ದಾವಣಗೆರೆ: ಮಳೆಗಾಲದ ಭತ್ತಕ್ಕೆ 120 ದಿನಗಳ ಕಾಲ ಭದ್ರಾ ನಾಲೆಯಲ್ಲಿ ನೀರು ಹರಿಸಬೇಕು ಎಂದು ಭಾರತೀಯ ರೈತ ಒಕ್ಕೂಟ (ಭದ್ರಾ ಶಾಖೆ) ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ್ ಶಾಮನೂರು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ ಈಗ 125 ದಿನಕ್ಕೆ ಕೊಡುವಷ್ಟು ನೀರು ಲಭ್ಯ ಇದೆ. ಅಡಕೆ ಲಾಬಿಗೆ… ಮಣಿದಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಮಳೆಗಾಲದ ಭತ್ತಕ್ಕೆ ಕೊಡುವಷ್ಟು ನೀರಿನ ಲಭ್ಯತೆ ಇಲ್ಲ ಎಂದು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ನೀರು ನಿಲ್ಲಿಸುವಂತೆಯೇ ಇಲ್ಲ. 125 ದಿನಕ್ಕೆ ನೀರು ಹರಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಭದ್ರಾ ಜಲಾಶಯದ ಸಂಗ್ರಹಣಾ ಸಾಮರ್ಥ್ಯ 71.535 ಟಿಎಂಸಿ. ಲೈವ್ ಸ್ಟೋರೇಜ್ 37.64 ಟಿಎಂಸಿ. ಡೆಡ್ ಸ್ಟೋರೇಜ್ 8.5 ಟಿಎಂಸಿ, ಮೈಲಾರ ಜಾತ್ರೆ ಸಂದರ್ಭ ಒಳಗೊಂಡಂತೆ ಕುಡಿಯುವ ನೀರಿನ ವ್ಯವಸ್ಥೆಗೆ 1.5 ಟಿಎಂಸಿ ನೀರು ಬೇಕು. ಈಗ ಹಾಲಿ ಜಲಾಶಯದಲ್ಲಿರುವ 29 ಟಿಎಂಸಿಯಲ್ಲಿ ಅಚ್ಚುಕಟ್ಟಿನ ಪ್ರದೇಶದ ಭತ್ತಕ್ಕೆ 125 ದಿನಗಳವರೆಗೆ ನೀರು ಕೊಡಬಹುದು. ಭದ್ರಾ ಜಲಾಶಯದ ಅಧಿಕಾರಿಗಳು ಈ ಹಿಂದೆ ಪ್ರಕಟಣೆಯಲ್ಲಿ ತಿಳಿಸಿರುವಂತೆಯೇ 125 ದಿನಕ್ಕೆ ನೀರು ಹರಿಸಬೇಕು. ಇಲ್ಲದಿದ್ದಲ್ಲಿ, ನಾವೇ ನಮ್ಮ ಪಾಲಿನ ನೀರನ್ನು ತೆಗೆದುಕೊಳ್ಳು ತ್ತೇವೆ ಎಂದು ಎಚ್ಚರಿಸಿದರು.
ಭದ್ರಾ ಜಲಾಶಯದಿಂದ ನೀರು ಹರಿಸಿ 10 ದಿನಗಳ ನಂತರ ಭತ್ತ ಬೆಳೆಯುವಂತಿಲ್ಲ. ಭತ್ತ ಬೆಳೆದರೆ 1956ರ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕಿಲೋ ಮೀಟರ್‌ಗಟ್ಟಲೆ ಉದ್ದದವರೆಗೆ ಅಕ್ರಮ ಪಂಪ್‌ಸೆಟ್‌ಗಳಿಗೆ ನೀರು ತೆಗೆದುಕೊಂಡು ಹೋಗಲಾಗಿದೆ. ದಾವಣಗೆರೆ ತಾಲೂಕಿನ ಹೆದೆ° ಬಳಿ ರೈಲ್ವೆ ಹಳಿ ದಾಟಿಕೊಂಡೇ ಪೈಪ್ ತೆಗೆದುಕೊಂಡು ಹೋಗಲಾಗಿದೆ. ಅಂತಹವರ ವಿರುದ್ಧ ಯಾವ ಕಾರಣಕ್ಕೆ 1956ರ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಜಲಾಶಯದಲ್ಲಿನ 125ಕ್ಕೂ ಆಗುವಷ್ಟು ನೀರಿದ್ದರೂ ಸರಿಯಾಗಿ ನೀರಿನ ನಿರ್ವಹಣೆ ಮಾಡಲಾಗುತ್ತಿಲ್ಲ. ಅನೇಕ ಅಧಿಕಾರಿಗಳಿಗೆ ನೀರಿನ ನಿರ್ವಹಣೆಯ ಬಗ್ಗೆ ಮಾಹಿತಿಯೇ ಇಲ್ಲ. ಮೊದಲು ನೀರಿನ ನಿರ್ವಹಣೆಯ ಬಗ್ಗೆ ತರಬೇತಿ ನೀಡಬೇಕಾಗಿದೆ. ಭದ್ರಾ ಅಚ್ಚುಕಟ್ಟುದಾರರಿಗೆ ನೀರಿದ್ದರೂ ನೀರು ಇಲ್ಲದಂತಾಗುತ್ತಿದೆ. ಕೂಡಲೇ ಸರಿಯಾಗಿ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿಗಳು, ನೀರಾವರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾಲೆ ಮೇಲೆ ಬನ್ನಿ ಎಂದು ಒತ್ತಾಯಿಸಿದರೆ ನನಗೆ ನಾಲೆ, ನೀರು ಏನೂ ಗೊತ್ತಾಗುವುದಿಲ್ಲ ಎನ್ನುತ್ತಾರೆ. ಅಂತಹವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕೂಟದ ಮುಖಂಡ ಬಿ. ನಾಗೇಶ್ವರರಾವ್ ಮಾತನಾಡಿ, ನಾಲೆಯಲ್ಲಿ ನೀರು ಬಿಟ್ಟಿದ್ದಾರೆ ಎಂದು ಅನೇಕ ರೈತರು ಸಾಲ-ಸೋಲ ಮಾಡಿ ಭತ್ತದ ಮಡಿ ಸಿದ್ಧಮಾಡಿಕೊಂಡಿದ್ದಾರೆ. ಈಗ ನೀರು ಕೊಡುವುದಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ರೈತರು ಭತ್ತ ನಾಟಿ ಮಾಡಬೇಕೋ, ಬಿಡಬೇಕೋ ಎಂಬ ಗೊಂದಲದಲ್ಲಿದ್ದಾರೆ. ಇಂತಹ ಕಾರಣದಿಂದಾಗಿಯೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ನಮಗೆ ಹಿಂದೆ ಹೇಳಿದಂತೆಯೇ 125 ದಿನಗಳಿಗೆ ನೀರು ಕೊಡಬೇಕು. ಇಲ್ಲದೇ ಹೋದಲ್ಲಿ ನಮ್ಮ ನೀರನ್ನ ನಾವೇ ಪಡೆದುಕೊಳ್ಳುವುದು ಚೆನ್ನಾಗಿ ಗೊತ್ತಿದೆ. ನೀರಿಗಾಗಿ ಎಂತದ್ದೇ ಹೋರಾಟಕ್ಕೂ ಸಿದ್ಧ ಎಂದು ತಿಳಿಸಿದರು. ಒಕ್ಕೂಟದ ಮಹೇಶ್ವರಪ್ಪ ಸುದ್ದಿ ಗೋಷ್ಠಿಯಲ್ಲಿದ್ದರು.