆಂದು ವ್ಯಕ್ತಿಗೆ ತೋರುತ್ತದೆ. ಆದರೆ ಚಟದಿಂದ ಜೀವನದ ವಿವಿಧ ಭಾಗಗಳಲ್ಲಿ ಆಗುತ್ತಿರುವ ತೊಂದರೆಗಳನ್ನು ಪರಿಗಣಿಸಿ ವ್ಯಕ್ತಿಯು ಮುಂದುವರಿಯಬೇಕು. ಚಟದಿಂದ ಹೊರಬರುವ ನಿರ್ಧಾರದ ಜತೆಗೆ ಜೀವನದ ಇತರ ಭಾಗಗಳಲ್ಲೂ ಕೂಡ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಯಾವುದೋ ಸಮಸ್ಯೆ ಎದುರಾದಾಗ ಅದನ್ನು ಬಗೆಹರಿಸಲು ಮಾದಕ ವಸ್ತುವಿನ ಮೊರೆಹೋಗದೆ ಬೇರೆ ವಿಧಾನ ಹುಡುಕಬೇಕು. ಯಾವ ತರಹದ ಜನರ ಜತೆಗೆ ಸಮಯ ಕಳೆಯಬೇಕು, ಬಿಡುಗಡೆಯ ಸಮಯದಲ್ಲಿ ಏನು ಮಾಡಬೇಕು, ಮಾದಕ ವಸ್ತು ಸೇವಿಸಲು ಉಪಯೋಗಿಸುತ್ತಿದ್ದ ಸಮಯದಲ್ಲಿ ಏನು ಮಾಡಬೇಕು, ವ್ಯಕ್ತಿಯು ತನ್ನ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾನೆ ಮತ್ತು ಯಾವ ಅಭಿಪ್ರಾಯ ಬೆಳೆಸಿಕೊಳ್ಳಬೇಕು ಇತ್ಯಾದಿ.

ಈ ತರಹದ ಬದಲಾವಣೆಗಳನ್ನು ತಂದುಕೊಂಡರೆ ತಾನು ಬದುಕುವುದು ಹೇಗೆ ಎನ್ನುವ ಸಂಶಯ ವ್ಯಕ್ತಿಯಲ್ಲಿ ಹುಟ್ಟಿಕೊಳ್ಳಲಾರಂಭಿಸುತ್ತದೆ. ಆದರೆ ಚಟದಿಂದ ಹೊರಬರುವ ವಿಧಾನ ಸ್ವಲ್ಪ ನಿಧಾನಗತಿಯದ್ದು ಮತ್ತು ಚಟಕ್ಕೊಳಗಾಗಿ ಗೊತ್ತಿರದೆ ವ್ಯಕ್ತಿಯು ತನಗೆ ತಿಳಿಯದೇನೆ ಹಲವಾರು ಬದಲಾವಣೆಗಳನ್ನು ತಂದುಕೊಂಡಿರುತ್ತಾನೆ. ಇವುಗಳಿಂದ ಹಿಮ್ಮರಳಿ ತನ್ನ ಸಹಜ ಜೀವನಶೈಲಿಗೆ ಮರಳುವ ಪ್ರಕ್ರಿಯೆಗೆ ಹೆಜ್ಜೆಯಿಡುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಎರಡನೇ ಹಂತ: ಲಭ್ಯವಿರುವ ಚಿಕಿತ್ಸಾ ವಿಧಾನಗಳನ್ನು ತಿಳಿದುಕೊಳ್ಳಬೇಕು

ವ್ಯಕ್ತಿಯು ಒಮ್ಮೆ ಮಾದಕವಸ್ತು ಬಿಡುವ ನಿರ್ಧಾರ ಮಾಡಿದಾಗ ತನಗೆ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ವಿವರವಾಗಿ ಅರಿತುಕೊಳ್ಳಬೇಕು. ಅನಂತರ ಚಿಕಿತ್ಸೆಯ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ಅವುಗಳೆಂದರೆ:

Advertisement

„ಎಲ್ಲ ಮಾದಕ ವಸ್ತುಗಳಿಗಾಗಿ ಒಂದೇ ತರಹದ ಚಿಕಿತ್ಸೆಯಿಲ್ಲ ಮತ್ತು ಎಲ್ಲ ವ್ಯಕ್ತಿಗಳಿಗೆ ಒಂದೇ ತರಹದ ಚಿಕಿತ್ಸೆ ಕೊಡಲಾಗುವುದಿಲ್ಲ. ವ್ಯಕ್ತಿಯ ಮಾದಕ ವಸ್ತುವಿಗೆ ತಕ್ಕಂತೆ ಮತ್ತು ಆತನ ಚಟದ ತೀವ್ರತೆಗೆ ತಕ್ಕಂತೆ ಚಿಕಿತ್ಸೆಯನ್ನು ನೀಡಲಾಗುತ್ತದೆ.

„ವ್ಯಕ್ತಿಯು ತನ್ನ ಚಿಕಿತ್ಸೆಯು ಕೇವಲ ಮಾದಕ ವಸ್ತುವಿನ ಚಟವನ್ನಲ್ಲದೆ ತನ್ನ ಜೀವನದ ಇತರ ತೊಂದರೆಗಳನ್ನು ಅರ್ಥೈಸಿಕೊಂಡು ಬಗೆಹರಿಸುವ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯಲು ಪ್ರಯತ್ನಿಸಬೇಕು.

„ಚಿಕಿತ್ಸೆಯ ಅವಧಿ ದೀರ್ಘ‌ಕಾಲದ್ದಾಗಿರಬಹುದು. ಆದರೆ ಅದು ವ್ಯಕ್ತಿಯ ಮಾದಕ ವಸ್ತುವಿನ ತೀವ್ರತೆಯ ಮೇಲೆ ಮತ್ತು ಅದರ ಜತೆಗಿರುವ ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಮೇಲೆ ನಿರ್ಭರವಾಗಿರಬಹುದು. ಆದುದರಿಂದ ಚಿಕಿತ್ಸೆಯ ಅವಧಿಯ ಬಗ್ಗೆ ಪೂರ್ವ ನಿರ್ಧಾರ ಮಾಡಿ ಚಿಕಿತ್ಸಾ ವೈದ್ಯರ ಮೆಲೆ ಒತ್ತಡ ಹೇರಬಾರದು. ಉದಾ: ನಾಲ್ಕೇ ದಿನಗಳಲ್ಲಿ ಚಿಕಿತ್ಸೆ ಮಾಡಿ ಕಳುಹಿಸಿ ಎಂದು ಒತ್ತಾಯ ಮಾಡುವುದು. ಇದರ ಬದಲಾಗಿ ವೈದ್ಯರು ಸೂಚಿಸಿದಷ್ಟು ದಿನ ದಾಖಲಾಗಿ ಚಿಕಿತ್ಸೆ ಪಡೆಯಬೇಕು.

„ವಿವಿಧ ಚಿಕಿತ್ಸಾ ಸಂಸ್ಥೆಗಳು ಲಭ್ಯವಿರುತ್ತವೆ. ವ್ಯಕ್ತಿಯು ಸಂಪೂರ್ಣ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಉದ್ದೇಶಿಸುವ ತನ್ನ ಚಿಕಿತ್ಸೆಗೆ ಸೂಕ್ತವಾದ ಸಂಸ್ಥೆಯನ್ನು ಆರಿಸಿಕೊಳ್ಳಬಹುದು.

ಗಮನದಲ್ಲಿಡಿ: ಎಲ್ಲ ಮಾದಕ ವಸ್ತುಗಳು ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಉಂಟುಮಾಡುತ್ತವೆ. ಹಾಗಾಗಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಸೌಲಭ್ಯವಿರುವ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸುವುದು ಸೂಕ್ತ.

ಈ ತರಹ ಚಿಕಿತ್ಸೆಗಾಗಿ ದಾಖಲಾದಾಗ ವ್ಯಕ್ತಿಯ ಕಾಯಿಲೆಗೆ ತಕ್ಕಂತೆ ಚಿಕಿತ್ಸೆ ನೀಡಲಾಗುತ್ತದೆ.

ಮೂರನೇಯ ಹಂತ: ಸಹಾಯ ಪಡೆಯುವುದಕ್ಕಾಗಿ ಮುಂದೆ ಬರುವುದು

ಮಾದಕ ವಸ್ತು ಚಟ ಚಿಕಿತ್ಸೆ ಪಡೆದು ಮುಂದುವರಿಯುವಾಗ ಒಬ್ಬರೇ ಮುನ್ನುಗ್ಗದೆ ವ್ಯಕ್ತಿಯು ತನ್ನ ಸಮರ್ಥನೆಗಾಗಿ ತನ್ನ ಎಲ್ಲ ಸಹಕಾರ ಗುಂಪುಗಳನ್ನು ಒಟ್ಟುಗೂಡಿಸುವುದರಿಂದ ವ್ಯಕ್ತಿಯ ಬದಲಾವಣೆಗೆ ಹೆಚ್ಚಿನ ಸಹಕಾರ ದೊರೆತು ಆ ಗುರಿ ಪುಷ್ಟೀಕರಣಗೊಳ್ಳುತ್ತದೆ.

-ವ್ಯಕ್ತಿಯು ತನ್ನ ಕುಟುಂಬದ ಮತ್ತು ಸ್ನೇಹಿತರ ಸಹಾಯ ಪಡೆದುಕೊಳ್ಳಬೇಕು. ಅವರೊಂದಿಗೆ ಮನಸ್ತಾಪವಾಗಿದ್ದರೆ ಸಂಬಂಧ ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು ಮತ್ತು ತನ್ನ ಚಟ ನಿಲ್ಲಿಸುವ ನಿರ್ಧಾರಕ್ಕೆ ಸಹಕರಿಸುವಂತೆ ಕೇಳಿಕೊಳ್ಳಬಹುದು. ಇದಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಚಿಕಿತ್ಸಕರು ಹೇಳಿಕೊಡುತ್ತಾರೆ.

-ವ್ಯಕ್ತಿಯು ತನ್ನ ಹಳೆಯ ಮಾದಕ ವಸ್ತುಗಳ ಗೆಳೆಯರ ಗುಂಪನ್ನು ಬಿಟ್ಟು ರಚನಾತ್ಮಕ ಕ್ರಿಯಾಶೀಲ ವ್ಯಕ್ತಿಗಳ ಗುಂಪಿಗೆ ಸೇರಿ ಅವರೊಟ್ಟಿಗೆ ಒಡನಾಟ ಬೆಳಸಿಕೊಳ್ಳಲು ಪ್ರಯತ್ನಿಸಬೇಕು.

ಈ ರೀತಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರಿಂದ ಮಾದಕ ವಸ್ತುವಿನ ಬಳಕೆ ಪುನಃ ಪ್ರಾರಂಭಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ನಾಲ್ಕನೇಯ ಹಂತ: ಒತ್ತಡದ ಸನ್ನಿವೇಶಗಳನ್ನು ಆರೋಗ್ಯಕರ ರೀತಿಯಲ್ಲಿ ಬಗೆಹರಿಸಲು ಕಲಿತುಕೊಳ್ಳುವುದು

ಮಾದಕ ವಸ್ತುಗಳ ಚಟದ ಚಿಕಿತ್ಸೆಯ ಅನಂತರ ಸಹಜ ಜೀವನ ನಡೆಸುವಾಗ ಒತ್ತಡದ ಸನ್ನಿವೇಶಗಳು ಬರುವುದು ಸಹಜ. ಆದರೆ ವ್ಯಕ್ತಿಯು ತನ್ನ ಹಳೆಯ ಜೀವನದಲ್ಲಿ ಮಾಡಿದ ಹಾಗೆ ಮತ್ತೆ ಮಾದಕ ವಸ್ತುವಿನ ಚಟಕ್ಕೊಳಗಾಗುತ್ತಾನೆ. ಇದರ ಸಲುವಾಗಿ ಇವುಗಳನ್ನು ಎದುರಿಸಲು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು.

ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯೋಗ, ಧ್ಯಾನ, ವಿಶ್ರಮಿಸುವ ವಿಧಾನಗಳನ್ನು ಕಲಿಯುವುದು, ದೀರ್ಘ‌ ಉಸಿರಾಟದ ವ್ಯಾಯಾಮಗಳನ್ನು ಮಾಡುವುದು, ತನ್ನ ಋಣಾತ್ಮಕ ಆಲೋಚನೆಗಳನ್ನು ತರ್ಕಕ್ಕೆ ಹಚ್ಚಿ ಅವುಗಳ ಸತ್ಯಾಸತ್ಯತೆಯನ್ನು ಅರ್ಥೈಸಿಕೊಳ್ಳುವುದು. ಇವುಗಳಲ್ಲದೆ ದಿನಾ ವಾಕಿಂಗ್‌ ಹೋಗುವುದು, ಕುಟುಂಬದವರ ಜತೆಗೆ ಸಮಯ ಕಳೆಯುವುದು, ಮನಸ್ಸಿಗೆ ಸಂತೋಷ ನೀಡುವ ಕೆಲಸಗಳನ್ನು/ ಹವ್ಯಾಸಗಳನ್ನು ಮಾಡುವುದು, ಹಳೆಯ ಒಳ್ಳೆಯ ನೆನಪುಗಳನ್ನು ಮೆಲುಕು ಹಾಕುವುದು ಇತ್ಯಾದಿ.

ಐದನೆಯ ಹಂತ: ಮಾದಕ ವಸ್ತುಗಳ ತವಕವನ್ನು ಪ್ರಚೋದಿಸುವ ಸನ್ನಿವೇಶಗಳಿಂದ ದೂರವಿರುವುದು

„ಹಳೆಯ ಮಾದಕ ವಸ್ತುಗಳ ಸ್ನೇಹಿತರ ಗುಂಪಿನಿಂದ ದೂರವಿರುವುದು „ಬಾರ್‌ಗಳಿಗೆ/ ಕ್ಲಬ್‌ಗಳಿಗೆ/ ಮದ್ಯದಂಗಡಿಗಳಿಗೆ ಹೋಗುವುದನ್ನು ನಿಲ್ಲಿಸಬೇಕು „ತನ್ನ ಮಾದಕ ವಸ್ತುವಿನ ಸಂಗತಿಯ ಬಗ್ಗೆ ನಾಚಿಕೆ ಪಡಬೇಕಾಗಿಲ್ಲ

ಮಾದಕ ವಸ್ತುವನ್ನು ಉಪಯೋಗಿಸುವ ತವಕ/ ಆಸೆ ಬಂದಾಗ ಅದನ್ನು ತಡೆಗಟ್ಟಲು ಕೈಗೊಳ್ಳಬಹುದಾದ ಕ್ರಮಗಳು

„ಗಮನ ಬೇರೆ ಕಡೆ ಹೋಗುವಂತೆ ಚಟುವಟಿಕೆಗಳನ್ನು ಮಾಡುವುದು: ಪುಸ್ತಕ ಓದುವುದು, ಚಲನಚಿತ್ರ ವೀಕ್ಷಣೆಗೆ ತೆರಳುವುದು, ತನ್ನ ಹವ್ಯಾಸದಲ್ಲಿ ತೊಡಗುವುದು, ವ್ಯಾಯಾಮ ಮಾಡಲು/ ಆಟ ಆಡಲು ಹೋಗುವುದು, ಹಣ್ಣು ಅಥವಾ ಜ್ಯೂಸ್‌ ಕುಡಿಯುವುದು ಇತ್ಯಾದಿ.

„ಆಸೆ ಬಂದಾಗ ಅದರ ಬಗ್ಗೆ ಕುಟುಂಬದವರ ಜತೆಗೆ ಅಥವಾ ಸ್ನೇಹಿತರ ಜತೆಗೆ ಮಾತನಾಡುವುದು.

„ಆಸೆ ಬಂದಾಗ ಮಾದಕ ವಸ್ತುವಿನಿಂದಾಗಿ ಹಿಂದೆ ಆದ ಅಹಿತಕರ ಘಟನೆಗಳನ್ನು ನೆನಪಿಸಿಕೊಳ್ಳುವುದು.

ಆರನೆಯ ಹಂತ: ಮಾದಕ ವಸ್ತುರಹಿತ ಅರ್ಥಪೂರ್ಣ ಜೀವನ ಆರಂಭಿಸುವುದು

„ಯಾವುದೋ ಒಂದು ತಮಗೆ ಇಷ್ಟವಾಗುವ ಹೊಸ ಹವ್ಯಾಸವನ್ನು ಬೆಳೆಸಿಕೊಳ್ಳುವುದು

„ಹೆಚ್ಚಾಗಿ ತಮ್ಮ ಸಮಾಜದಲ್ಲಾಗುವ ಸಾಂಸ್ಕೃತಿಕ/ ಮನೋರಂಜನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು

„ನಿಯಮಿತವಾಗಿ ಉತ್ತಮ ಆಹಾರ, ವ್ಯಾಯಾಮ, ಉತ್ತಮ ಹವ್ಯಾಸಗಳನ್ನು ಪಾಲಿಸುವುದು

„ತನ್ನ ಜೀವನಕ್ಕೆ ಅರ್ಥಪೂರ್ಣ ಗುರಿಗಳನ್ನು ನಿರ್ಧರಿಸುವುದು ಮತ್ತು ಅವುಗಳ ಸಲುವಾಗಿ ಕೆಲಸ ಮಾಡುವುದು

ಮಾದಕ ವಸ್ತುಗಳ ಉಪಯೋಗ ಮತ್ತು ಮಾನಸಿಕ ಕಾಯಿಲೆಗಳು

ಮಾದಕ ವಸ್ತುಗಳ ಉಪಯೋಗಿಗಳಲ್ಲಿ ಮಾನಸಿಕ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ವ್ಯಕ್ತಿಗಳು ಖನ್ನತೆಗೊಳಗಾಗಬಹುದು. ವಿವಿಧ ಗಾಬರಿ ಕಾಯಿಲೆಗಳಿಂದ ಬಳಲಬಹುದು. ಕೆಲವೊಮ್ಮೆ ನೆನಪಿನ ಶಕ್ತಿಯ ನ್ಯೂನ್ಯತೆಯಿಂದ ಬಳಲಬಹುದು. ಕೆಲವೊಮ್ಮೆ ಚಿತ್ತಭ್ರಮೆಯಾಗಿ ವಿಚಿತ್ರ ಅನುಭವಗಳನ್ನು ಅನುಭವಿಸಬಹುದು. ಇವೆಲ್ಲವುಗಳಿಗೆ ಚಿಕಿತ್ಸೆ ಲಭ್ಯವಿದೆ.

ಮಾದಕ ವಸ್ತುಗಳ ಉಪಯೋಗ ಒಂದು ಜಟಿಲವಾದ ಕಾಯಿಲೆಯಾಗಿದೆ. ಯಾಕೆಂದರೆ ಇದರ ಉಗಮಕ್ಕೆ, ಉಳಿವಿಗೆ ಕೇವಲ ವ್ಯಕ್ತಿಯಲ್ಲದೆ ಆತನ ಕುಟುಂಬ, ಸಮಾಜವೂ ಕೂಡ ಕಾರಣವಾಗಿವೆ ಹಾಗೂ ಇದು ನಡವಳಿಕೆಯ ಒಂದು ಭಾಗವಾಗಿದ್ದು, ವ್ಯಕ್ತಿಯು ಇದನ್ನು ಕಾಯಿಲೆಯೆಂದು ಪರಿಗಣಿಸುವುದಿಲ್ಲ. ಇದರ ಮೇಲೆ ಸಮಾಜದಲ್ಲಿ ಹರಡಿರುವ ನಾನಾ ರೀತಿಯ ತಪ್ಪು ನಂಬಿಕೆಗಳಿಂದಾಗಿ ವ್ಯಕ್ತಿಯು ಚಿಕಿತ್ಸೆಗೆ ಬರಲು ವಿಳಂಬವಾಗುತ್ತದೆ, ಕೆಲವೊಮ್ಮೆ ಚಿಕಿತ್ಸೆಗೆ ಬರುವುದೇ ಇಲ್ಲ. ಮಾದಕ ವಸ್ತುಗಳು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತವೆಯಲ್ಲದೆ ಅವುಗಳ ದುಷ್ಪರಿಣಾಮ ವ್ಯಕ್ತಿಯ ಕುಟುಂಬ, ಸಮಾಜ, ಉದ್ಯೋಗ, ಹಣಕಾಸಿನ ಮೇಲೆಯೂ ಆಗುತ್ತದೆ. ಇದು ಇತ್ತೀಚೆಗಿನ ದಿನಗಳಲ್ಲಿ ಒಂದು ಬೃಹತ್‌ ಮಾರುಕಟ್ಟೆಯಾಗಿ ಬೆಳೆದುನಿಂತಿದೆ. ಈ ಸಮಸ್ಯೆಗಳಿಗೆ ಚಿಕಿತ್ಸೆಯಿದ್ದು, ಇವುಗಳಿಗಾಗಿ ವ್ಯಕ್ತಿ ಮಾತ್ರವಲ್ಲದೆ ಆತನ ಕುಟುಂಬ, ಸ್ನೇಹಿತರು ಮತ್ತು ಸಮಾಜದ ಸಹಕಾರ ಅತ್ಯಗತ್ಯ. ಆದರೆ ಇಷ್ಟೆಲ್ಲ ತೊಂದರೆ ಅನುಭವಿಸುವುದಕ್ಕಿಂತ ಸೂಕ್ತ ಕ್ರಮವೆಂದರೆ, ಇವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು, ಮುಂಜಾಗ್ರತೆಯ ಕ್ರಮವಾಗಿ ಸಮಾಜದ ಎಲ್ಲರಿಗೂ ನೀಡುವುದು.

ಮಾದಕ ವಸ್ತುಗಳ ಚಟದ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮನೋರೋಗ ಚಿಕಿತ್ಸಾ ವಿಭಾಗದಲ್ಲಿ ಪ್ರತ್ಯೇಕ ಘಟಕವನ್ನು ಮಾಡಲಾಗಿದೆ. ಪ್ರತೀ ಬುಧವಾರ ಮತ್ತು ಶನಿವಾರ (ಮೂರನೇ ಶನಿವಾರ ಹೊರತುಪಡಿಸಿ) ಮನೋರೋಗ ಚಿಕಿತ್ಸಾ ವಿಭಾಗದ ಒ.ಪಿ.ಡಿ.ಯಲ್ಲಿ ನುರಿತ ತಜ್ಞ ಮನೋವೈದ್ಯರು ಲಭ್ಯರಿರುತ್ತಾರೆ ಹಾಗೂ ಅಡ್ಮಿಶನ್‌ ಸೌಲಭ್ಯ ಕೂಡ ಇರುತ್ತದೆ.

ಬದಲಾವಣೆಯ ಸಿದ್ಧತೆಗೆ ಪಂಚ ಸೂತ್ರಗಳು

  1. ವ್ಯಕ್ತಿಯು ತಾನು ಬದಲಾವಣೆಯಾಗಲು ಇರುವ ಕಾರಣಗಳನ್ನು ತನ್ನಷ್ಟಕ್ಕೆ ತಾನೇ ಹೇಳಿಕೊಂಡು ನೆನಪಿಸಿಕೊಳ್ಳುತ್ತಿರಬೇಕು.
  2. ತಾನು ಕಳೆದ ಸಲ ಚಟದಿಂದ ಹೊರಬರಲು ಪ್ರಯತ್ನಿಸಿದಾಗ ಉಂಟಾದ ತೊಡಕುಗಳನ್ನು ನೆನಪಿಸಿಕೊಳ್ಳಬೇಕು ಮತ್ತು ಯಾವ ವಿಧಾನ ಉಪಯೋಗವಾಯಿತು, ಯಾವ ವಿಧಾನ ಉಪಯೋಗವಾಗಲಿಲ್ಲ ಎಂದು ಅವಲೋಕಿಸಬೇಕು.
  3. ವ್ಯಕ್ತಿಯು ಮಾದಕ ವಸ್ತುವಿನ ಉಪಯೋಗ ಬಿಡುವ ದಿನವನ್ನು ನಿಗದಿಪಡಿಸಿಕೊಳ್ಳಬೇಕು.
  4. ವ್ಯಕ್ತಿಯು ತನಗೆ ತನ್ನ ಚಟವನ್ನು ನೆನಪಿಸುವ ವಸ್ತು/ ಸನ್ನಿವೇಶಗಳನ್ನು ಅಳಿಸಬೇಕು ಅಥವಾ ಅವುಗಳಿಂದ ದೂರವಿರಬೇಕು.
  5. ವ್ಯಕ್ತಿಯು ತನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ, ತಾನು ಮಾದಕ ವಸ್ತುವಿನ ಉಪಯೋಗವನ್ನು ನಿಲ್ಲಿಸುವ ನಿರ್ಧಾರವನ್ನು ಅವರಿಗೆ ತಿಳಿಸಬೇಕು ಮತ್ತು ಅವರಿಗೆ ಈ ಕಾರ್ಯದಲ್ಲಿ ಸಹಕರಿಸಲು ಕೇಳಿಕೊಳ್ಳಬೇಕು.

ಬದಲಾವಣೆಯ ಬಗ್ಗೆ ಆಲೋಚಿಸುವುದು

„ವ್ಯಕ್ತಿಯು ಉಪಯೋಗಿಸುತ್ತಿರುವ ಮಾದಕ ವಸ್ತುವಿನ ಬಗ್ಗೆ ಮಾಹಿತಿಯನ್ನಿಟ್ಟುಕೊಳ್ಳಬೇಕು: ಯಾವ ವಸ್ತು, ಎಷ್ಟು ಪ್ರಮಾಣದಲ್ಲಿ, ಎಷ್ಟು ಸಲ ಬಳಸುತ್ತಿರುವುದು. ಇವುಗಳ ಮಾಹಿತಿಯು ವ್ಯಕ್ತಿಯ ಜೀವನದಲ್ಲಿ ಚಟ ಎಷ್ಟರ ಮಟ್ಟಿಗೆ ಮಹತ್ವದ ಪಾತ್ರ ವಹಿಸುತ್ತಿದೆ ಎನ್ನುವುದು ವ್ಯಕ್ತಿಗೆ ತಾನಾಗಿಯೇ ಅರಿವಾಗುತ್ತದೆ.

„ಮಾದಕ ವಸ್ತುಗಳ ಉಪಯೋಗದಿಂದ ಆಗುವ ಲಾಭ ಮತ್ತು ಹಾನಿಗಳನ್ನು ವ್ಯಕ್ತಿಯು ಬರೆಯಬೇಕು. ಅನಂತರ ಮಾದಕ ವಸ್ತು ನಿಲ್ಲಿಸುವುದರಿಂದ ಆಗುವ ಲಾಭ ಮತ್ತು ಹಾನಿಗಳನ್ನು ಬರೆಯಬೇಕು. ಅನಂತರ ಇವೆರಡನ್ನು ಹೋಲಿಸಿ ನೋಡಬೇಕು.

„ವ್ಯಕ್ತಿಯು ತನ್ನ ಜೀವನದಲ್ಲಿ ಮುಖ್ಯ ಪಾತ್ರವಹಿಸುವ ವಿಷಯಗಳ ಬಗ್ಗೆ ಆಲೋಚಿಸಿ ಬರೆಯಬೇಕು. ಉದಾ: ಹೆಂಡತಿ, ಮಕ್ಕಳು, ಕುಟುಂಬ, ಆರೋಗ್ಯ, ವಿದ್ಯಾಭ್ಯಾಸ, ಕೆಲಸ, ಸ್ನೇಹಿತರು, ಸಮಾಜ, ಹಣಕಾಸು. ಅನಂತರ ಮಾದಕ ವಸ್ತುಗಳ ಚಟದಿಂದಾಗಿ ಈ ಎಲ್ಲ ವಿಷಯಗಳಲ್ಲಿ ಹೇಗೆ ತೊಂದರೆಗಳುಂಟಾಗಿವೆ ಎಂದು ಅವಲೋಕಿಸಬೇಕು ಮತ್ತು ಸಾಧ್ಯವಾದರೆ ಬರೆದಿಡಬೇಕು.

„ ವ್ಯಕ್ತಿಯು ತನ್ನ ನಂಬಿಕಸ್ಥರಲ್ಲಿ ಈ ವಿಷಯದ ಬಗ್ಗೆ ಮಾತಾಡಬೇಕು ಮತ್ತು ತನ್ನ ಚಟದ ಬಗ್ಗೆ ಅವರಿಗೆ ಏನನ್ನಿಸುತ್ತದೆಯೆಂದು ಕೇಳಿ ತಿಳಿದುಕೊಳ್ಳಬೇಕು.

„ ಇವೆಲ್ಲವುಗಳ ಅನಂತರ ವ್ಯಕ್ತಿಯು ತಾನು ಬದಲಾವಣೆಯಾಗುವುದಕ್ಕೆ ಅಡ್ಡಗೋಲಾಗಿರುವ ವಿಷಯಗಳೇನೆಂದು ಗುರುತಿಸಬೇಕು.

-ಡಾ| ರವೀಂದ್ರ ಮುನೋಳಿ, ಸಹ ಪ್ರಾಧ್ಯಾಪಕರು, ಮನೋರೋಗ ಚಿಕಿತ್ಸಾ ವಿಭಾಗ, ಕೆ.ಎಂ.ಸಿ., ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮನೋರೋಗ ಚಿಕಿತ್ಸಾ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

 

Advertisement

Udayavani is now on Telegram. Click here to join our channel and stay updated with the latest news.

Next