Advertisement

ಕಳೆ ಕಳೆದುಕೊಂಡ ಜಲಪಾತಗಳು : ಪ್ರವಾಸಿಗರಿಗೆ ನಿರಾಶೆ

11:18 PM Jul 20, 2019 | Team Udayavani |

ಮಡಿಕೇರಿ: ಮಳೆ, ಗಾಳಿ, ಚಳಿ, ಮಂಜು ಈ ವಾತಾವರಣ ಕಾವೇರಿ ತವರು ಕೊಡಗಿನ ಆಸ್ತಿ. ಪ್ರತಿವರ್ಷ ಜೂನ್‌ ಆರಂಭವಾಯಿತ್ತೆಂದರೆ ಮಳೆಗಾಲದ ಸೊಬಗು ಜಿಲ್ಲೆಯ ಸೊಬಗನ್ನು ಶ್ರೀಮಂತಗೊಳಿಸುತ್ತದೆ. ಆದರೆ ಪ್ರಸ್ತುತ ವರ್ಷ ಮಳೆಯ ಆಗಮನವೇ ಆಗದ ಕಾರಣ ಪ್ರಕೃತಿಯ ಮಡಿಲಿನ ಜಲಪಾತಗಳು ಸೊರಗಿವೆ.

Advertisement

ಕಳೆದ ಬಾರಿ ಈ ಜಲಪಾತಗಳೆಲ್ಲ ಬೋರ್ಗರೆಯುತ್ತಾ ಧುಮ್ಮಿಕ್ಕುವ ಮೂಲಕ ತಮ್ಮ ಸೊಬಗನ್ನು ಪ್ರವಾಸಿಗರಿಗೆ ಉಣ ಬಡಿಸಿದ್ದವು. ಆದರೆ ಈ ಬಾರಿಯ ಸ್ಥಿತಿ ಮಾತ್ರ ಭಿನ್ನವಾಗಿದೆ. ಮಡಿಕೇರಿಯ ಅಬ್ಬಿ ಜಲಪಾತವನ್ನು ನೋಡಲೆಂದು ಸರಕಾರಿ ರಜಾ ದಿನವಾದ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಆದರೆ ಜಲಪಾತದ ಸೊಬಗು ಮಾತ್ರ ಕಣ್ಮರೆಯಾಗಿತ್ತು. ಕಳೆದ ಮಳೆಗಾಲದಲ್ಲಿ ಅಬ್ಬಿ ಜಲಪಾತದ ಬಳಿಯೇ ಸಂಭವಿಸಿದ ಭೂ ಕುಸಿತದಿಂದ ಅಲ್ಲಿದ್ದ ತೂಗು ಸೇತುವೆಗೆ ಭಾಗಶ: ಹಾನಿಯಾಗಿದ್ದು, ಇಂದಿಗೂ ದುರಸ್ತಿ ಕಾರ್ಯಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗಿಲ್ಲ.

ಪುಷ್ಪಗಿರಿ ತಪ್ಪಲಿನಲ್ಲಿರುವ ಮಲ್ಲಳ್ಳಿ ಜಲಪಾತದಲ್ಲೂ ಹೇಳಿಕೊಳ್ಳುವಷ್ಟು ನೀರಿಲ್ಲ. ಇಲ್ಲಿಗೂ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಮಲ್ಲಳ್ಳಿ ಜಲಪಾತದ ಸಹಜ ಮುದವೇ ಮಾಯವಾಗಿದೆ. ಪ್ರವಾಸಿಗರನ್ನು ತನ್ನ ಒಡಲಿನವರೆಗೂ ಬರಮಾಡಿಕೊಳ್ಳುವ ಜಿಲ್ಲೆಯ ಏಕೈಕ ಮಲ್ಲಳ್ಳಿ ಜಲಪಾತದಲ್ಲಿ ನೀರಿನ ಹನಿಗಳು ಬಹುದೂರದವರೆಗೆ ತನ್ನ ಸಿಂಚನ ಮೂಡಿಸುತ್ತದೆೆ. ಈ ನೀರಿನ ಹನಿಗಳಲ್ಲಿ ಮಿಂದೇಳುವುದೇ ಪ್ರವಾಸಿಗರಿಗೆ ಸ್ವರ್ಗಾನುಭವ. ಬೋರ್ಗರೆಯುತ್ತಾ ಧುಮ್ಮಿಕ್ಕುವ ಈ ಜಲಕನ್ಯೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ರೋಮಾಂಚನ. ಆದರೆ ಮಲ್ಲಳ್ಳಿ ಸಹಜವಾಗಿಯೇ ಸೊರಗಿದೆ.

ಚೇಲಾವರ ಮತ್ತು ಇರ್ಪು ಜಲಪಾತಗಳ ಸ್ಥಿತಿಯೇನು ಭಿನ್ನವಾಗಿಲ್ಲ. ಹಸಿರಿನ ಪರಿಸರದ ನಡುವೆ ಕಲ್ಲು ಬಂಡೆಗಳನ್ನು ಸವರುತ್ತಾ ಧುಮ್ಮಿಕ್ಕುವ ಈ ಜಲಪಾತಗಳಿಗೆ ಮಳೆ ನೀರೇ ಆಧಾರ.

ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕಡಿವಾಣ ಅನಿವಾರ್ಯವೂ ಆಗಿದೆ. ಎಚ್ಚರಿಕೆಯ ಫ‌ಲಕ ಅಳವಡಿಸಿದ್ದರೂ, ಬಂಡ ಧೈರ್ಯ ಮಾಡಿ ಮೋಜು, ಮಸ್ತಿಗಾಗಿ ನೀರಿಗಿಳಿಯುವ ಪ್ರವಾಸಿಗರ ಅಮೂಲ್ಯ ಜೀವಗಳು ಜಲಪಾಲಾಗಿವೆ

Advertisement

ಮೋಜು ಮಸ್ತಿಗೆ ಕಡಿವಾಣ
ಜಿಲ್ಲೆಯ ಜಲಪಾತಗಳು ಎಷ್ಟು ಮೋಹಕವಾಗಿದೆಯೋ ಅಷ್ಟೇ ಕರಾಳತೆಯನ್ನೂ ಹೊಂದಿವೆ. ಮೋಜು ಮಸ್ತಿಯಲ್ಲಿ ತೊಡಗಿ, ಮೈಮರೆತು ನೀರಿನಲ್ಲಿ ಇಳಿದರೆ ಸುಳಿಸಾವು ಖಚಿತ ಎನ್ನುವ ಮಾತಿದೆ. ಅಬ್ಬಿ ಜಲಪಾತದಲ್ಲಿ ನೀರಿಗಿಳಿಯದಂತೆ ಈ ಹಿಂದೆಯೇ ನಿರ್ಬಂಧ ವಿಧಿಸಿ ಅಪಾಯವನ್ನು ತಪ್ಪಿಸಲಾಗಿದೆ. ಹೀಗಾಗಿ ಇಲ್ಲಿ ಸಾವಿನ ಪ್ರಕರಣ ಕಡಿಮೆಯಾಗಿದೆ. ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತದಲ್ಲಿ ಇತ್ತೀಚೆಗಷ್ಟೇ ಫೆನ್ಸ್‌ ಅಳವಡಿಸಿ ಜಲಪಾತದ ಒಡಲಿನವರೆಗೆ ತೆರಳುವುದಕ್ಕೆ ನಿಷೇಧ ಹೇರಲಾಗಿದೆ. ಜಲಪಾತದ ಬುಡಕ್ಕೆ ತೆರಳಿದರೆ ಅಂತಹ ವ್ಯಕ್ತಿಗಳ ವಿರುದ್ದ ಸೋಮವಾರಪೇಟೆ ಪೊಲೀಸರು ಎಫ್.ಐ.ಆರ್‌ ದಾಖಲಿಸಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next