Advertisement

ಅಲೆ ಮೂಲೆಗೆ; ಜಾತಿ ಪ್ರೇಮ ಗುಪ್ತಗಾಮಿನಿ!

12:52 PM May 08, 2019 | Suhan S |

ಬೀಳಗಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೀಳಗಿ ವಿಧಾನಸಭೆ ಕ್ಷೇತ್ರದ ಮತದಾನಕ್ಕೂ ಮುಂಚಿನ ಲೆಕ್ಕಾಚಾರಗಳೇ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದವು. ಕಾಂಗ್ರೆಸ್‌ ಪಕ್ಷದವರು ಬಿಜೆಪಿಯವರ ಮೇಲೆ, ಬಿಜೆಪಿಯವರು ಕಾಂಗ್ರೆಸ್‌ ಪಕ್ಷದ ಮೇಲೆ ಅನುಮಾನದಿಂದ ನೋಡುವಂತೆ ಮಾಡಿತ್ತು. ಇಲ್ಲಿ ಪಕ್ಷ ರಾಜಕಾರಣಕ್ಕಿಂತ ಜಾತಿ ಪ್ರೇಮ ಹೆಚ್ಚು ಕೆಲಸ ಮಾಡಿದೆ ಎಂಬ ಮಾತೂ ಎಲ್ಲೆಡೆ ಕೇಳಿ ಬಂದಿದೆ.

Advertisement

ಹೌದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್‌ನ ಅಜಯಕುಮಾರ ಸರನಾಯಕ, ಮಾಜಿ ಶಾಸಕ ಜೆ.ಟಿ. ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ವಿಧಾನಪರಿಷತ್‌ ಸದಸ್ಯ ಎಸ್‌.ಆರ್‌. ಪಾಟೀಲ ಮುಂತಾದ ಘಟಾನುಘಟಿ ನಾಯಕರನ್ನು ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಹೊಂದಿದೆ. ಇನ್ನು ಕ್ಷೇತ್ರದ ಹಾಲಿ ಶಾಸಕ ಮುರಗೇಶ ನಿರಾಣಿ, ವಿಧಾನಪರಿಷತ್‌ ಸದಸ್ಯ ಹನಮಂತ ನಿರಾಣಿ, ಜಿಪಂ ಸದಸ್ಯ ಹೂವಪ್ಪ ರಾಠೊಡ ಕೂಡ ಬಿಜೆಪಿಗೆ ಹೆಚ್ಚು ಬಲ ತಂದು ಕೊಟ್ಟಿದ್ದಾರೆ ಎಂಬ ನಿರೀಕ್ಷೆ ಬಿಜೆಪಿಗಿದೆ. ಆದರೆ, ಲೆಕ್ಕಾಚಾರಗಳನ್ನೂ ಮೀರಿ ಜಾತಿ ಪ್ರೇಮ ಇಲ್ಲಿ ಕೆಲಸ ಮಾಡಿದೆ ಎಂಬ ಗುಮಾನಿ ಇದ್ದು, ಅದು ಫಲಿತಾಂಶದ ಬಳಿಕ ಸ್ಪಷ್ಟಗೊಳ್ಳಲಿದೆ.

ದಾಖಲೆ ಮತದಾನ: ಕ್ಷೇತ್ರದಲ್ಲಿ ಈ ಬಾರಿ ದಾಖಲೆಯ ಮತದಾನವೂ ಆಗಿದೆ. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ.1.08ರಷ್ಟು (ಒಟ್ಟು ಶೇ.73.13) ಹೆಚ್ಚಳವಾಗಿದೆ. ಅಲ್ಲದೇ ಕಳೆದ ಲೋಕಸಭೆ ಚುನಾವಣೆ ವೇಳೆ ಇಲ್ಲಿ 2,01,487 ಮತದಾರರಿದ್ದರೆ, ಈ ಬಾರಿ 2,19,823 (18,336 ಹೆಚ್ಚು) ಮತದಾರರಿದ್ದರು. ಅದರಲ್ಲಿ 1,60,769 ಜನ ಈ ಬಾರಿ ಮತದಾನ ಮಾಡಿದ್ದಾರೆ. ಕಾಂಗ್ರೆಸ್‌ನವರು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿ ಮಾಡಿದ್ದರೆ, ಜಾತಿ ಪ್ರೇಮದ ಒಳ ಹೊಡೆತದೊಂದಿಗೆ ಅತಿಹೆಚ್ಚು ಮತ ಕಾಂಗ್ರೆಸ್‌ಗೆ ಬರಲಿವೆ ಎಂಬುದು ಅವರ ಲೆಕ್ಕಾಚಾರ.

ಟೀಮ್‌ ಮೋದಿ ತಂಡ: ಈ ಕ್ಷೇತ್ರದಲ್ಲಿ ಜಾತಿ ಪ್ರೇಮದ ಚುನಾವಣೆ ನಡೆದಿದೆ ಎಂಬುದನ್ನರಿತ ಬಳಿಕ ಟೀಮ್‌ ಮೋದಿ ತಂಡ, ಕ್ಷೇತ್ರದ ಪ್ರಮುಖ ಹಳ್ಳಿ, ಪಟ್ಟಣಗಳಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದೆ. ಜತೆಗೆ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಅವರನ್ನು ಆರಾಧಿಸುವಂತಹ ಸ್ವಜಾತಿ ಮತದಾರರೂ ಇಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಯಾರು ಏನೇ ಜಾತಿ ಪ್ರೇಮ ಮೆರೆದರೂ, ನರೇಂದ್ರ ಮೋದಿ ಅಲೆ ಹಾಗೂ ಬಿಜೆಪಿ ಬಲದಿಂದ ಹೆಚ್ಚು ಮತ ಪಕ್ಷಕ್ಕೆ ಬರಲಿವೆ ಎಂದು ಬಿಜೆಪಿ ಲೆಕ್ಕ ಹಾಕಿಕೊಂಡಿದೆ. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಇಲ್ಲಿ 287 ಮತ ಅಂತರ ಪಡೆದಿತ್ತು. ಬೀಳಗಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಲೀಡ್‌ ಪಡೆದರೆ, ಉಳಿದ್ಯಾವ ಕ್ಷೇತ್ರದಲ್ಲಿ ಲೀಡ್‌ ಪಡೆಯಲು ಆಗಿರಲಿಲ್ಲ. ಹೀಗಾಗಿ ಕಳೆದ ಬಾರಿಯ ಲೀಡ್‌ ಮುರಿದು, ಹೆಚ್ಚು ಮತ ಬರುತ್ತವೆ ಎಂಬ ನಿರೀಕ್ಷೆ ಬಿಜೆಪಿ ಹೊಂದಿದೆ. ಆದರೆ, ಅದು ಬಹುತೇಕ ಕಷ್ಟಸಾಧ್ಯ ಎಂಬುದು, ಬಿಜೆಪಿಯಿಂದ ಮತ್ತೋತ್ತರ ವರದಿ ತಯಾರಿಸಿದವರ ಮಾತು.

ಜಾತಿ ಪ್ರೇಮ ಹೊಸದಲ್ಲ: ಬೀಳಗಿ ಕ್ಷೇತ್ರದಲ್ಲಿ ಜಾತಿ ಪ್ರೇಮದ ರಾಜಕಾರಣ ಹೊಸದಲ್ಲ. ಈ ಹಿಂದಿನ ಹಲವು ಚುನಾವಣೆಗಳಲ್ಲಿ ಅದು ಸಾಬೀತು ಆಗಿದೆ. ಈ ಕ್ಷೇತ್ರದಲ್ಲಿ ಪಂಚಮಸಾಲಿ ಮತ್ತು ಗಾಣಿಗ ಸಮಾಜದಲ್ಲೇ ಪೈಪೋಟಿ ನಡೆಯುತ್ತ ಬಂದಿ ದೆ. ಇವೆರಡು ಸಮಾಜದ ಮಧ್ಯೆ, ರಡ್ಡಿ ಸಮಾಜವೂ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಗಿಂತ, ಆಯಾ ಪಕ್ಷಗಳ ಅಭ್ಯರ್ಥಿಗಳ ಜಾತಿ ಆಧಾರದ ಮೇಲೆಯೇ ಪ್ರಮುಖರು ಚುನಾವಣೆ ನಡೆಸಿದ್ದರು ಎನ್ನಲಾಗಿದೆ.

Advertisement

ಮತ ಸಮೀಕರಣ ಲೆಕ್ಕ: ಕುರುಬ, ಪಂಚಮಸಾಲಿ, ದಲಿತ, ರಡ್ಡಿ ಸಮಾಜದ ಮತಗಳು ಕಾಂಗ್ರೆಸ್‌ಗೆ ಬರುತ್ತವೆ ಎಂದು ಪಕ್ಷ ನೆಚ್ಚಿಕೊಂಡಿದೆ. ಕಾಂಗ್ರೆಸ್‌ ಜಾತಿವಾರು ಮತಗಳ ಸಮೀಕರಣದ ಲೆಕ್ಕ ಮಾಡಿದರೆ, ಬಿಜೆಪಿ ಕೂಡ, ಅಭ್ಯರ್ಥಿಯ ಸ್ವಜಾತಿ ಮತಗಳ ಜತೆಗೆ ಮೋದಿ ಪ್ರಭಾವದಿಂದ ಎಲ್ಲ ಸಮಾಜದ ಮತಗಳೂ ತಮಗೆ ಬಂದಿವೆ ಎಂಬುದು ಈ ಪಕ್ಷದ ಲೆಕ್ಕಾಚಾರ. ಅಲ್ಲದೇ 5049 ಜನ 18ರಿಂದ 19 ವರ್ಷದೊಳಗಿನ ಹೊಸ ಮತದಾರರಿದ್ದು, ಅವರೆಲ್ಲ ಬಿಜೆಪಿ ಪರವಾಗಿಯೇ ಇರುತ್ತಾರೆ ಎಂದು ಬಿಜೆಪಿ ನೆಚ್ಚಿಕೊಂಡಿದೆ.

ಒಟ್ಟಾರೆ, ಈ ಬಾರಿಯ ಬೀಳಗಿ ವಿಧಾನಸಭೆ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ, ಜಾತಿ ಆಧಾರದ ಮೇಲೆ, ಮೋದಿ ಅಲೆಯನ್ನು ಮೂಲೆ ಗುಂಪು ಮಾಡಲಿದೆ ಎಂಬ ವಿಶ್ಲೇಷಣೆ ದೊಡ್ಡ ಮಟ್ಟದಲ್ಲಿ ನಡೆದಿದೆ.

•ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next