Advertisement

ಜಲವಿವಾದ: ಕೇಂದ್ರದ ಮಧ್ಯಸ್ಥಿಕೆಗೆ ಆಗ್ರಹ

03:27 AM Jun 12, 2019 | sudhir |

ಬೆಂಗಳೂರು: ಮಹಾದಾಯಿ, ಮೇಕೆದಾಟು ಸಮತೋಲನ ಅಣೆಕಟ್ಟು ಯೋಜನೆ ಸಹಿತ ಅಂತಾರಾಜ್ಯ ಜಲವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಕೇಂದ್ರ ಸರಕಾರವು ಮಧ್ಯಸ್ಥಿಕೆ ವಹಿಸಬೇಕೆಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ. ದಿಲ್ಲಿಯಲ್ಲಿ ಮಂಗಳವಾರ ನಡೆದ ಜಲ ಸಂರಕ್ಷಣೆ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛ ಭಾರತ ಆಂದೋಲನ ಕುರಿತ ಎಲ್ಲ ರಾಜ್ಯಗಳ ಜಲ ಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಅವರು ಈ ಆಗ್ರಹ ಮಾಡಿದ್ದಾರೆ.

Advertisement

ಕಾವೇರಿ, ಮಹಾದಾಯಿ, ಕೃಷ್ಣಾ, ತುಂಗಭದ್ರಾ ಸಹಿತ ಕರ್ನಾಟಕದ ಯಾವುದೇ ನದಿಯ ನೀರು ವೃಥಾ ಸಮುದ್ರದ ಪಾಲಾಗಬಾರದು. ಅದು ಸದ್ಬಳಕೆಯಾಗಬೇಕು ಎಂಬುದು ಕರ್ನಾಟಕದ ಸದಾಶಯವಾಗಿದೆ. ಸ್ಪಷ್ಟ ಜನಾದೇಶದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಈ ದಿಸೆಯಲ್ಲಿ ದೃಢ ಹೆಜ್ಜೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರಕಾರವು ಮದಾದಾಯಿ ಹಾಗೂ ಕೃಷ್ಣಾ ಯೋಜನೆಗಳ ಅನುಷ್ಠಾನ ಸಂಬಂಧ ಅಧಿಸೂಚನೆ ಹೊರಡಿಸಬೇಕು. ಅದೇ ರೀತಿ ಮೇಕೆದಾಟು ವಿಸ್ತೃತ ಯೋಜನೆ ವರದಿಗೆ (ಡಿಪಿಆರ್‌) ಅನುಮತಿ ನೀಡಬೇಕು ಎಂದು ಸಚಿವ ಶಿವಕುಮಾರ್‌ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ತಮಿಳುನಾಡು ಸಹಿತ ಯಾವುದೇ ನೆರೆ ರಾಜ್ಯದ ಜತೆಗೆ ಕರ್ನಾಟಕ ವಿವಾದ, ಜಗಳ ಬಯಸುವುದಿಲ್ಲ ಎಂದು ಡಿಕೆಶಿ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next