Advertisement

ಜಲಾರೋಹಣ!

09:43 AM Sep 03, 2019 | sudhir |

ನಮ್ಮಲ್ಲಿ ಬಹುತೇಕ ನೀರಿನ ಸಂಪರ್ಕಗಳು ಗುರುತ್ವಾಕರ್ಷಣೆಯಿಂದಾಗಿ ಹರಿಯುವಂಥದ್ದೇ ಆಗಿವೆ. ನೀರನ್ನು ಮೇಲ್ಮಟ್ಟದಲ್ಲಿ ಶೇಖರಿಸಿ ಕೆಳಮಟ್ಟಕ್ಕೆ ಹರಿಸಲಾಗುತ್ತದೆ. ಇದು ಬಹಳ ಹಳೆಯ ವ್ಯವಸ್ಥೆಯಾಗಿದ್ದು, ಸಾಮಾನ್ಯವಾಗಿ ಹೆಚ್ಚಿನ ತೊಂದರೆ ಏನೂ ಬರುವುದಿಲ್ಲ. ಆದರೂ ಕೆಲವೊಮ್ಮೆ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ನೀರು ಕೆಳಗಿನಿಂದ ಮೇಲಕ್ಕೆ ಹರಿದರೆ ನಮಗೆ ಆಶ್ಚರ್ಯವಾಗುತ್ತದೆ. ಜೊತೆಗೆ, ಕಿರಿಕಿರಿಯೂ ಆಗುತ್ತದೆ.

Advertisement

ಈ ಹಿಂದೆ ಮನೆಗಳಿಗೆ ಕೇವಲ ಕಾರ್ಪೊರೇಷನ್‌ ನೀರಿನ ಕೊಳವೆ ಒಂದು ಇರುತ್ತಿತ್ತು. ಇದು ನೇರವಾಗಿ ಸೂರಿನ ಮೇಲಿದ್ದ ಟ್ಯಾಂಕ್‌ ಅನ್ನು ಸೇರುತ್ತಿತ್ತು. ನಂತರ ಅಲ್ಲಿಂದ ಮನೆಯ ಒಳಗಿನ ನಾನಾ ಸಂಪರ್ಕಗಳು ಆಗುತ್ತಿದ್ದವು. ಆದರೆ ಈಗ ಕಾರ್ಪೊರೇಷನ್‌ ನೀರು ನೇರವಾಗಿ ಮೇಲಕ್ಕೆ ಸೇರುವಷ್ಟು ರಭಸದಿಂದ ಬರುವುದಿಲ್ಲ, ಮನೆಯ ಕೆಳಮಟ್ಟದಲ್ಲಿ ಇರುವ ಸಂಪ್‌ ಟ್ಯಾಂಕ್‌ಗೆ ನೀರು ಬಂದರೆ ಸಾಕಪ್ಪ ಎನ್ನುವ ಹಾಗೆ ಆಗಿದೆ. ಒಮ್ಮೆ ನೀರು ಕೆಳಕ್ಕೆ ಸೇರಿದರೆ ಅದನ್ನು ಪಂಪ್‌ ಮೂಲಕ ಮೇಲಕ್ಕೆ ಎತ್ತಬೇಕು. ಅಲ್ಲಿಗೆ, ಒಂದು ಹೆಚ್ಚುವರಿ ಕೊಳವೆ ಸಂಪರ್ಕ ಬೇಕಾದಂತೆ ಆಗುತ್ತದೆ.

ಸಂಪರ್ಕಗಳು ಹೆಚ್ಚಿದಷ್ಟೂ ತೊಂದರೆ ಹೆಚ್ಚು
ಮನೆಯಲ್ಲಿ ಎರಡು ಮೂರು ಶೌಚಗೃಹಗಳಿದ್ದರೆ ಹೆಚ್ಚು ಕೊಳವೆಗಳ ಸಂಪರ್ಕಗಳಾಗುತ್ತದೆ. ಜೊತೆಗೆ, ಅಡುಗೆಮನೆಯಲ್ಲಿ ಬಿಸಿನೀರು, ಕಾರ್ಪೊರೇಷನ್‌ ನೀರು ಹಾಗೂ ಬೋರ್‌ ನೀರು ಇದ್ದರೆ ಅದಕ್ಕೊಂದೊಂದು ಸಂಪರ್ಕ ನೀಡಬೇಕಾಗುತ್ತದೆ. ಇದರ ಜೊತೆಗೆ ವಾಶ್‌ ಬೇಸಿನ್‌, ಕಾರು- ಬೈಕು ತೊಳೆಯಲು ಇಲ್ಲವೆ ಗಾರ್ಡನ್‌ಗೆ ಎಂದಾದರೆ ಮತ್ತೂಂದೆರಡು ಮೂರು ಸಂಪರ್ಕಗಳನ್ನು ಕೊಡಬೇಕಾಗುತ್ತದೆ. ಇಷ್ಟೆಲ್ಲ ಸಂಪರ್ಕಗಳನ್ನು ಒಂದೇ ಬಾರಿಗೆ ಬಳಸದಿದ್ದರೂ, ಒಂದೆರಡನ್ನು ಒಮ್ಮೆಲೇ ಬಳಸುವುದನ್ನು ತಪ್ಪಿಸಲು ಕಷ್ಟ ಆಗಬಹುದು. ಆದುದರಿಂದ ನೇರವಾಗಿ ನೀರು ಬಯಸುವ ಪ್ರತಿ ಕೋಣೆಗೂ ಒಂದೊಂದು ಕನೆಕ್ಷನ್‌ ಅನ್ನು ಸೂರಿನ ಮೇಲಿನ ಟ್ಯಾಂಕ್‌ನಿಂದ ತರಲಾಗುತ್ತದೆ. ಈ ಮೂಲಕ ನೀರಿನ ಪ್ರಷರ್‌ ಕಡಿಮೆ ಆಗದಂತೆ ನೋಡಿಕೊಳ್ಳಬಹುದು! ಆದರೆ ಹೀಗೆ ನಾಲ್ಕಾರು ಕನೆಕ್ಷನ್‌ ಗಳನ್ನು ಮೇಲಿನಿಂದ ಕೆಳಕ್ಕೆ ತರಬೇಕಾದರೆ, ಅವು ಒಂದಕ್ಕೊಂದು ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು! ಇಲ್ಲದಿದ್ದರೆ ನೀರಿನ ಹಿಮ್ಮುಖ ಹರಿವನ್ನು ತಪ್ಪಿಸಲು ಹರಸಾಹಸ ಪಡಬೇಕಾಗುತ್ತದೆ. ಮೊದಲ ಮಹಡಿಯ ಟಾಯ್ಲೆಟ್ಟಿನ ಫ್ಲಷ್‌ ಟ್ಯಾಂಕಿನ ಸಂಪರ್ಕವನ್ನೇ ಕೆಳಗಿನ ಶೌಚಗೃಹದ ಕೊಳಾಯಿಗೆ ಕೊಟ್ಟಿದ್ದರೆ, ಅದು ಕೆಳ ಮಟ್ಟದಲ್ಲಿ ಇರುವುದರಿಂದ, ಮೇಲುಗಡೆ ಇರುವ ಫ್ಲಷ್‌ ಟ್ಯಾಂಕಿನ ನೀರನ್ನು ಸೈಫ‌ನ್‌ ಮೂಲಕ ಹೀರಿಬಿಡಬಹುದು!

ಪ್ರತಿ ಟಾಯ್ಲೆಟ್‌ಗೂ ಪ್ರತ್ಯೇಕ ಸಂಪರ್ಕ
ಸೂರಿನ ಮೇಲಿರುವ ಟ್ಯಾಂಕ್‌ನಿಂದ ನೇರವಾಗಿ ಕನೆಕ್ಷನ್‌ ನೀಡಿದರೆ, ಬ್ಯಾಕ್‌ ಫ್ಲೋ ತೊಂದರೆಯನ್ನು ನಿವಾರಿಸಬಹುದು. ಹೀಗೆ ಪ್ರತ್ಯೇಕವಾಗಿ ಸಂಪರ್ಕ ನೀಡುವಾಗ ಸೂರಿನ ಟ್ಯಾಂಕಿನ ಬಳಿ ಇಲ್ಲವೇ ಇತರೆ ಅನುಕೂಲಕರ ಸ್ಥಳದಲ್ಲಿ ಕಡ್ಡಾಯವಾಗಿ “ಏರ್‌ ಪೈಪ್‌’, ಅಂದರೆ ಗಾಳಿ ಆಡಲು ಅನುಕೂಲವಾಗುವ ರೀತಿಯಲ್ಲಿ ತೆರೆದೆ ಕೊನೆಯ ಕೊಳವೆಗಳನ್ನು ಅಳವಡಿಸಬೇಕಾಗುತ್ತದೆ. ಈ ಮೂಲಕ ಗಾಳಿ ಬಿಗಿಗೊಂಡು- ಲಾಕ್‌ ಆಗಿ ನೀರು ಹರಿಯುವುದು ಕಡಿಮೆ ಆಗುವುದು, ಇಲ್ಲವೇ, ನಿಂತು ಹೋಗುವುದನ್ನೂ ತಡೆಯಬಹುದು. ಅನೇಕ ಬಾರಿ ನೀರು ಹಿಂದಕ್ಕೆ ಹರಿಯಲು ಏರ್‌ಲಾಕ್‌ಗಳೂ ಕಾರಣವಾಗಿರುತ್ತವೆ. ಗಾಳಿ ಬಿಗಿಗೊಂಡು ಒತ್ತಡಕ್ಕೆ ಇಲ್ಲವೆ ವ್ಯಾಕ್ಯೂಮ್‌ಗೆ ಒಳಪಟ್ಟರೆ, ಅದೊಂದು ರೀತಿಯ ಸುತ್ತಿಗೆಯಲ್ಲಿ ಹೊಡೆದಂತೆ (ಏರ್‌ ಹ್ಯಾಮರಿಂಗ್‌) ಶಬ್ದವನ್ನು ನೀಡಬಹುದು! ಆದುದರಿಂದ ಪ್ರತಿ ನೀರಿನ ಸಂಪರ್ಕಕ್ಕೂ ಒಂದೊಂದು ಏರ್‌ ಪೈಪ್‌(ಗಾಳಿ ಕೊಳವೆ) ನೀಡಬೇಕಾಗುತ್ತದೆ. ನೀರಿನ ಸಂಪರ್ಕ ಬಯಸುವ ಪ್ರತಿ ಕೋಣೆಗೂ ಒಂದೊಂದು ಸಂಪರ್ಕ ನೀಡುವುದಕ್ಕೆ ಮತ್ತೂಂದು ಕಾರಣವಿದೆ. ಅದೇನೆಂದರೆ, ಎಲ್ಲ ಕೋಣೆಗಳಲ್ಲೂ ಕೊಳಾಯಿಗಳನ್ನು ತೆರೆದಿಟ್ಟರೂ, ನೀರಿನ ಒತ್ತಡ ತಗ್ಗದೆ, ರಭಸದಿಂದ ಹರಿಯುತ್ತದೆ ಎನ್ನುವುದು.

ವಿವಿಧ ಸಾಧನಗಳ ಮಟ್ಟವನ್ನು ಗಮನಿಸಿ
ಇತ್ತೀಚಿನ ದಿನಗಳಲ್ಲಿ ಸೋಲಾರ್‌ ನೀರು- ಸೂರ್ಯ ರಶ್ಮಿಯಿಂದ ನೀರು ಕಾಯಿಸುವುದು ಸಾಮಾನ್ಯವಾಗಿರುತ್ತದೆ. ಕೆಲವೊಂದು ತಯಾರಕರು ಈ ಸಾಧನದ ಮೇಲ್ಮಟ್ಟದಲ್ಲಿ ಮತ್ತೂಂದು ಟ್ಯಾಂಕ್‌ ಅಳವಡಿಸಲು ಹೇಳುತ್ತಾರೆ. ಈ ಟ್ಯಾಂಕ್‌ ನಮ್ಮ ಮಾಮೂಲಿ ಸೂರಿನ ಟ್ಯಾಂಕ್‌ಗಿಂತ ಎತ್ತರದಲ್ಲಿ ಇರುವುದರಿಂದ, ಇಲ್ಲಿಯೂ ಬ್ಯಾಕ್‌ ಫ್ಲೋ ತೊಂದರೆ ಬರಬಹುದು.

Advertisement

ಆದುದರಿಂದ ಇಂಥ ಸ್ಥಳದಲ್ಲೂ ಏಕಮುಖ ವಾಲ್‌Ì ಗಳ ಬಳಕೆ ಕಡ್ಡಾಯವಾಗಿರುತ್ತದೆ. ಅದೇ ರೀತಿಯಲ್ಲಿ ಕೆಲವೊಂದು ಸಲಕರಣೆಗಳಿಗಳಿಗೂ ಹಿಮ್ಮುಖವಾಗಿ ಹರಿಯುವ ತೊಂದರೆಯಿಂದ ತಪ್ಪಿಸಲು ಏಕಮುಖ ವಾಲ್‌Ìಗಳನ್ನು ಬಳಸಬೇಕಾಗುತ್ತದೆ. ಬಹುತೇಕ ಸಂಪರ್ಕಗಳು ಗುರುತ್ವಾಕರ್ಷಣೆಯಿಂದಾಗೇ ಕಾರ್ಯ ನಿರ್ವಹಿಸುವುದರಿಂದ, ನೀರಿನ ಏಕಮುಖ ಚಲನೆಗೆ ಅನುಕೂಲಕರವಾದ ವಾಲ್‌Ìಗಳನ್ನು ಬಳಸಬೇಕು. ಕೆಲವೊಮ್ಮೆ ನಾಲ್ಕಾರು ದಿನ ಬಿಸಿಲಿರದಿದ್ದರೆ, ಸೋಲಾರ್‌ ನೀರು ಸಾಕಷ್ಟು ಬಿಸಿ ಇರುವುದಿಲ್ಲ. ಇದಕ್ಕೆಂದು ಗೀಸರ್‌ ಒಂದನ್ನು ಅಳವಡಿಸಿದ್ದರೆ, ಇದರ ನೀರು ಕೆಳಗೆ ಹರಿಯುವ ಬದಲು ಮೇಲಕ್ಕೆ ಹರಿಯಲೂ ಬಹುದು. ಇಲ್ಲೂ ಕೂಡ ಏಕಮುಖ ವಾಲ್‌Ì ನೀಡಬೇಕಾಗುತ್ತದೆ.
ನೀರು, ಸ್ವಾಭಾವಿಕವಾಗಿಯೇ ತನ್ನ ಮುನ್ನುಗ್ಗುವ ಗುಣದಿಂದಾಗಿ ಮೇಲು ಮಟ್ಟದಿಂದ ಕೆಳಕ್ಕೆ ಹರಿಯುತ್ತದೆ, ಇದಕ್ಕೆ ಅಡೆತಡೆ ಆಗದಂತೆ ನೋಡಿಕೊಂಡರೆ ನಮ್ಮ ಮನೆಯಲ್ಲಿ ಬಹುಕಾಲ ಬ್ಯಾಕ್‌ ಫ್ಲೋ ತೊಂದರೆ ಆಗದಂತೆ ತಡೆಯಬಹುದು.

ಬಿಸಿನೀರು- ತಣ್ಣೀರು ಬೆರಕೆ ತೊಂದರೆ
ಕೆಲವೊಮ್ಮೆ ತಣ್ಣೀರಿನ ಕೊಳಾಯಿಯನ್ನು ತೆರೆದರೆ ಅದು ಬಿಸಿನೀರನ್ನು ಹೊರಹಾಕಿದರೆ ನಮಗೆ ಆಶ್ಚರ್ಯವಾಗದೇ ಇರದು! ಹೀಗಾಗಲು ಮುಖ್ಯ ಕಾರಣ- ಬಿಸಿ ಹಾಗೂ ತಣ್ಣೀರನ್ನು ಬೆರೆಸಲು ನೀಡಿರುವ ಮಿಕ್ಸರ್‌ಗಳ ಅಸಮರ್ಥ ನಿರ್ವಹಣೆ. ಬಿಸಿ ನೀರಿನ ಟ್ಯಾಂಕ್‌ ಮೇಲಿದ್ದು, ಅದರ ಒತ್ತಡ ಹೆಚ್ಚು ಇರುವುದರಿಂದ, ಸ್ನಾನ ಮಾಡಲು ಬೇಕಾಗಿರುವ ಹದವಾದ ನೀರನ್ನು ನಮ್ಮ ಇಚ್ಛೆಗೆ ಅನುಕೂಲವಾಗಿ ಬೆರೆಸುವ ಕೊಳಾಯಿ- ಮಿಕ್ಸರ್‌ನಲ್ಲಿನ ಒತ್ತಡದ ಏರುಪೇರಿನಿಂದಾಗಿ ಈ ಮಾದರಿಯ ಬ್ಯಾಕ್‌ ಫ್ಲೋ ತೊಂದರೆಗಳು ಆಗುತ್ತದೆ. ಇದನ್ನು ತಪ್ಪಿಸಲು ಸೂಕ್ತ ಸ್ಥಳದಲ್ಲಿ “ಒನ್‌ ವೇ ವಾಲ್‌Ì’- ಎಕಮುಖವಾಗಿ ಹರಿಯುವಂತೆ ಮಾಡುವ ಸಾಧನವನ್ನು ಬಳಸಬೇಕು. ಈ ಮಾದರಿಯ ವಾಲ್‌Ìಗಳು ನೀರನ್ನು ಹಿಂದೆ ಹರಿಯದಂತೆ ತಡೆಯುತ್ತವೆ. ಇವನ್ನು ಪ್ರತಿ ಕೊಳವೆಗೂ ಬಳಸಬಹುದಾದರೂ, ಪ್ರತಿ ವಾಲ್ವಿನ ಬಳಕೆಯೂ ನೀರಿನ ಒತ್ತಡವನ್ನು ಒಂದು ಮಟ್ಟಕ್ಕೆ ಕಡಿಮೆ ಮಾಡಿಬಿಡುತ್ತದೆ. ಹಾಗಾಗಿ ನಿಮ್ಮ ಸೂರಿನ ಟ್ಯಾಂಕ್‌, ಸಾಕಷ್ಟು ಎತ್ತರದಲ್ಲಿದ್ದರೆ ನಿರಾಯಾಸವಾಗಿ ಹೆಚ್ಚುವರಿ ಏಕಮುಖ ವ್ಯಾಲ್‌Ì ಗಳನ್ನು ಬಳಸಬಹುದು.

ಸಂಪರ್ಕಗಳು ಸರಳವಾಗಿರಲಿ
ಸೂರಿನ ಟ್ಯಾಂಕ್‌ನಿಂದ ಹತ್ತಾರು ಸಂಪರ್ಕಗಳು ಬರುವಾಗ, ಅವುಗಳೆಲ್ಲವೂ ಆದಷ್ಟೂ ನೇರವಾಗಿ, ಒಂದನ್ನೊಂದು ಅಡ್ಡ ಹಾಯದೆ ಇರುವಂತೆ ನೋಡಿಕೊಳ್ಳಬೇಕು. ಇದು ಸಂಪರ್ಕದ ಉದ್ದವನ್ನು ಕಡಿಮೆ ಮಾಡುವುದರ ಜೊತೆಗೆ ಏನಾದರೂ ತೊಂದರೆಯಾದರೆ, ಅದರ ಮೂಲ ಕಂಡು ಹಿಡಿಯಲು ಸುಲಭ ಆಗುತ್ತದೆ. ನಾಲ್ಕಾರು ಕೊಳವೆಗಳನ್ನೂ ಕೂಡ ಅಡ್ಡಾದಿಡ್ಡಿಯಾಗಿ ಹಾಕಿದ್ದರೆ, ಅವುಗಳ ಮೂಲ ಹಾಗೂ ತೊಂದರೆಗಳನ್ನು ಪತ್ತೆ ಹಚ್ಚಲು ಹರಸಾಹಸ ಪಡಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗೆ – 98441 32826

 – ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next