Advertisement

ಬಾಯಾರಿಕೆ ನೀಗಿಸಲು ಕಲ್ಲಂಗಡಿ ಮೊರೆ

02:44 PM Mar 21, 2022 | Team Udayavani |

ಮಾಗಡಿ: ಈ ಬಾರಿ ಮಾರ್ಚ್‌ನಲ್ಲೇ ಬೇಸಗೆ ಬಿಸಿ ಅನುಭವಕ್ಕೆ ಬರುತ್ತಿದ್ದು, ಬಿಸಿಲಿನ ಝಳಕ್ಕೆ ಜನರು ಹೈರಾಣಾಗಿದ್ದಾರೆ. ಇತ್ತೀಚಿಗಿನ ವರ್ಷಗಳಲ್ಲಿ ಹವಾಮಾನ ಏರುಪೇರು ಸರ್ವೇ ಸಾಮಾನ್ಯವಾಗಿದ್ದು, ಬೇಸಗೆಯ ಬಿಸಿಯೂ ಇದಕ್ಕೆ ಹೊರತಾಗಿಲ್ಲ.

Advertisement

ಬಿಸಿಲಿನ ತಾಪಕ್ಕೆ ಹೆದರಿ ನಗರಗಳಲ್ಲಿ ಮಧ್ಯಾಹ್ನದ ವೇಳೆ ಜನರು ಹೊರಗಡೆ ತಿರುಗಾಡುವುದನ್ನೇ ಕಡಿಮೆ ಮಾಡಿದ್ದಾರೆ. ಆದರೂ ಅನಿವಾರ್ಯ ಕೆಲಸ ಕಾರ್ಯ ಗಳಿಗಾಗಿ ಹೊರಗೆ ಹೋಗಬೇಕಾದ ಪರಿಸ್ಥಿತಿ ಉಂಟಾ ದರೆ ಸೆಕೆಗೆ ಬಸವಳಿದು ಹೋಗುತ್ತಿದ್ದಾರೆ. ಬಾಯಾರಿಕೆ ಹಾಗೂ ಬಿಸಿಲಿನ ತಾಪ ನೀಗಲು ಜನರು ಕಲ್ಲಂಗಡಿ ಮೊರೆ ಹೋಗುವ ದೃಶ್ಯ ನಗರದಲ್ಲಿ ಈಗ ಸಾಮಾನ್ಯವಾಗಿದೆ. ಬೇಸಗೆ ಕಾಲ ಬಂತೆಂದರೆ ಸಾಕು ಹಣ್ಣಿನ ವ್ಯಾಪಾರಿಗಳು ರಸ್ತೆ ಬದಿಗಳಲ್ಲಿ, ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಕಲ್ಲಂಗಡಿ ಹಣ್ಣುಗಳನ್ನು ತಂದು ಮಾರಾಟ ಮಾಡುವುದು ಸರ್ವೇ ಸಾಮಾನ್ಯವಾಗಿದೆ.

ಯಾವುದೇ ತಂಪು ಪಾನೀಯ ಕುಡಿದರೂ ಬಾಯಾರಿಕೆ ಇಂಗವುದಿಲ್ಲ. ಅದರಲ್ಲೂ ಈಗ ರಾಸಾಯನಿಕ ಮಿಶ್ರಿತ ತಂಪು ಪಾನೀಯ ಸೇವನೆ ಕಡಿಮೆ ಮಾಡಿದ್ದಾರೆ. ಮಜ್ಜಿಗೆ, ಎಳನೀರು, ಕಬ್ಬಿನ ರಸ, ದ್ರಾಕ್ಷಾ ರಸ, ಸೌತೆಕಾಯಿ, ಕಲ್ಲಂಗಡಿ ಹಣ್ಣು ಸೇವನೆಗೆ ಹೆಚ್ಚಾಗಿ ಆಸಕ್ತಿ ತೋರುತ್ತಿದ್ದಾರೆ. ಕಲ್ಲಂಗಡಿ ಹಣ್ಣು ಹೆಚ್ಚು ದ್ರವಾಂಶವನ್ನು ಹೊಂದಿರುವುದರಿಂದ ಇದು ಬಾಯಾರಿಕೆ ಇಂಗಿಸುತ್ತದೆ ಎಂಬ ನಂಬಿಕೆಯೂ ಬಹುಜನರಲ್ಲಿದೆ.

ಬೇಡಿಕೆಯ ಜತೆಗೆ ಬೆಲೆಯೂ ಹೆಚ್ಚು: ಕಲ್ಲಂಗಡಿ ಹಣ್ಣಿನ ಬೇಡಿಕೆ ಹೆಚ್ಚಾದಂತೆಲ್ಲ, ಬೆಲೆಯೂ ಏರುತ್ತದೆ. ಕಳೆದ ವರ್ಷ ಕಲ್ಲಂಗಡಿ ಹಣ್ಣು ಕೆಜಿಗೆ 12 ರಿಂದ 15 ರೂ. ಇತ್ತು. ಈ ವರ್ಷ ಈಗಾಗಲೇ ಕೆಜಿಗೆ 20 ರೂ. ನಿಂದ 25 ರೂ. ವರೆಗೆ ಮಾರಾಟವಾಗುತ್ತಿದೆ. ದೊಡ್ಡ ಗಾತ್ರದ ಕಲ್ಲಂಗಡಿ ಹಣ್ಣು 10 ರಿಂದ 12 ಕೆಜಿ ತೂಗುತ್ತದೆ. ಒಂದು ಕಲ್ಲಂಗಡಿ ಹಣ್ಣು 200 ರಿಂದ 250 ರೂ.ಗೆ ಮಾರಾಟವಾಗುತ್ತಿದೆ. ಒಂದು ತುಂಡು ಹಣ್ಣನ್ನು 20 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಬೆಲೆಯ ಬಗ್ಗೆ ಅಷ್ಟೇನೂ ತಲೆಕೆಡಿಸಿ ಕೊಳ್ಳದೆ ಹಣ್ಣು ಖರೀದಿಸಲು ಮುಂದಾಗುತ್ತಿದ್ದಾರೆ.

ರೋಗ ನಿರೋಧಕ ಶಕ್ತಿ: ಬಿ.ಪಿ. ಸಕ್ಕರೆ ಕಾಯಿಲೆ ಇರುವವರೂ ಕಲ್ಲಂಗಡಿ ಹಣ್ಣು ಸೇವನೆ ಮಾಡಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಜತೆಗೆ ಇದರಲ್ಲಿ ರೋಗನಿರೋಧಕ ಶಕ್ತಿ ಇದೆ. ಈ ಕಾರಣಕ್ಕಾಗಿ ಬೇರೆ ಹಣ್ಣಿಗಿಂತ ಕ‌ಲ್ಲಂಗಡಿ ಹಣ್ಣಿನ ಸೇವನೆಗೆ ಜನ ಮುಗಿ ಬೀಳುತ್ತಿದ್ದಾರೆ.

Advertisement

ಕಲ್ಲಂಗಡಿ ಹಣ್ಣನ್ನು ತಮಿಳುನಾಡಿನಿಂದ ಖರೀದಿ ಮಾಡಿ ತರಲಾಗುತ್ತದೆ. ರೈತರು ತೋಟದಿಂದ ನಮಗೆ ಕೆಜಿ ಗೆ 20 ರೂ. ಗೆ ಮಾರಾಟ ಮಾಡುತ್ತಾರೆ. ನಾವು ಅಲ್ಲಿಂದ ಲಾರಿ ಮಾಡಿಕೊಂಡು ಹಣ್ಣುಗಳನ್ನು ತರುತ್ತೇವೆ. ಕೆಲವೊಂದು ಹಣ್ಣು ಕೊಳೆತು ಹೋಗಿರುತ್ತದೆ. ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಸುಂಕ, ಇತರೆ ಖರ್ಚು ಸೇರಿ ನಮಗೆ ಕೆಜಿಗೆ 22 ರೂ. ಖರೀದಿ ಬೆಲೆ ಬೀಳುತ್ತದೆ. 3 ರೂ. ಲಾಭ ಇಟ್ಟುಕೊಂಡು 25 ರೂ. ಗೆ ಮಾರಾಟ ಮಾಡುತ್ತೇವೆ. ಬೇಸಗೆಯಲ್ಲಿ ಮಾತ್ರ ವ್ಯಾಪಾರ ಅಧಿಕವಾಗಿರುತ್ತದೆ. -ಮಾರಿಮುತ್ತು, ಕಲ್ಲಂಗಡಿ ವ್ಯಾಪಾರಿ

ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಬಾಟಲಿ ನೀರು ಬಾಯಾರಿಕೆ ನೀಗುವುದಿಲ್ಲ. ಬೇರೆ ಹಣ್ಣಿಗಿಂತ ಕಲ್ಲಂಗಡಿ ಹಣ್ಣು ಬಾಯಾರಿಕೆ ಇಂಗಿಸುತ್ತದೆ. ಹಣ್ಣಿನ ಬೆಲೆಗಿಂತ ಆರೋಗ್ಯ ಮುಖ್ಯ. ಹಾಗಾಗಿ ಹಣ್ಣಿನ ಸೇವನೆ ಮಾಡುತ್ತೇವೆ. – ರಾಜಣ್ಣ, ಗ್ರಾಹಕ ಶಾನಭೋಗನಹಳ್ಳಿ

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next