Advertisement

ಸಂಕದಗುಂಡಿ ಹೊಳೆಗೆ ನಿರ್ಮಿಸಬೇಕಿದೆ ಕಿಂಡಿ ಅಣೆಕಟ್ಟು

01:18 AM Jan 31, 2020 | Sriram |

ಬೈಂದೂರು: ಕರಾವಳಿ ಜಿಲ್ಲೆಯ ಪ್ರಮುಖ ಸಮಸ್ಯೆ ಕುಡಿಯುವ ನೀರು ಹಾಗೂ ಅಂತರ್ಜಲ ವೃದ್ದಿಸುವ ಕನಸುಗಳಾಗಿವೆ. ಪ್ರತಿವರ್ಷ ನೀರಿನ ಸಮಸ್ಯೆ ವ್ಯಾಪಕವಾಗಿ ಕಾಡಿದರೂ ಸಹ ಅನುಷ್ಠಾನಗೊಳ್ಳುವ ಯೋಜನೆಗಳಿಗೆ ಪೂರಕ ಸ್ಪಂದನೆ ಇರದ ಕಾರಣ ನೂರಾರು ಕೋಟಿ ಅನುದಾನ ಮಂಜೂರಾಗುತ್ತದೆ ಹೊರತು ದೂರದೃಷ್ಟಿತ್ವದ ಉದ್ದೇಶಗಳು ಸಾಕಾರವಾಗುತ್ತಿಲ್ಲ. ಇತರ ಜಿಲ್ಲೆಗಳಲ್ಲಿ ನೀರಿನ ಮೂಲದ ಕೊರತೆಯಿದೆ. ಆದರೆ ಕರಾವಳಿ ಭಾಗದಲ್ಲಿ ವಿಪುಲ ಅವಕಾಶ ಹಾಗೂ ಜಲಮೂಲಗಳಿವೆ. ನೂರಾರು ನದಿಗಳು ವ್ಯರ್ಥವಾಗಿ ಸಮುದ್ರ ಸೇರುತ್ತಿವೆ. ಇಂತಹ ನದಿಗಳಿಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ಕೃಷಿ ಹಾಗೂ ಕುಡಿಯುವ ನೀರಿಗಾಗಿ ಮೀಸಲಾಗಿರುವ ಪಶ್ಚಿಮ ವಾಹಿನಿ ಯೋಜನೆಗಳ ಸಮರ್ಪಕ ಅನುಷ್ಠಾನ ಕರಾವಳಿ ಭಾಗದಲ್ಲಿ ಆಗಬೇಕಿದೆ.

Advertisement

ಸಂಕದಗುಂಡಿ ಹೊಳೆಗೆ ಬೇಕು ಅಣೆಕಟ್ಟು
ಉಡುಪಿ ಜಿಲ್ಲೆಯ ಶಿರೋಭಾಗವಾದ ಶಿರೂರಿನ ಗಡಿಭಾಗದಲ್ಲಿ ಸಂಕದಗುಂಡಿ ಹೊಳೆ ಹರಿಯುತ್ತದೆ. ಈ ನದಿ ಮೂಲಕ ಸಹ್ಯಾದ್ರಿ ತಪ್ಪಲಿನ ಕೊಸಳ್ಳಿ ಜಲಪಾತದಿಂದ ಉಗಮವಾಗುತ್ತದೆ. ಆಲಂದೂರು, ತೂದಳ್ಳಿ, ಬಾಳಿಗದ್ದೆ, ಕೋಟೆಮನೆ ಸೇರಿದಂತೆ ಹತ್ತಾರು ಊರು ದಾಟಿ ಅರಬೀ ಸಮುದ್ರ ಸೇರುತ್ತದೆ. ಈ ನದಿಗೆ “ಸಂಕದಗುಂಡಿ ಹೊಳೆ’
ಎಂದು ಕರೆಯುತ್ತಾರೆ. ಪ್ರಸ್ತುತ ಶಿರೂರು ಹಾಗೂ ಜಿಲ್ಲೆಯ ಗಡಿಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿರುವುದರಿಂದ ಈ ನದಿಗೆ ಶಿರೂರು ಬಳಿ ಅಣೆಕಟ್ಟು ನಿರ್ಮಿಸಿದರೆ ಸಾವಿರಾರು ಎಕರೆ ವ್ಯಾಪ್ತಿಯ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಮಾತ್ರವಲ್ಲದೆ ಅಂರ್ತಜಲ ವೃದ್ದಿಯಾಗುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರವಾಗುತ್ತದೆ.

ಶಿರೂರು ಹಾಗೂ ಜಿಲ್ಲೆಯ ಗಡಿಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿರುವುದರಿಂದ ಈ ನದಿಗೆ ಶಿರೂರು ಬಳಿ ಅಣೆಕಟ್ಟು ನಿರ್ಮಿಸಿದರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ, ಅಂತರ್ಜಲ ವೃದ್ಧಿಯಿಂದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಬಹುದಾಗಿದೆ.

ಪಶ್ಚಿಮ ವಾಹಿನಿ ಯೋಜನೆ ಎಂದರೇನು
ಪಶ್ಚಿಮವಾಹಿನಿ ಯೋಜನೆ ಮೂಲ ಉದ್ದೇಶ ಸಹ್ಯಾದ್ರಿಯಿಂದ ಅರಬೀ ಸಮುದ್ರ ಸೇರುವ ನದಿಗಳಿಗೆ ಚೆಕ್‌ಡ್ಯಾಂ, ಕಿಂಡಿ ಅಣೆಕಟ್ಟು ಮೂಲಕ ನೀರನ್ನು ತಡೆದು ಅಂತರ್ಜಲ ಹೆಚ್ಚಿಸುವುದಾಗಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಪದ್ದತಿಯ ಚೆಕ್‌ ಡ್ಯಾಂ ನಿರ್ಮಿಸುತ್ತಿದ್ದರು. ಬಳಿಕ ಇದಕ್ಕೆ ಹೊಸ ರೂಪ ನೀಡಿ “ಪಶ್ಚಿಮವಾಹಿನಿ ಯಶಸ್ವಿ ಯೋಜನೆ’ ರೂಪಿಸಲಾಗಿದೆ ಹಾಗೂ ಇದು ಅತ್ಯಂತ ಯಶಸ್ವಿಯಾಗಿದೆ.

7.5 ಕೋಟಿ ರೂ. ಯೋಜನೆ ತಯಾರಿ
ಈಗಾಗಲೇ ಸಂಕದಗುಂಡಿ ಹೊಳೆಗೆ ಕೋಟೆಮನೆ ಬಳಿ ಅಣೆಕಟ್ಟು ನಿರ್ಮಿಸಲು 7.5 ಕೋ.ರೂ. ಮೊತ್ತದ ಯೋಜನೆ ತಯಾರಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಈ ಯೋಜನೆ ಸಿದ್ದಪಡಿಸಿದ ನಾಲ್ಕು ವರ್ಷಗಳಿಂದ ಇದರ ಮಂಜೂರಾತಿ ಪ್ರಯತ್ನ ನಡೆಯುತ್ತಿದೆ. ಪ್ರಸ್ತುತ ಶಾಸಕರು, ಸಂಸದರು ಈ ಯೋಜನೆಯ ಮಂಜೂರಾತಿಗೆ ಮನವಿ ಪಡೆದಿದ್ದು ಸಾಕಾರವಾಗುವ ನಿರೀಕ್ಷೆಯಿದೆ.

Advertisement

ಕಿಂಡಿ ಅಣೆಕಟ್ಟಿಗೆ ಪ್ರಾಧಾನ್ಯತೆ
ಬೈಂದೂರು ಕ್ಷೇತ್ರದಲ್ಲಿ ಕುಡಿಯುವ ನೀರು , ಕೃಷಿಕರಿಗೆ ಅನುಕೂಲವಾಗುವ ಕಿಂಡಿ ಅಣೆಕಟ್ಟು ನಿರ್ಮಿಸಲು ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಪಶ್ಚಿಮ ವಾಹಿನಿ ಯೋಜನೆಯಲ್ಲಿ ಸಾಕಷ್ಟು ಮಹತ್ವಕಾಂಕ್ಷೆಯ ಯೋಜನೆ ಸಾಕಾರಗೊಳ್ಳಲಿವೆ. -ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ

ವ್ಯಾಪಕ ನೀರಿನ ಸಮಸ್ಯೆ
ಶಿರೂರಿನಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ, ಅದರಲ್ಲೂ ಹಡವಿನಕೋಣೆ, ಆರ್ಮಿ, ಕೆಸರಕೋಡಿ, ಅಳ್ವೆಗದ್ದೆ, ಕಳಿಹಿತ್ಲು ಮುಂತಾದ ಕಡೆ ಬೇಸಗೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿಯಿದೆ.ಹೀಗಾಗಿ ಸಂಕದಗುಂಡಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸಿದರೆ ಅಂತರ್ಜಲ ಹೆಚ್ಚುವ ಜತೆಗೆ ಶಾಶ್ವತ ಪರಿಹಾರ ದೊರೆತಂತಾಗುತ್ತದೆ.
– ರಘುರಾಮ ಕೆ. ಪೂಜಾರಿ, ಸದಸ್ಯರು, ಗ್ರಾಮ ಪಂಚಾಯತ್‌, ಶಿರೂರು

ಬೈಂದೂರು ಭಾಗದ ಹೊಳೆಗಳ ನೀರಿನ ಪ್ರಮಾಣ
ನದಿಗಳ ಹೆಸರು ಟಿ.ಎಂ.ಸಿ
ಸಂಕದಗುಂಡಿ 8.11
ಕುಂಬಾರ ಹೊಳೆ 06.05
ಬೈಂದೂರು ಹೊಳೆ 2.15
ಉಪ್ಪುಂದ ಹೊಳೆ 13.37
ಎಡಮಾವಿನ ಹೊಳೆ 58.12
ಚಕ್ರ ಹೊಳೆ 51.58
ವಾರಾಹಿ 119.79

– ಅರುಣ ಕುಮಾರ್‌, ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next