ನವದೆಹಲಿ: ಕೇರಳದ ವಯನಾಡಿನಲ್ಲಿ ಮಂಗಳವಾರ (ಜುಲೈ 30) ಭಾರೀ ಮಳೆಗೆ ಸಂಭವಿಸಿದ ಭೂಕುಸಿತದಲ್ಲಿ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ನೂರಾರು ಜನರು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿಯ ವಿವರ ಪಡೆದು ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹಲವು ಜನರು ಪ್ರಾಣಕಳೆದುಕೊಂಡಿದ್ದಾರೆ. ಅವರ ಕುಟುಂಬಕ್ಕೂ ಗಾಯಗೊಂಡವರ ಬಗ್ಗೆಯೂ ಪ್ರಾರ್ಥಿಸುವುದಾಗಿ ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದು, ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.
ಕೇರಳ ವಯನಾಡಿನ ಮೆಪ್ಪಾಡಿ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಗ್ರಾಮಗಳೇ ಕೊಚ್ಚಿಕೊಂಡು ಹೋಗಿದ್ದು, 400ಕ್ಕೂ ಅಧಿಕ ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸುವ ಕೆಲಸ ಭರದಿಂದ ಸಾಗುತ್ತಿರುವುದಾಗಿ ವರದಿ ತಿಳಿಸಿದೆ.
ವಯನಾಡಿನ ಮೆಪ್ಪಾಡಿಯಲ್ಲಿ ಸಂಭವಿಸಿದ ಭಾರೀ ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ವಯನಾಡ್ ಮಾಜಿ ಸಂಸದ ರಾಹುಲ್ ಗಾಂಧಿ, ಅವಶೇಷಗಳ ಅಡಿ ಸಿಲುಕಿರುವವರನ್ನು ಆದಷ್ಟು ಶೀಘ್ರ ರಕ್ಷಿಸಲಿ ಎಂದು ತಿಳಿಸಿದ್ದಾರೆ.