Advertisement

ಕಡಲಮನೆಯ ಮನಸ್ಸುಗಳಲ್ಲಿ ಅಲೆಗಳು

10:01 AM Dec 02, 2019 | mahesh |

ಉದಯವಾಣಿ/ತುಷಾರ ಸಂಯೋಜನೆಯಲ್ಲಿ ಕಳೆದ ನ. 22 ಮತ್ತು 23ರಂದು “ಕೇಳುಸಖೀ- ಲೇಖಕಿಯರೊಂದಿಗೆ ಒಂದು ದಿನ’ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಲೇಖಕಿಯರು ತಮ್ಮ ಜೀವನದ “ಅನುಭವ’ಗಳನ್ನು ಹರಟೆಯ ಮಾದರಿಯಲ್ಲಿ ಪರಸ್ಪರ ಹಂಚಿಕೊಂಡರು. ಅಕ್ಷರದ ಅಭಿವ್ಯಕ್ತಿಗೆ ಅನುಭವಗಳ ಆಕರಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬ ಚಿಂತನೆಯಲ್ಲಿ- ಮತ್ತೂಮ್ಮೆ ಇಂಥ ಶಿಬಿರದಲ್ಲಿ ಜೊತೆಯಾಗುವ ಕನಸಿನೊಂದಿಗೆ ಮರಳಿದರು.

Advertisement

ಕುಂದಾಪುರದ ಕಡಲ ಮನೆಗೆ ವೈದೇಹಿಯವರೊಂದಿಗೆ ಹೋಗಿ ಇಳಿದಾಗ ಆಗಷ್ಟೇ ಕರ್ನಾಟಕದ ವಿವಿಧ ಭಾಗಗಳಿಂದ ಬಂದಿಳಿಯುತ್ತಿದ್ದ ಲೇಖಕಿಯರ ಸಂಕೋಚ ಭರಿತ ಮುಗುಳ್ನಗೆಯ ವಿನಿಮಯ ನಡೆಯುತ್ತಿತ್ತು, ಅಷ್ಟೇ. ಜೊತೆಯಲ್ಲಿ ಊಟ ಮಾಡಿ ಮಧ್ಯಾಹ್ನದ ಅನೌಪಚಾರಿಕ ಬೈಠಕ್‌ ಪ್ರಾರಂಭವಾದಾಗ ಈ ಸಂಕೋಚದ ತೆಳು ಪರದೆ ಮೆಲ್ಲನೆ ಕರಗಿತ್ತು. ಅದೊಂದು ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಸೆಮಿನಾರ್‌ ರೂಪದ ಬೈಠಕ್‌ ಆಗಿರಲಿಲ್ಲ. ಹೊಸದಾಗಿ ಬರೆಯಲು ಪ್ರಾರಂಭಿಸಿದ ಕೆಲವು ಕಥೆಗಳನ್ನು ಈಗಾಗಲೇ ಹೊರತಂದ ಉತ್ಸಾಹಿ ಯುವತಿಯರು ಅಲ್ಲಿ ನೆರೆದಿದ್ದರು. ಕನ್ನಡದ ಖ್ಯಾತ ಕತೆಗಾರ್ತಿ ವೈದೇಹಿ ಅವರೊಂದಿಗೆ ನಾನು ಶಿಬಿರ ನಿರ್ದೇಶನದ ಕಾರ್ಯದಲ್ಲಿ ಕೈಜೋಡಿಸಬೇಕಿತ್ತು.

ಕೈ ಚಾಚಿದರೆ ಕಡಲಿನ ತೆರೆಗಳ ವಿಸ್ತಾರವಾದ ಬೀಚು, ಕಡಲ ತಡಿಯಲ್ಲಿರುವ ಮಲೆನಾಡಿನ ದೊಡ್ಡ ಮನೆಗಳನ್ನು ಮೀರಿಸುವ ಕಡಲ ಮನೆ. ನಮಗೆಲ್ಲ ಆಶ್ರಯ ನೀಡಿತ್ತು. ಮೆಲ್ಲಮೆಲ್ಲನೆ ಕತೆಗಳ ರಚನೆಗೆ ಬೇಕಾದ ತಾಳ್ಮೆ ತಾದಾತ್ಮ, ಕಥಾವಸ್ತುಗಳನ್ನು ಸುತ್ತಮುತ್ತಲಿನ ಪರಿಸರದಲ್ಲಿ ಪರಿಕಿಸಿ ಪಡೆದುಕೊಳ್ಳಬಹುದಾದ ಜಾಣ್ಮೆ ಇವುಗಳ ಕುರಿತು ವೈದೇಹಿಯವರು ಹೇಳ ತೊಡಗಿದಂತೆ ಲೇಖಕಿಯರು ಪೂರ್ತಿ ಕಿವಿಗೊಟ್ಟು ಆಲಿಸಿದ್ದರು. ಕಥೆಗಳು ರೂಪುಗೊಳ್ಳುವ ಬಗೆ, ಭಾಷೆ ವರ್ಣನೆ, ಸ್ವಂತಿಕೆಯ ಬಳಕೆ ಇವುಗಳನ್ನು ಮೆಲು ಧಾಟಿಯಲ್ಲಿ ವೈದೇಹಿ ಹೇಳುತ್ತ ಹೋದಂತೆ ಕುತೂಹಲದ ಪ್ರಪಂಚ ಆತ್ಮವಿಶ್ವಾಸದ ಧೈರ್ಯವನ್ನು ಯುವತಿಯರಲ್ಲಿ ಮೂಡಿಸಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಬರವಣಿಗೆಯ ಪ್ರಾರಂಭಿಕ ಹಂತದಲ್ಲಿರುವ ಯುವತಿಯರು ತಮ್ಮ ಅನುಮಾನ, ಕೇಳಿ ಉತ್ತರ ಪಡೆದು ಖುಷಿಪಟ್ಟರು. ಕಥಾ ರಚನೆಗೆ ವಿಭಿನ್ನವಾದ ಪ್ರಬಂಧಗಳು ರೂಪುಗೊಳ್ಳುವ ಸೊಗಸನ್ನು ನಾನು ವಿವರಿಸಿದೆ.ಹಾಸ್ಯ ಸಾಹಿತ್ಯದ ಒಂದು ಸಶಕ್ತ ಆಕರ್ಷಕ ಪ್ರಕಾರವಾದ ಲಲಿತ ಪ್ರಬಂಧಗಳ ರಚನೆಯ ಕುರಿತು ಪ್ರಶ್ನೆಗಳು ವಿವರಣೆಗಳು ಉದಾಹರಣೆ ಎಲ್ಲವೂ ಯಾವುದೇ ಕೃತಕತೆಯ ಲೇಪವಿಲ್ಲದೇ ಅಲ್ಲಿ ಚರ್ಚಿಸಲ್ಪಟ್ಟವು.

ಸಂಜೆಯ ತಂಗಾಳಿಗೆ ಗರಿಗೆದರಿಕೊಂಡ ಯುವತಿಯರ ಗುಂಪು ಕಡಲನ್ನೇ ನೇರವಾಗಿ ಹೊಕ್ಕು ತೆರೆಗಳಿಗೆ ಕೈಚಾಚಿ ಸಂಭ್ರಮಿಸಿತ್ತು ಅವರಿವರಲ್ಲಿ ಪಿಸುಮಾತಿನಲ್ಲಿ ಆತ್ಮೀಯತೆಯ ವಿನಿಮಯವಾಗುತ್ತಿದ್ದುದನ್ನು ನೋಡಿ ನನ್ನ ವಿದ್ಯಾರ್ಥಿನಿಯರ ಆಪ್ತ ಲೋಕ ನೆನಪಿಗೆ ಬಂತು. ತೆಂಗಿನ ತೋಟದ ಕಲ್ಲು ಬೆಂಚುಗಳ ಮೇಲೆ ನಮ್ಮ ಸಂಜೆಯ ಬೈಠಕ್‌ ಪ್ರಾರಂಭವಾಯಿತು. ಅಲ್ಲಿ ಎಲ್ಲ ಇಪ್ಪತ್ತೆದು ಯುವ ಲೇಖಕಿಯರಿಗೂ ತಮ್ಮ ತಮ್ಮ ಹಿನ್ನೆಲೆ, ಅನುಭವ-ಅನಿಸಿಕೆಗಳ ಕುರಿತು ಮಾತನಾಡಲು ಇಪ್ಪತ್ತು ನಿಮಿಷದ ಸಮಯ ನೀಡಿ ಕಿವಿಯಾಗಿ ಕುಳಿತೆವು. ಅಬ್ಟಾ! ಎಂತೆಂಥ ಅನುಭವಗಳನ್ನು ನಮ್ಮ ಯುವತಿಯರು ಹಂಚಿಕೊಂಡರು ! ಆ ಪಿಸುಮಾತುಗಳ ಆಪ್ತಸಂವಾದ ಸಾಹಿತ್ಯ ಲೋಕದಲ್ಲಿಯ ಸ್ವಾರಸ್ಯವನ್ನು ಮುಂದಿನ ತಲೆಮಾರಿಗೆ ದಾಟಿಸುವ ಸಾರ್ಥಕ ಪ್ರಯತ್ನವಾಗಿ ಮೂಡಿಬಂತು. ನಮ್ಮ ಗ್ರಾಮೀಣ ಯುವತಿಯರು ಪಡುವ ದೈಹಿಕ-ಮಾನಸಿಕ ಕಟ್ಟುಪಾಡುಗಳು ನಗರದ ಯುವತಿಯರಿಗೆ ಇಲ್ಲ. ನಗರ ಯುವತಿಯರ ಸಂಕೀರ್ಣ ಸಮಸ್ಯೆಗಳನ್ನು ಎದುರಿಸುವ ಹಾಗೂ ಕತೆಯಾಗಿಸುವ ಸವಾಲುಗಳನ್ನು ಯುವತಿಯರು ದಿಟ್ಟವಾಗಿ ಸ್ವೀಕರಿಸಿದ್ದು ಕಂಡುಬರುತ್ತಿತ್ತು. ರಾತ್ರಿ ಇಡೀ ಗುನುಗುನು ಮಾತನಾಡಿದ ಯುವತಿಯರು ಯಾವಾಗ ಎಷ್ಟು ನಿದ್ರಿಸಿದರೋ! ಮರು ಬೆಳಿಗ್ಗೆ ಪುನಃ ಕಡಲ ತಡಿಯಲ್ಲಿ ವಿಹರಿಸಿ ಸಂಭ್ರಮಿಸಿದರು.

ಉತ್ತಮ ಅಭಿರುಚಿಯ ಓದುಗರನ್ನು ಪಡೆದಿರುವ ಉದಯವಾಣಿ/ತುಷಾರ ಪತ್ರಿಕೆಯಲ್ಲಿ ಸಶಕ್ತ ಬರಹಗಾರ್ತಿಯರ ಗುರುತಿಸುವಿಕೆ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದು ಪ್ರಶಂಸನೀಯ ಪ್ರಯತ್ನ. ಕಡಲ ತಡಿಯಲ್ಲಿ ಹೊಳಹು ಹಾಕಿದ ಪಿಸುಮಾತಿನ ಉಸಿರುಗಳನ್ನು ಮುಂದಿನ ದಿನಗಳಲ್ಲಿ ಕಥೆಗಳನ್ನಾಗಿ ನಿರೀಕ್ಷಿಸಬಹುದು.

Advertisement

ಭುವನೇಶ್ವರಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next