Advertisement

Wayanad; ಲಯನಾಡಿನಲ್ಲಿ ಕಣ್ಣೀರಿನ ಓಣಂ, ಈದ್‌!

09:59 AM Sep 16, 2024 | Team Udayavani |

ಅಲ್ಲಿ ಇದ್ದೊಂದು ಶಿವ ದೇಗುಲದ ಅಡಿಪಾಯವಷ್ಟೇ ಕಾಣುತ್ತಿದೆ. ಇಂದು ಓಣಂ. ಆಚರಿಸಲು ಊರವರೇ ಇಲ್ಲ. ಅರ್ಚಕನ ಸಮೇತ ಕೊಚ್ಚಿಹೋದ ದೇಗುಲದ ಅವಶೇಷ ಸುತ್ತಲಿನ ಪ್ರದೇಶ ಶುಚಿಗೊಳಿಸಿದ ಕೆಲವರು ಅಲ್ಲೇ ದೀಪ ಹಚ್ಚಿ, ರಂಗೋಲಿ ಬಿಡಿಸಿ ಪೂಜೆ ಮಾಡಿ ಸಂಪ್ರದಾಯ ಪಾಲಿಸಿದ್ದಾರೆ… ಅಲ್ಲೊಂದು ಇಗರ್ಜಿ ಇದೆ. ಇಂದು ಭಾನುವಾರ. ಎಂದಿನಂತಾಗಿದ್ದರೆ ಸಾಮೂಹಿಕ ಪ್ರಾರ್ಥನೆ ನಡೆಯಬೇಕಿತ್ತು. ಆರು ವಾರಗಳಿಂದ ಅದೂ‌ ನಡೆಯುತ್ತಿಲ್ಲ… ಅಲ್ಲಿ ಮಸೀದಿಗಳಿವೆ. ಅವುಗಳಿಂದ ಆಜಾನ್ ಮೊಳಗುತ್ತಿಲ್ಲ. ನಾಳೆ ಈದ್ ಮಿಲಾದ್. ಅದರ ಸಂಭ್ರಮವೂ ಇಲ್ಲ… ಜನರಿದ್ದರೆ ತಾನೆ ಈ ಎಲ್ಲ ಸಂಭ್ರಮ?

Advertisement

ಕೇರಳದ ಮಲೆನಾಡು ಪ್ರದೇಶ ವಯನಾಡು ಜಿಲ್ಲೆಯ ಚೂರಲ್‌ಮಲ ಹಾಗೂ ಮುಂಡಕ್ಕೈ ಗ್ರಾಮಗಳನ್ನು ನಾಮಾವಶೇಷ ಮಾಡಿದ ಭೀಕರ ಭೂಕುಸಿತ ದುರಂತಕ್ಕೆ ಇದೀಗ 45 ದಿನ. ಮೊನ್ನೆ ಜುಲೈ 29ರ ಕರಾಳರಾತ್ರಿ ಅಲ್ಲಿಗೆ ಅಪ್ಪಳಿಸಿದ್ದು ಕಂಡುಕೇಳರಿಯದ ಪ್ರಳಯ. ಪುಂಜರಿಮಲ ಬೆಟ್ಟ ಪ್ರದೇಶದಲ್ಲಿ ಹತ್ತು ದಿನಗಳ ಎಡೆಬಿಡದ ಮಳೆಯ ಫಲವಾಗಿ ವೆಳ್ಳರಿಪಾರ ಕಾಡಿನ ಒಂದು ಭಾಗವೇ ಕುಸಿದು, ಅರುಣಪುಳ ಹೊಳೆಯಲ್ಲಿ ಮರ, ಬಂಡೆ, ಕೆಸರು ಕೊಚ್ಚಿಕೊಂಡು ಬಂದು ಮೊದಲಿಗೆ ಮುಂಡಕ್ಕೈ, ಬಳಿಕ ಚೂರಲ್‌ಮಲ ಊರನ್ನೇ ಆಪೋಶನ ತೆಗೆದುಕೊಂಡಿತು. ಈವರೆಗೆ ಲೆಕ್ಕಕ್ಕೆ ಸಿಕ್ಕಿದ್ದು 350 ಸಾವು. ನಾಪತ್ತೆಯಾದವರ ಅಧಿಕೃತ ಸಂಖ್ಯೆ 70ರ ಆಸುಪಾಸು. ಚಹಾ ತೋಟದಲ್ಲಿ ಕೆಲಸ ಮಾಡುತ್ತಾ ಅಲ್ಲೇ ನೆಲೆಸಿದ್ದ, ಲೆಕ್ಕಕ್ಕೆ ಸಿಗದ ಉತ್ತರ ಭಾರತೀಯರ ಸಂಖ್ಯೆ ಅದೆಷ್ಟೋ. ಯಾರಿಗೂ ಗೊತ್ತಿಲ್ಲ. ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾದವರು 5000ಕ್ಕೂ ಹೆಚ್ಚು ಜನ. ಇದೆಲ್ಲ ಆಗಿ ಆರು ವಾರಗಳು ಕಳೆದರೂ ಆ ಊರುಗಳಿನ್ನೂ ಬದುಕು ಮೊಳೆತಿಲ್ಲ. ಸದ್ಯಕ್ಕೆ ಆ ಯಾವ ಲಕ್ಷಣವೂ ಕಾಣುತ್ತಿಲ್ಲ. ಊರಿಗೆ ಊರೇ ಕಳಾಹೀನ. ಭಗ್ನಗೊಂಡ 100ಕ್ಕೂ ಹೆಚ್ಚು‌ ಮನೆ, ಹತ್ತಾರು ಅಂಗಡಿಗಳು, ಎರಡು ಶಾಲೆ, ಅನೇಕ ಸರ್ಕಾರಿ ಕಚೇರಿಗಳು, ನೂರಾರು ವಾಹನಗಳ ಅವಶೇಷಗಳು, ಬೆಟ್ಟದಿಂದ ಉರುಳಿಬಂದ ಹೆಬ್ಬಂಡೆಗಳು, ಅವುಗಳಿಗೆ ಸಿಲುಕಿ ಕೊಚ್ಚಿ ಬಂದ ಸಹಸ್ರಾರು ಮರಗಳು, ನೋಡಿಕೊಳ್ಳುವವರಿಲ್ಲದೆ ಅನಾಥವಾಗಿ ನಿಂತ ಚಹಾ ತೋಟಗಳಷ್ಟೇ ಈಗ ಆ ಊರುಗಳ ಅಸ್ತಿತ್ವ.

24×7 ಸರ್ಕಾರಿ ಕಣ್ಗಾವಲಿನಲ್ಲಿ ಚೂರಲ್‌ಮಲ, ಮುಂಡಕ್ಕೈ
ವಯನಾಡಿನಿಂದ ದಕ್ಷಿಣಕ್ಕೆ 25 ಕಿಮೀ ದೂರದಲ್ಲಿದೆ ಮೇಪ್ಪಾಡಿ. ಅಲ್ಲಿಂದ ಚೂರಲ್‌ಮಲಕ್ಕೆ 8 ಕಿ.ಮೀ. ಇನ್ನೂ 5 ಕಿ.ಮೀ. ಮುಂದಕ್ಕೆ ಮುಂಡಕ್ಕೈ. ಊರು ಅಲ್ಲಿಗೆ ಕೊನೆ. ಅದರಿಂದಾಚೆ ಒಂದಷ್ಟು ಚಹಾ ತೋಟ. ಇನ್ನೂ ಆಚೆ ಕಾಡು, ಬೆಟ್ಟ. ಇದೀಗ ನಾಮಾವಶೇಷಗೊಂಡ ಈ ಎರಡು ಹಳ್ಳಿಗಳಲ್ಲಿ ಯಾರೂ ಇಲ್ಲ. ಅಲ್ಲಿನ ಚಹಾ ತೋಟಗಳೂ ಬಿಕೋ ಬಿಕೋ. ಚೂರಲ್‌ಮಲ ಗ್ರಾಮದ ಪ್ರವೇಶದಲ್ಲೇ ಪೊಲೀಸ್, ಕಂದಾಯ ಇಲಾಖೆ ಇತ್ಯಾದಿ ಸರ್ಕಾರಿ ಅಧಿಕಾರಿಗಳ‌ ದಂಡು ಕಾವಲು ಕಾಯುತ್ತಿದೆ. ನಿರ್ವಸಿತರಾದವರು ಅಕ್ಕಪಕ್ಕದೂರಿನ ಕಟ್ಟಡಗಳಲ್ಲಿ ಬಾಡಿಗೆಗೆ ಇದ್ದಾರೆ. ಆಗಾಗ್ಗೆ ಬಂದು ಅಳಿದುಳಿದ ವಸ್ತುಗಳಿಗೆ ಶೋಧ ನಡೆಸುತ್ತಾರೆ. ಹೊಸ ಬದುಕು ಹೇಗೋ ಇನ್ನೂ ಗೊತ್ತಿಲ್ಲ. ದುರಂತ ವೀಕ್ಷಣೆಗೆ ಭೇಟಿ ಮಾಡುವ ನೆಪದಲ್ಲಿ ಬರುವ ಕೆಲವರು ಪಳೆಯುಳಿಕೆ ಕಟ್ಟಡಗಳಿಂದ ಸಿಕ್ಕಿದ್ದನ್ನು ಕದ್ದೊಯ್ಯುವುದೂ ಉಂಟಂತೆ. ಹಾಗಾಗಿ, ಚೂರಲ್‌ಮಲ ಊರ ಹೆಬ್ಬಾಗಿಲಲ್ಲೇ ಚೆಕ್ ಪೋಸ್ಟ್ ಹಾಕಲಾಗಿದೆ. ಅಲ್ಲಿ ಪೊಲೀಸರ ಹದ್ದಿನ ಕಣ್ಣಿನ ಕಾವಲಿದೆ. ಕೇರಳ‌ ಪೊಲೀಸರು ಸ್ವಲ್ಪ ಬಿಗಿಯೇ. ಚೆಕ್‌ಪೋಸ್ಟಿಗೂ 200 ಮೀ. ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ಏನು-ಎತ್ತ ವಿಚಾರಿಸಿಯೇ ಚೂರಲ್‌ಮಲ ಪ್ರವೇಶಿಸಲು ಪಾಸ್ ನೀಡುತ್ತಾರೆ. ಈಗ ಎರಡು ದಿನಗಳಿಂದ ಅದೂ ಇಲ್ಲ. ಚೂರಲ್‌ಮಲ ಅಥವಾ ಮುಂಡಕ್ಕೈ ನಿವಾಸಿಗಳಿಗೂ ಪಾಸ್ ಇದ್ದರಷ್ಟೇ ಪ್ರವೇಶ. ರಜೆ ದಿನ ಹೊರಗಿನಿಂದ ಬರುವ ಜನಜಾತ್ರೆ ನೆರೆಯುತ್ತದೆ ಎಂಬ ಕಾರಣಕ್ಕೆ ಈ ಕ್ರಮವಂತೆ. ಶನಿವಾರ ಬಂದಿದ್ದ ಸ್ಥಳೀಯ ಮಾತೃಭೂಮಿ, ಮನೋರಮಾ ಮಾಧ್ಯಮ ತಂಡಗಳನ್ನೇ ನಿರ್ದಾಕ್ಷಿಣ್ಯವಾಗಿ ವಾಪಸ್ ಕಳಿಸಿದ್ದಾರಂತೆ. ನಾನು ಇದಕ್ಕಾಗಿಯೇ ಬೆಂಗಳೂರಿನಿಂದ ಬಂದಿದ್ದೇನೆ ಎಂದರೂ ಕಂದಾಯ ಅಧಿಕಾರಿಗಳು ಪಾಸ್ ನೀಡಲು ಸುತರಾಂ ಒಪ್ಪಲಿಲ್ಲ. ಚೆಕ್‌ಪೋಸ್ಟ್ ದಾಟಲು ಪೊಲೀಸರು ಬಿಡಲಿಲ್ಲ. ಗುರುತಿನ ಚೀಟಿ ತೋರಿಸಿದರೂ “ಪಾಸ್ ಕೊಂಡು ವಾ…” ಎಂದು ಹಿಂದಕ್ಕಟ್ಟಿದರು. ಕಡೆಗೆ ಅದು ಹೇಗೋ ಗಿಟ್ಟಿಸಿಕೊಂಡೆ. ಸಾಧ್ಯವಿದ್ದಷ್ಟು ಕಡೆ ಸುತ್ತಾಡಿದೆ.

Advertisement

ಆ ಎರಡೂ ಊರಿಗೆ ನುಸುಳಿ ಬೀಭತ್ಸದ ದರ್ಶನ ಪಡೆದೆ. ಎದುರಿಗೆ ಸಿಕ್ಕ ಬೆರಳೆಣಿಕೆಯ ಜನರನ್ನು ಮಾತನಾಡಿಸಿದೆ. ಯಾರಿಗೂ ಹೇಳಿಕೊಳ್ಳುವ ಮನಸ್ಸಾಗಲಿ, ಉತ್ಸಾಹವಾಗಲಿ ಇರಲಿಲ್ಲ. ಬಹುಶಃ ಈಗಾಗಲೇ ನೂರಾರು ಸಂದರ್ಶನಗಳು ಆಗಿ ಹೋಗಿ ರೇಜಿಗೆ ಹುಟ್ಟಿರಬಹುದು ಅವರಿಗೆ. ಆದರೂ ಬಿಡದೆ ಒಂಚೂರು ಪ್ರತಿಸ್ಪಂದನೆ ತೋರಿದವರನ್ನು ಮಾತನಾಡಿಸಿದೆ. ಕಾರ್ಯನಿಮಿತ್ತ ಪರವೂರ ನಿವಾಸಿಯಾಗಿರುವ ಜೆನೀಶ್ ಎಂಬ ಯುವಕನೊಬ್ಬ ತನ್ನ ಮನೆಯಿದ್ದ ಜಾಗವೆಂಬ ಶೂನ್ಯದತ್ತ ದೃಷ್ಟಿ ನೆಟ್ಟಿದ್ದ. ಹುಟ್ಟಿ ಬೆಳೆದ ಊರು ನಾಮಾವಶೇಷ ಆದ ಮೇಲೆ ಮೊದಲ ಬಾರಿಗೆ ಅವನಲ್ಲಿಗೆ ಬಂದಿದ್ದ. ನೋವು ಮಡುಗಟ್ಟಿದ್ದ ಅವನ ಕಣ್ಣುಗಳು ಕೆಂಪಡರಿದ್ದವು. ವೇದನೆ ಮರೆಯಲು ಮದ್ಯ ಸೇವಿಸಿದ್ದೇನೆ ಎಂದಾತನೇ ನಿವೇದಿಸಿಕೊಂಡ. ಮೊದಲ ಮಹಡಿವರೆಗೂ ತುಂಬಿದ್ದ ಹೂಳನ್ನು ಈಗಷ್ಟೇ ಜೆಸಿಬಿ ಬಳಸಿ‌ ತೆಗೆಸಿ ಏನು ಉಳಿದಿದೆ ಎಂದು ಹುಡುಕಾಡುತ್ತಿದ್ದ ಬೆಂಗಳೂರು‌ ನಿವಾಸಿ ಶಾಹೀನ್ ಎರಡೇ ಎರಡು ಮಾತನಾಡಿ ಸುಮ್ಮನಾದ. ಉಳಿದವರ ಸೇವೆಗೆಂದು ತ್ರಿಶ್ಶೂರಿಂದ ಬಂದ ನಿವೃತ್ತ ಬ್ಯಾಂಕ್ ಉದ್ಯೋಗಿ ಜೋಸೆಫಿನ್‌ ಮಾತ್ರ ಮಾತಾಡುತ್ತಲೇ ಇದ್ದರು. ಅವರಿಗೆ ಕಳೆದ 18 ದಿನಗಳಲ್ಲಿ ಕಂಡದ್ದೆಲ್ಲವನ್ನೂ ಹೇಳಿಕೊಳ್ಳುವಾಸೆ. ನನಗೆ ಬಂದವರ ಕತೆ ಬೇಕಿರಲಿಲ್ಲ. ಅಲ್ಲಿನವರನ್ನು ಹುಡುಕುತ್ತಿದ್ದೆ. ಆ ಸಮಯ ನನ್ನೊಳಗೆ ಪತ್ರಿಕಾ ಧರ್ಮ-ಅಧರ್ಮಗಳ ಜಿಜ್ಞಾಸೆ ನಡೆದುದು ಸುಳ್ಳಲ್ಲ. ದುರಂತ ಪ್ರವಾಸ ಮಾಡಿ, ಫೋಟೋ-ವಿಡಿಯೋ ಸೆರೆಹಿಡಿದು ಹೊತ್ತಿದ ಮನೆಯಲ್ಲಿ ಗಳ ಹಿರಿದೆನಾ ಎಂದೂ ಅನಿಸಿದ್ದುಂಟು. ಇದು ನನ್ನ ವೃತ್ತಿಯ ಅನಿವಾರ್ಯತೆ ಹೌದಲ್ಲ ಎಂದು ಸುಮ್ಮನಾಗಿ ಮುಂದುವರಿದೆ.

ಮುಂಡಕ್ಕೈನಲ್ಲಿ ಉಳಿದಿರುವುದೊಂದು ಮಸೀದಿ, ಇಗರ್ಜಿ

ಮುನಿದ ಪ್ರಕೃತಿಯ ಮೊದಲ ಏಟು ಬಿದ್ದ ಗ್ರಾಮವಿದು. ಚೂರಲ್‌ಮಲ ಗ್ರಾಮದಲ್ಲಿ ಅರುಣಪುಳ ಹೊಳೆಗೆ ಅಡ್ಡಲಾಗಿ ಬೆಂಗಳೂರಿನ ಎಂಇಜಿ ಯೋಧರು ನಲುವತ್ತೆಂಟು ತಾಸಲ್ಲಿ ಕಟ್ಟಿದ ಕಬ್ಬಿಣ ಸೇತುವೆಯೇ ಮುಂಡಕ್ಕೈಗೆ ಏಕೈಕ ಸಂಪರ್ಕ ಸೇತು. ಮೇಲೇರುತ್ತಾ ಸಾಗಿದರೆ ಸುಮಾರು 5 ಕಿ.ಮೀ. ದೂರ. ರಸ್ತೆಯ ಅಕ್ಕಪಕ್ಕ ಚಹಾ ತೋಟ. ಅಲ್ಲೊಂದು ಸೆಂಟಿನಲ್ ರಾಕ್ ಚಹಾ ಕಂಪನಿ. ಅದರ ಕಾರ್ಮಿಕರ ವಸತಿಗೃಹಗಳೂ ಮಣ್ಣುಪಾಲು. ಈಗ ಅಲ್ಲಿ ಚಹಾ ಚಿಗುರೆಲೆ ಚಿವುಟುವವರಿಲ್ಲ. ಮಧ್ಯಾಹ್ನ ಮರದ ನೆರಳಲ್ಲಿ ಬುತ್ತಿ ಬಿಡಿಸಿ ಹೊಟ್ಟೆಗಿಳಿಸುತ್ತಾ ಹರಟುವವರಿಲ್ಲ. ಅಲ್ಲೀಗ ಮೌನದ ಚಿಲಿಪಿಲಿ. ಮುಂಡಕ್ಕೈ ಗ್ರಾಮದಿಂದ ಅಂದಾಜು 2-3 ಕಿ.ಮೀ. ದೂರದ ಪುಂಜರಿಮಲ ಬೆಟ್ಟದಿಂದ ರಾತ್ರಿ 1 ಗಂಟೆಗೊಮ್ಮೆ, ಅದಾಗಿ 3 ತಾಸುಗಳಲ್ಲಿ ಬಡಿದಪ್ಪಳಿಸಿದ್ದು ಹೆಬ್ಬಂಡೆ, ಹೆಮ್ಮರಗಳ ಪ್ರವಾಹ. ಜತೆಗೆ, ಲಕ್ಷ ಲಕ್ಷ ಟನ್ ಕೆಸರು. ಸುಮಾರು 50-60 ಮನೆಗಳಿದ್ದ ಊರು. ಅಲ್ಲೀಗ ಒಂದೇ ಒಂದು ಮನೆ ಇಡಿಯಾಗಿ ಉಳಿದಿಲ್ಲ. ಹಾನಿಯಾಗದೆ ಉಳಿದ ಎರಡೇ ಎರಡು ಕಟ್ಟಡಗಳೆಂದರೆ ಒಂದು ಮಸೀದಿ, ಇನ್ನೊಂದು ಇಗರ್ಜಿ ಯಾನೆ ಚರ್ಚು. ಆದರೆ, ಅಲ್ಲಿನ್ಯಾರು ಪ್ರಾರ್ಥನೆ ಮಾಡುವವರು?

ಚೂರುಚೂರಾದ ಚೂರಲ್‌ಮಲದ ಹೃದಯ ವಿದ್ರಾವಕ ದೃಶ್ಯಗಳು

ಮುಂಡಕ್ಕೈ ಗ್ರಾಮವೇ ನಿರ್ನಾಮ ಆಗಿದ್ದರೆ, ಅತಿ ಹೆಚ್ಚು ಹಾನಿಗೆ ಒಳಗಾಗಿದ್ದು ಚೂರಲ್‌ಮಲ. ಸುಮಾರು ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಆ ಊರಲ್ಲೀಗ ಎರಡ್ಮೂರು ಮಾರುತಿ ಕಾರುಗಳಷ್ಟು ಗಾತ್ರದ ಬಂಡೆಗಳು ನೆಲೆ ಕಂಡುಕೊಂಡಿವೆ, ಮನುಷ್ಯರು ಕಟ್ಟಿಕೊಂಡಿದ್ದ ಮನೆಗಳನ್ನು ಕೆಡವಿ. ಅವುಗಳಿಗೆ ಜೊತೆಯಾಗಿರುವುದು ಪುಂಜಿರಿಮಲದಿಂದ ಉರುಳುರುಳಿ ಬಂದ ಬೃಹತ್ ಮರಗಳ ಮಹಾಕಾಂಡಗಳ ಹಿಂಡು. ಚೂರಲ್‌ಮಲದಲ್ಲಿ ಶಾಲೆಯಿದೆ, ಮಕ್ಕಳಿಲ್ಲ. ಅಲ್ಲಿ ಭದ್ರತೆಗೆಂದು ಬಂದ ಪೊಲೀಸರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ. ಅವರು 15 ದಿನಕ್ಕೊಮ್ಮೆ ಬದಲಾಗುತ್ತಿದ್ದಾರೆ. ಅದಕ್ಕಿಂತ ಹೆಚ್ಚು ದಿನ ಅಲ್ಲಿ ನಿಲ್ಲುವ ಧೈರ್ಯ ಯಾರಿಗೂ ಬರದು ಅನ್ನಿಸುತ್ತದೆ. ಶಾಲೆಯ ಸಮೀಪವೇ ವೆಳ್ಳರಿಮಲ ಅಂಚೆ ಕಚೇರಿಯ ಶಾಖೆಯೊಂದಿದೆ. ಇನ್ನು ಅಲ್ಲಿಗೆ ಅಂಚೆ ಬರುವುದಿಲ್ಲ. ಬಂದರೂ ಸ್ವೀಕರಿಸಲು ಯಾರೂ ಇಲ್ಲ. ಸಂಚಾರಿ ಮೊಬೈಲ್ ಟವರ್ ಎದೆಯೆತ್ತಿ ನಿಂತಿದೆ. ಯಾರು ಕರೆ ಮಾಡುತ್ತಾರೋ ಏನೋ. ಮನೆಯ ಅವಶೇಷವೊಂದರ ಮೊದಲ ಮಹಡಿಯ ಕಟ್ಟೆಯಲ್ಲಿ ನಾಯಿಯೊಂದು‌ ಯಾರನ್ನೋ ನಿರೀಕ್ಷಿಸುತ್ತ ಕೂತಿದೆ. ಅದಕ್ಕೇನು ಗೊತ್ತು ಮಾಲಿಕ ಇನ್ನು ಬರುವುದಿಲ್ಲವೆಂದು?. ಊರ ತುಂಬಾ ಹತ್ತಾರು ಕಾರು, ಆಟೋರಿಕ್ಷಾ, ದ್ವಿಚಕ್ರವಾಹನಗಳು ಇವೆ‌, ಯಾವುದೂ ಮತ್ತೆ ಸರಿಪಡಿಸಲಾಗದ ಸ್ಥಿತಿಯಲ್ಲಿ. ಮಾಲಿಕರ ಜೊತೆ ಅವೆಷ್ಟು ವಾಹನಗಳು ಕೊಚ್ಚಿಹೋಗಿವೆಯೋ ಯಾರಿಗೆ ಗೊತ್ತು?. ಚೂರಲ್‌ಮಲ ಪೇಟೆ ಬೀದಿಯ ಕೆಸರು ಮೆತ್ತಿದ ಕಟ್ಟಡದ ಎಳೆದ ಶಟರ್ ಎದುರು “ಕೇರಳ ಗ್ರಾಮೀಣ ಬ್ಯಾಂಕ್, ವೆಳ್ಳರಿಮಲ ಶಾಖೆ” ನಾಮಫಲಕ ತನ್ನ ಹಿಂದಿನ ಅಸ್ತಿತ್ವ ಸಾರುತ್ತಿದೆ, ಮತ್ತೆ ಗ್ರಾಹಕರು ಬಂದಾರೆಂಬ ನಿರೀಕ್ಷೆಯೊಂದಿಗೆ. ಸಿಪಿಎಂ ಪಕ್ಷದ ಕಚೇರಿ ನಾಮಫಲಕ ಹೊತ್ತು ಉದಾಸೀನದಿಂದ ಬಿದ್ದಿದೆ. ಅಲ್ಲಿ ನಾಯಕರೂ ಇಲ್ಲ, ಕಾರ್ಯಕರ್ತರೂ ಇಲ್ಲ. ಗ್ರಾಮದ ಮುಖ್ಯಬೀದಿಯಲ್ಲಿರುವ ಸಫಾ ಮಾರ್ಜಿನ್-ಫ್ರೀ ಸೂಪರ್ ಮಾರ್ಕೆಟ್ ಸಂಪೂರ್ಣ ಸಫಾಯಿ ಆಗಿ ಹೋಗಿದೆ. ಊರಿನ ಪ್ರವೇಶ ದ್ವಾರದಲ್ಲಿ ಎರಡೇ ಎರಡು ಅಂಗಡಿಗಳು ಮೆಲ್ಲನೆ ತೆರೆಯುವ ಪ್ರಯತ್ನದಲ್ಲಿವೆ. ಒಂದು, ಬಶೀರ್ ಕಾಕಾ ಚಾಯ ಕಡ. ಇನ್ನೊಂದು, ಜುಬೇದಾ ಚೇಚಿಯ ದಿನಸಿ ಅಂಗಡಿ. ಅಲ್ಲೂ ಬಿಸಿನೆಸ್ ಇಲ್ಲ. ಭದ್ರತೆ, ರಕ್ಷಣೆಗೆ ಬಂದವರ ಖರೀದಿಗಳೇ ಅವರಿಗೆ ವ್ಯಾಪಾರ. ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಂತೆ.

ಚೂರಲ್‌ಮಲ ಶಿವದೇಗುಲದ ಅಡಿಪಾಯದಲ್ಲೇ ಓಣಂ ಪೂಜೆ

ಚೂರಲ್‌ಮಲ ಗ್ರಾಮದ ಹೃದಯಭಾಗದಲ್ಲಿತ್ತು ಶಿವ ಕ್ಷೇತ್ರ. ಅಪ್ಪಟ ಕೇರಳ ಶೈಲಿಯ ಹಂಚಿನ ಕಟ್ಟೋಣ. ಸುತ್ತ ಹಸಿರ ಸಿರಿ. ಮುಂದೆ ಕಿರು ಹುಲ್ಲು ಹಾಸು. ಮಗ್ಗುಲಲ್ಲಿ ಒಂದೆರಡು ಅಡಕೆ‌ ಮರ. ಒಟ್ಟಾರೆ ದಿವ್ಯ, ಪ್ರಶಾಂತ ಪರಿಸರ. ಆ ಕರಾಳ ರಾತ್ರಿಯ ಹೊಡೆತದ ಬಳಿಕ ದೇಗುಲವೀಗ ಅಡಿಪಾಯಕ್ಕಷ್ಟೇ ಸೀಮಿತ. ಅಲ್ಲಿ ದೇಗುಲವಿತ್ತೆಂದು ಹೇಳಿದರೆ ನಂಬಲೂ ಆಗದ ಸ್ಥಿತಿ. ಆದರೆ ನಂಬಿಕೆಗೆ ಯಾರ ಹಂಗು? ಆ ಅಡಿಪಾಯವನ್ನೇ ಸ್ವಚ್ಛಗೊಳಿಸಿ ಪೂಜೆಗೆ ಅಣಿಗೊಳಿಸಿದ್ದಾರೆ ಅಳಿದುಳಿದ ಜನ. ಅಲ್ಲಿ ದೀಪಗಳನ್ನಿಟ್ಟು, ರಂಗೋಲಿ ಬಿಡಿಸಿ, ದೇವರ ಪ್ರತಿಷ್ಠಾಪನೆ ಮಾಡಿ ಸಂಪ್ರದಾಯ ಪಾಲಿಸಿಯೇ ಸಿದ್ಧ ಎಂದು ಟೊಂಕ‌ ಕಟ್ಟಿ ನಿಂತಿದ್ದಾರೆ ಅವರು. ಸೇನೆಯ ನಿವೃತ್ತ ಅಧಿಕಾರಿಯೊಬ್ಬರೂ ಇದಕ್ಕೆ ಕೈಜೋಡಿಸಿರುವುದು ವಿಶೇಷ.

ನಿರಂತರ ಮಳೆಗೆ ಜಾರಿ ಒಟ್ಟಾದ ಬಂಡೆಗಳು, ಭಾರಕ್ಕೆ ಕುಸಿದ ಭೂಮಿ

ಈ ದುರಂತಕ್ಕೆ ಕಾರಣವೇನೆಂದು ಹುಡುಕಿದರೆ ಒಬ್ಬೊಬ್ಬರದು ಒಂದೊಂದು ಉತ್ತರ. ಕೆಲವರ ಪ್ರಕಾರ ಪರಿಸರ ಸೂಕ್ಷ್ಮ ವಲಯದಲ್ಲಿ ಅತಿಯಾದ ಮಾನವನ ದೌರ್ಜನ್ಯ ಕಾರಣ. ಇನ್ನು ಕೆಲವರು ಪರಿಸರ ಅಸಮತೋಲನ, ಹವಾಮಾನ ಬದಲಾವಣೆಯ ಕಾರಣ ಮುಂದಿಡುತ್ತಾರೆ. ಯಾವುದನ್ನೂ ತಳ್ಳಿ ಹಾಕುವಂತಿಲ್ಲ. ಆದರೆ, ಅಲ್ಲಿನವರೊಬ್ಬರು ಹೊರಹಾಕಿದ ವಿಶ್ಲೇಷಣೆ ಇದ್ದುದರಲ್ಲಿ ತರ್ಕಬದ್ಧ ಅನಿಸಿತು. ಹತ್ತು ದಿನಗಳ ಕಾಲ ನಿರಂತರವಾಗಿ ಬೆಟ್ಟದ ಮೇಲೆ ಅತಿವೃಷ್ಟಿ ಆದಾಗ ಮಣ್ಣು ಕೆಸರಾಗಿ ಇಷ್ಟಷ್ಟೇ ಜಾರತೊಡಗಿತು. ಅದರ ಜತೆಗೆ ಕೆಲ ಬಂಡೆಗಳೂ. ಹೀಗೆ ಅವೆಲ್ಲ ಒಂದು ಕಡೆ ಒಟ್ಟಾಗುತ್ತಾ ಬಂದವು. ಅದರ ಭಾರ ಮಿತಿ ಮೀರಿದಾಗ ಕೆಳಗಿದ್ದ ಭೂಮಿ ಜಾರಿತು. ಕೆಸರು, ಬಂಡೆಗಳ ರಾಶಿ ಮುಂದೆ ಇದ್ದ ಮರಗಳು, ಬಂಡೆಗಳ ಜತೆಗೆ ನೆಲವನ್ನೂ ಕೊಚ್ಚಿಕೊಂಡು ಕೆಳಕ್ಕೆ ಧುಮ್ಮಿಕ್ಕಿತು. ಮುಂದೆ ಏನಾಯಿತು ಎಂಬುದು ಈಗ ಇತಿಹಾಸ.

ಪ್ರವಾಸೋದ್ಯಮಕ್ಕೆ ಹೆಸರಾದ ಆ ಇಡೀ ಪ್ರದೇಶ ಸಂಪೂರ್ಣ ಸ್ತಬ್ಧ
ಮೇಪ್ಪಾಡಿಯಿಂದ ಚೂರಲ್‌ಮಲ ಹಾದಿಯುದ್ದಕ್ಕೂ ರೆಸಾರ್ಟ್, ಹೋಮ್‌ಸ್ಟೇಗಳಿವೆ. ಎತ್ತರದ ಜಿಪ್‌ಲೈನ್, ಜೋಕಾಲಿ, ಗಾಜಿನ ಸೇತುವೆ ಇತ್ಯಾದಿ ವಾಣಿಜ್ಯಿಕ ಸಾಹಸಗಳೂ ಇವೆ. ಸೂಚಿಪಾರಾ ಜಲಪಾತ ಇಲ್ಲಿನ ಮತ್ತೊಂದು ಆಕರ್ಷಣೆ. ಹಾಗಾಗಿ, ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದುದು ಸಾಮಾನ್ಯ. ಚಹಾ ತೋಟಗಳನ್ನು ಹೊರತುಪಡಿಸಿದರೆ ಪ್ರವಾಸೋದ್ಯಮವೇ ಇಲ್ಲಿನವರಿಗೆ ಆರ್ಥಿಕ ಶಕ್ತಿ. ಕಳೆದ ಆರು ವಾರಗಳಿಂದ ಅವೆಲ್ಲವೂ ಸ್ತಬ್ಧವಾಗಿದೆ. ಇದರೊಂದಿಗೆ ಇಡೀ ಪ್ರದೇಶ ದಿಗ್ಭ್ರಾಂತವಾಗಿ ಕೂತಿದೆ. ಸದ್ಯಕ್ಕೆ ಅವಘಡದ ಭೀಕರತೆಯನ್ನು ವೀಕ್ಷಿಸಲು ಬರುವ “ದುರಂತ ಪ್ರವಾಸಿಗರೇ” ಅಲ್ಲಿನ ಆರ್ಥಿಕತೆಗೆ ಅಲ್ಪ ಚೈತನ್ಯ. ಆದರೀಗ ಎರಡು ದಿನಗಳಿಂದ ಅದಕ್ಕೆಲ್ಲ ಕಡಿವಾಣ ಹಾಕಲಾಗಿದೆ. ಇನ್ನು ಐದಾರು ತಿಂಗಳಲ್ಲಾದರೂ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದರೆ ಸಾಕೆನ್ನುತ್ತಾರೆ ಸ್ಥಳೀಯರು.

ಇವಿಷ್ಟು ಕಂಡು, ಕೇಳಿ, ದುರಂತದೂರಿನಲ್ಲಿ ಮೂರ್ನಾಲ್ಕು ತಾಸು ಕಳೆದು, ಅಲ್ಲಿಂದ ಹೊರಡುವಾಗ ಸ್ಮೃತಿಪಟಲದಲ್ಲಿ ಪ್ರಮುಖವಾಗಿ ಅಚ್ಚೊತ್ತಿದ್ದು ಎರಡು ದೃಶ್ಯ… ಒಂದು, ಯಜಮಾನ ಬರುವನೆಂದು ಮನೆಯ ಅವಶೇಷದ ಮೇಲೆ ಕಾದು ಕುಳಿತ ನಿಷ್ಠಾವಂತ ನಾಯಿ ಮತ್ತು “‌ನೀನು ನನ್ನ ಯಜಮಾನನನ್ನು ಕಂಡೆಯಾ?” ಎಂದು ಅಲ್ಲಿಗೆ ಹೋದವರನ್ನೆಲ್ಲ ಪ್ರಶ್ನಿಸುತ್ತಿದೆಯೋನೋ ಎಂಬಂತೆ ಭಾಸವಾಗುತ್ತಿದ್ದ ಅದರ ದೃಷ್ಟಿ. ಇನ್ನೊಂದು, ಮುಂಡಕ್ಕೈ ಗ್ರಾಮದ ಮಗ್ಗುಲಲ್ಲಿ ಅನಾಹುತಕ್ಕೆ ಸಾಕ್ಷಿಯಾಗಿ ನಿಂತ ಹೆಬ್ಬಂಡೆ ಮತ್ತು ಅದರ ಪಕ್ಕದಲ್ಲಿ ಕುಬ್ಜವಾಗಿ ಕಾಣುವ ಎರಡು ಮಾರುತಿ ಕಾರುಗಳು. ಪ್ರಕೃತಿ ಮುಂದೆ ಹುಲುಮಾನವ ಎಷ್ಟಿದ್ದರೂ ಅಷ್ಟೆ!

ಉಳಿದವರ ಸಹಾಯಕ್ಕೆ ನನ್ನ ಬದುಕು‌ ಮೀಸಲು
ನನ್ನೂರು ತ್ರಿಶ್ಶೂರು. ನನಗಿಬ್ಬರು ಹೆಣ್ಣುಮಕ್ಕಳು. ಇಬ್ಬರೂ ಮದುವೆಯಾಗಿ ವಿದೇಶದಲ್ಲಿದ್ದಾರೆ. ಚೂರಲ್‌ಮಲ ದುರಂತ ನೋಡಿ ಕನಲಿ ಹೋದೆ. ಉಳಿದವರಿಗಾಗಿ ಏನಾದರೂ ಸೇವೆ ಮಾಡಲು ಇಲ್ಲಿಗೆ ಬಂದಿದ್ದೇನೆ. 18 ದಿನಗಳಿಂದ ಇಲ್ಲಿದ್ದೇನೆ. ನಿತ್ಯ ಇಲ್ಲಿಗೆ 20-25 ಹಸುಗಳು ಬರುತ್ತವೆ. ಅವುಗಳ ಮಾಲಿಕರೇ ಇಲ್ಲ. ನಾನು ಸಾಧ್ಯವಾದಷ್ಟು ಅವುಗಳ ಚಾಕರಿ ಮಾಡುತ್ತೇನೆ. ಅಳಿದುಳಿದ ವಸ್ತುಗಳನ್ನು ಹೆಕ್ಕಲು ಇಲ್ಲಿನ ಜನ ಬರುತ್ತಿರುತ್ತಾರೆ. ಅವರಿಗೆ ಆಹಾರ ಇತ್ಯಾದಿ ಕೈಲಾದ ನೆರವು ನೀಡುತ್ತೇನೆ. ನನ್ನ ಉಳಿದ ಬದುಕು ಇಲ್ಲಿನವರಿಗೆ ಮೀಸಲು.
– ಜೋಸೆಫಿನ್, ತ್ರಿಶ್ಶೂರಿನ ನಿವೃತ್ತ ಬ್ಯಾಂಕ್ ಉದ್ಯೋಗಿ

ಅಪ್ಪ-ಅಮ್ಮ ಉಳಿದರು,ಹುಟ್ಟಿದ ಮನೆ ನಿರ್ನಾಮ
ನಾನು ಹುಟ್ಟಿ ಬೆಳೆದ ಊರಿದು. ದುರಂತ ಸಂಭವಿಸಿದ ದಿನ ಬೇರೆ ಕಡೆ ಇದ್ದೆ. ನನ್ನ ಮನೆಯಲ್ಲಿದ್ದ ಅಪ್ಪ-ಅಮ್ಮ ಅಣ್ಣನ ಮನೆಗೆ ಹೋಗಿದ್ದ ಕಾರಣ ಬದುಕುಳಿದರು. 45 ದಿನಗಳಲ್ಲಿ ಮೊದಲ ಬಾರಿ ಇಲ್ಲಿಗೆ ಬಂದಿದ್ದೇನೆ. ನಮ್ಮ ಮನೆ ಇದ್ದ ಜಾಗ ಸಪಾಟಾಗಿದೆ. ಇಲ್ಲಿನ ಪರಿಸ್ಥಿತಿ ನೋಡಿ ದಿಗ್ಭ್ರಾಂತನಾಗಿದ್ದೇನೆ.
– ಜೆನೀಶ್, ಚೂರಲ್‌ಮಲ ನಿವಾಸಿ

ಲ್ಯಾಪ್ಟಾಪ್, ಕೆಲ ದಾಖಲೆ ಸಿಕ್ಕಿದ್ದಷ್ಟೇ ನಮ್ಮ ಭಾಗ್ಯ
ನಾನು ಬೆಂಗಳೂರಿನಲ್ಲಿ ಎಎನ್‌ಜೆಡ್ ಉದ್ಯೋಗಿ. ಬೆಳ್ಳಂದೂರಲ್ಲಿ‌ ನೆಲೆಸಿದ್ದೇನೆ. ಇಲ್ಲಿ ನನ್ನ ತಂದೆ-ತಾಯಿ, ಸೋದರಿ ಇದ್ದರು. ದುರಂತದ ದಿನ ಅವರು ಮನೆಯ ಮೇಲ್ಮಹಡಿಯಲ್ಲಿದ್ದ ಕಾರಣ ಬದುಕುಳಿದರು. ನೆಲಮಹಡಿ ತುಂಬ ಹೂಳು ತುಂಬಿತ್ತು. ಇವತ್ತಷ್ಟೇ ಜೆಸಿಬಿ ಮೂಲಕ ಕೆಸರು ತೆಗೆಸಿ ಮನೆಗೆ ಹೋದೆ. ಲ್ಯಾಪ್‌ಟಾಪ್, ಕೆಲ ಮುಖ್ಯ ದಾಖಲೆಗಳು ದೊರೆತವು. ಇನ್ನಷ್ಟು ವಸ್ತುಗಳಿಗಾಗಿ ಹುಡುಕುತ್ತಿದ್ದೇನೆ. ಅಳಿದ ಜಾಗದಲ್ಲಿ ಉಳಿದದ್ದಷ್ಟೇ ನಮ್ಮ ಭಾಗ್ಯ.
* ಶಾಹೀನ್, ಚೂರಲ್‌ಮಲ ಮೂಲದ ಬೆಂಗಳೂರು ನಿವಾಸಿ

ಸದ್ಯಕ್ಕೆ ಎಲ್ಲ ಸ್ತಬ್ಧವಾಗಿದೆ ಬದುಕು ಮುಂದೆ ಹೇಗೋ
ನಮ್ಮ ಮೂಲ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ. ನನ್ನ ತಂದೆ ಚಹಾ ತೋಟದ ಕೆಲಸಗಾರರಾಗಿ ಬಂದು 45 ವರ್ಷ ಹಿಂದೆ ಇಲ್ಲಿ‌ ನೆಲೆಸಿದರು. ಅವರು ಕಾಲವಾಗಿ 10 ವರ್ಷ ಆಯಿತು. ನಾನು, ಅಣ್ಣ, ಇಬ್ಬರು ತಮ್ಮಂದಿರು. 2019ರ ಪುತ್ತುಮಲ ಭೂಕುಸಿತಕ್ಕೆ ಸಿಲುಕಿ ಅಣ್ಣ ತೀರಿಕೊಂಡ. ನಾನು ಇಲ್ಲಿ ಜೀಪು ಓಡಿಸುತ್ತೇನೆ. ಇಲ್ಲಿಯವಳನ್ನೇ ಮದುವೆಯಾಗಿ ಇಲ್ಲಿಯೇ ನೆಲೆಸಿದ್ದೇನೆ. ತಮ್ಮಂದಿರು ಊರಲ್ಲಿದ್ದಾರೆ. ಅವರ ಜತೆ ಇದ್ದ ಅಮ್ಮ ತೀರಿ 35 ದಿನಗಳಾದವು. ಇಷ್ಟು ದಿನ ಸಲೀಸಾಗಿದ್ದ ಬದುಕು ಇದೀಗ ಸ್ತಬ್ಧವಾಗಿದೆ. ಮುಂದೇನೆಂದು ತೋಚದಾಗಿದೆ.
– ಗೌರಿಂಗೇಗೌಡ, ಕರ್ನಾಟಕ ಮೂಲದ ಚೂರಲ್‌ಮಲ ನಿವಾಸಿ

ಪ್ರತ್ಯಕ್ಷ ವರದಿ: ರವಿಶಂಕರ್‌ ಕೆ. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next