Advertisement
ಬೆಂಗಳೂರು: ನಗರದಲ್ಲಿ ಈ ಹಿಂದೆ ಹರಿಯುತ್ತಿದ್ದ ವೃಷಭಾವತಿ ನದಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಹಲವು ದಶಕಗಳೇ ಕಳೆದಿದ್ದು, ಸದ್ಯ ಕಣಿವೆ ಸ್ವರೂಪವನ್ನೂ ಉಳಿಸಿಕೊಳ್ಳಲಾಗದ ಸ್ಥಿತಿಯಲ್ಲಿದೆ. ರಾಜಧಾನಿಯ ಕೇಂದ್ರ ಭಾಗಗಳ ಮೂಲಕ ಹಾದು ಹೋಗಿರುವ ವೃಷಭಾವತಿ ಕಣಿವೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಣಿವೆಗೆ ವೈಜ್ಞಾನಿಕವಾಗಿ ರಾಜಕಾಲುವೆಯ ರೂಪ ನೀಡಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಕಾಲುವೆ ಬಹುತೇಕ ಕಡೆ ಒತ್ತುವರಿಯಾಗಿದ್ದು ವಿಸ್ತೀರ್ಣ ಏಕಪ್ರಕಾರವಾಗಿಲ್ಲ.
Related Articles
Advertisement
ಮುಖ್ಯಮಂತ್ರಿ ಸೂಚನೆಗೂ ಜಗ್ಗದ ಪಾಲಿಕೆಮೈಸೂರು ರಸ್ತೆ ಕವಿಕಾ ಕಾರ್ಖಾನೆ ಬಳಿ ಹಾದು ಹೋಗಿರುವ ನಾಲೆಯಲ್ಲಿ ಈ ಹಿಂದೆ 362 ಕ್ಯುಮೆಕ್ಸ್ (ಕ್ಯುಮೆಕ್ಸ್ ಎಂದರೆ ಪ್ರತಿ ಸೆಕೆಂಡ್‌ಗೆ ಹರಿಯುವ ಕ್ಯುಬಿಕ್ ಮೀಟರ್) ನೀರು ಹರಿಯುತ್ತಿತ್ತು. ಇಷ್ಟು ದೊಡ್ಡ ಪ್ರಮಾಣದ ನೀರು ಸರಾಗವಾಗಿ ಹರಿಯಲು 94 ಮೀಟರ್‌ನಷ್ಟು ವಿಶಾಲವಾದ ಕಾಲುವೆಯ ಅಗತ್ಯವಿದೆ. ಆದರೆ, ಕಾಲುವೆಯ ಅಗಲ 70 ಮೀಟರ್ ಪ್ರದೇಶವಿದ್ದ ಕಾರಣ ಆಗಾಗ್ಗೆ ಪ್ರವಾಹ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಾಲುವೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿತ್ತು. ಸ್ವತಃ ಮುಖ್ಯಮಂತ್ರಿಗಳು ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿ ಎರಡು ವರ್ಷ ಕಳೆದರೂ ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಪರಿಣಾಮವಾಗಿ ಸಮಸ್ಯೆ ಜೀವಂತವಾಗಿಯೇ ಉಳಿದಿದೆ. ಹೂಳೆತ್ತಲು ಮುಂದಾಗಿಲ್ಲ
ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಜಂಕ್ಷನ್ ಬಳಿಯಿಂದ ಕವಿಕಾ ಕಾರ್ಖಾನೆ ಹಿಂಭಾಗ ಹಾಗೂ ನಾಯಂಡಹಳ್ಳಿ ಜಂಕ್ಷನ್‌ವರೆಗೆ ವೃಷಭಾವತಿ ನಾಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿದೆ. ಸೇತುವೆಗೆಂದು ಕಾಲುವೆಯಲ್ಲಿ ಹಾಕಲಾದ ಪಿಲ್ಲರ್ ಸುತ್ತಲೂ ಸಾಕಷ್ಟು ಕಸ, ಪ್ಲಾಸ್ಟಿಕ್ ವಸ್ತುಗಳು ಶೇಖರಣೆಯಾಗಿ ನೀರಿನ ಹರಿಯುವಿಕೆಗೆ ಅಡ್ಡಿಯಾಗುತ್ತಿದೆ. ಆದರೆ ಈವರೆಗೆ ಕಾಲುವೆಯಲ್ಲಿನ ಹೂಳೆತ್ತಲು ಪಾಲಿಕೆಯ ಅಧಿಕಾರಿಗಳು ಮುಂದಾಗಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಹೂಳು ತೆಗೆಯಲು ಟೆಂಡರ್ ಆಹ್ವಾನಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ವೃಷಭಾವತಿ ಕಣಿವೆ ಹರಿಯುವ ಮಾರ್ಗ
ಸ್ಯಾಂಕಿ ಕೆರೆ ಭಾಗದಿಂದ ಆರಂಭವಾಗುವ ವೃಷಭಾವತಿ ಕಣಿವೆ ಮಲ್ಲೇಶ್ವರದ ಹಲವು ಭಾಗಗಳ ಮೂಲಕ ಎರಡು ಕವಲಾಗಿ ವಿಭಜನೆಯಾಗುತ್ತದೆ. ಒಂದು ಕಣಿವೆ ಪೀಣ್ಯ ಭಾಗದ ಪ್ರದೇಶದಲ್ಲಿ ಹಾದು ಮೈಸೂರು ರಸ್ತೆ ಸೇರಿದಂತೆ ಮತ್ತೂಂದು ಕಾಲುವೆ ರಾಜಾಜಿನಗರ, ಕೆಂಪೇಗೌಡನಗರ, ಬಾಪೂಜಿನಗರದ ಬಳಿ ಮೈಸೂರು ರಸ್ತೆ ಸೇರುತ್ತದೆ. ಬಳಿಕ ಮೈಸೂರು ರಸ್ತೆಯಲ್ಲಿ ರಾಜರಾಜೇಶ್ವರಿ ನಗರದ ಬಳಿಕ ಜಲಮಂಡಳಿ ನಿರ್ಮಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆಗೊಂಡು ಕೆಂಗೇರಿ-ಕನಕಪುರದ ಮೂಲಕ ಹರಿದು ಕಾವೇರಿ ನದಿಯನ್ನು ಸೇರಿ ತಮಿಳುನಾಡಿಗೆ ಹರಿಯುತ್ತದೆ. * ವೆಂ.ಸುನೀಲ್‌ಕುಮಾರ್