ಅಫಜಲಪುರ: ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೋವಿಡ್ ಭೀತಿ ಮತ್ತೇ ಆವರಿಸುತ್ತಿದೆ. ಹೀಗಾಗಿ ರಾಜ್ಯದ ಗಡಿ ಗ್ರಾಮಗಳಲ್ಲಿ ಮತ್ತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಕೋವಿಡ್ ಭೀತಿಯಿಂದ ಗಡಿಯೊಳಗೆ ಬರುವ ಎಲ್ಲರನ್ನು ಪರೀಕ್ಷೆ ಮಾಡಲಾಗುತ್ತಿದ್ದು, ಇದಕ್ಕಾಗಿ ಗಡಿಯಲ್ಲಿ ಚೆಕ್ ಪೋಸ್ಟ್ ತೆರೆದು ಸಿಬ್ಬಂದಿ ನೇಮಿಸಲಾಗಿದೆ. ಆದರೆ ನೆರಳು, ನೀರಿನ ವ್ಯವಸ್ಥೆ ಇಲ್ಲದ್ದರಿಂದ ಸಿಬ್ಬಂದಿ ಹೈರಾಣಾಗಿದ್ದಾರೆ.
ತಾಲೂಕಿನ ಬಳೂರ್ಗಿ, ಮಾಶಾಳ ಗ್ರಾಮಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ನೀರು ನೆರಳಿನ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಚೆಕ್‌ಪೋಸ್ಟ್ ಸಿಬ್ಬಂದಿ ಬಿಸಿಲಲ್ಲೇ ನಿಂತು ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಸಲ ಲಾಕ್ ಡೌನ್ ಸಂದರ್ಭದಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರಿಯಾಗಿ ಟೆಂಟ್, ನೀರು, ನೆರಳಿನ ವ್ಯವಸ್ಥೆ ಮಾಡಿರಲಿಲ್ಲ.ಆಮೇಲೆ ತಗಡಿನ ಶೆಡ್ ನಿರ್ಮಿಸಲಾಗಿತ್ತಾದರೂ ಅವೆಲ್ಲ ಮಳೆ-ಬಿರುಗಾಳಿಯಿಂದ ಹಾರಿ ಹೋಗಿದ್ದವು, ಇದರಿಂದ ಸಿಬ್ಬಂದಿಗೂ ಗಾಯಗಳಾಗಿದ್ದವು. ಆದರೆ ಈ ಬಾರಿ ಚೆಕ್‌ಪೋಸ್ಟ್‌ಗಳಲ್ಲಿ ಯಾವ ಶೆಡ್ಡೂ ಇಲ್ಲ, ಟೆಂಟೂ ಇಲ್ಲದಂತಾಗಿದೆ.
ಮಹಿಳಾ ಸಿಬ್ಬಂದಿಗೆ ಶೌಚಾಲಯ ಸಮಸ್ಯೆ: ಚೆಕ್‌ಪೋಸ್ಟ್ ಗಳಲ್ಲಿ ಮಹಿಳಾ ಶೌಚಾಲಯ ಇಲ್ಲದ್ದರಿಂದ ಮಹಿಳಾ ಸಿಬ್ಬಂದಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೇ ಕುಡಿಯುವ ನೀರು, ಊಟದ ಸಮಸ್ಯೆ ಕಾಡುತ್ತಿದೆ. ಇದನ್ನು ಎದುರಿಸಿಯೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಸ್ವಂತ ಕಟ್ಟಡದ ಅವಶ್ಯಕತೆ ಇದೆ: ಗಡಿಯಲ್ಲಿ ಚೆಕ್‌ಪೋಸ್ಟ್ ಕೇವಲ ಕೋವಿಡ್‌ಗಾಗಿ ಅಲ್ಲ. ಅನ್ಯ ಚಟುವಟಿಕೆಗಳಿಗೂ ಕಡಿವಾಣ ಹಾಕಲು ಸಾಧ್ಯವಾಗಲಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕಾಗಿ ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ಚೆಕ್‌ಪೋಸ್ಟ್‌ಗೆ ಕಾಯಂ ಕಟ್ಟಡ ನಿರ್ಮಿಸಿ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.
ಭರವಸೆ ಈಡೇರಿಸುವರೇ ಸಂಸದರು: ಕಳೆದ ಸಲ ಚೆಕ್ ಪೋಸ್ಟ್ ಮಾಡಿದಾಗ ಸಂಸದ ಡಾ| ಉಮೇಶ ಜಾಧವ ರಾಜ್ಯದ ಗಡಿ ಗ್ರಾಮಗಳಲ್ಲಿ ಅವಶ್ಯಕತೆ ಇದ್ದಲ್ಲಿ ಶಾಸಕರ ಹಾಗೂ ಸಂಸದರ ಅನುದಾನ ಬಳಸಿ ಗುಣಮಟ್ಟದ ಚೆಕ್‌ಪೋಸ್ಟ್ ನಿರ್ಮಿಸುವುದಾಗಿ ಹೇಳಿದ್ದರು. ಅದು ಇಂದಿಗೂ ಕನಸಾಗಿ ಉಳಿದಿದೆ. ಕಾಯಂ ಚೆಕ್‌ಪೋಸ್ಟ್ ಆದರೆ ಸಿಬ್ಬಂದಿಗೆ ಅನುಕೂಲವಾಗಲಿದೆ. ಇಲಾಖೆ, ಸರ್ಕಾರಕ್ಕೂ ಉತ್ತಮ ಆಡಳಿತದ ಸಂದೇಶ ಜನರಿಗೆ ಕೊಟ್ಟಂತಾಗಲಿದೆ.
ಕಳೆದ ಬಾರಿ ಆದಂತೆ ಈ ಬಾರಿ ಅವಘಡ ಸಂಭವಿಸದ ರೀತಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಅಧಿಕಾರಿಗಳ ಸಭೆ ಕರೆಯುತ್ತೇನೆ.
ಎಂ.ವೈ. ಪಾಟೀಲ, ಶಾಸಕ
ತುರ್ತಾಗಿ ಚೆಕ್‌ಪೋಸ್ಟ್ ಆರಂಭಿಸಬೇಕಿತ್ತು ಮಾಡಿದ್ದೇವೆ. ಶೀಘ್ರವೇ ಚೆಕ್ ಪೋಸ್ಟ್‌ಗಳಲ್ಲಿ ನೀರು, ನೆರಳಿನ ವ್ಯವಸ್ಥೆ ಮಾಡಲಾಗುವುದು.
ರಾಮಚಂದ್ರ ಗಡದೆ, ಎಸಿ, ಕಲಬುರಗಿ
ಅವಶ್ಯಕತೆ ಇದ್ದಲ್ಲಿ ಚೆಕ್‌ಪೋಸ್ಟ್ ಮಾಡುತ್ತಿದ್ದೇವೆ. ಸಿಬ್ಬಂದಿಗೆ ಸಮಸ್ಯೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.
ನಾಗಮ್ಮ ಎಂ.ಕೆ, ತಹಶೀಲ್ದಾರ್
*ಮಲ್ಲಿಕಾರ್ಜುನ ಹಿರೇಮಠ