ಪಣಜಿ: ಗೋವಾ ರಾಜ್ಯ ಕೇವಲ ಬೀಚ್ ಪ್ರವಾಸೋದ್ಯಮ ಅಲ್ಲದೇ ಸುಂದರ ಜಲಪಾತಗಳ ಮೂಲಕವೂ ಜಗತ್ಪ್ರಸಿದ್ಧ ಪಡೆದಿದೆ. ಮಳೆಗಾಲದ ಸಂದರ್ಭದಲ್ಲಂತೂ ಇಲ್ಲಿಯ ಅತ್ಯಾಕರ್ಷಣೀಯ ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
ಕೆಲ ದಿನಗಳ ಹಿಂದೆ ಗೋವಾದ ಕೆಲ ಜಲಪಾತಗಳಲ್ಲಿ ಪ್ರವಾಸಿಗರು ಬಿದ್ದು ಮೃತಪಟ್ಟ ಘಟನೆಗಳ ನಂತರ ಗೋವಾ ಸರ್ಕಾರ ಅಭಯಾರಣ್ಯ ಪ್ರದೇಶ ವ್ಯಾಪ್ತಿಯ ಎಲ್ಲ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಿತ್ತು. ಆದರೆ ಇದೀಗ ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ಸೇರಿದಂತೆ ಇನ್ನೂ ಕೆಲ ಜಲಪಾತಗಳನ್ನು ಹೊರತು ಪಡಿಸಿ ಕೇವಲ 14 ಜಲಪಾತಗಳಿಗೆ ಪ್ರವಾಸಿಗರು ಪ್ರವೇಶಿಸಲು ಮುಕ್ತಗೊಳಿಸಲಾಗಿದೆ. ದೂಧಸಾಗರ ಜಲಪಾತಕ್ಕೆ ನಿರ್ಬಂಧ ಮುಂದುವರೆದಿದೆ.
ಮಹದಾಯಿ ಅಭಯಾರಣ್ಯದಲ್ಲಿ ಬರುವ ಸತ್ತರಿ, ಪಾಳಿ, ಚರಾಯಣೆ, ಗೋಳಾಲಿ, ಚಿದಂಬರ, ನಾನೇಲಿ, ಉಕೀಚೆಕಡೆ ಕುಮಠಳ, ಚೋರ್ಲಾ ಘಾಟ್ ಮಾರ್ಗದಲ್ಲಿನ ಮಾಡಯಾನಿ ಮತ್ತು ಖಾಡೆ ಈ ಜಲಪಾತಗಳ ವೀಕ್ಷಣೆ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.ಅಂತೆಯೇ ಭಗವಾನ್ ಮಹಾವೀರ ಅಭಯಾರಣ್ಯದಲ್ಲಿ ಬರುವ ಮಯಡಾ ಕುಳೆ ಜಲಪಾತ, ನೇತ್ರಾವಳಿ ಅಭಯಾರಣ್ಯದಲ್ಲಿ ಬರುವ ಭಾಟಿ ನೇತ್ರಾವಳಿ, ಖೋತಿಗಾಂವ ಅಭಯಾರಣ್ಯದಲ್ಲಿ ಬರುವ ಕುಸ್ಕೆ ಖೋತಿಗಾಂವ ಈ ಜಲಪಾತಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.
ಕುಸ್ಕೆ ಫಾಲ್ಸ್: ಖೋತಿಗಾಂವ ಅಭಯಾರಣ್ಯದಲ್ಲಿ ಬರುವ ಕುಸ್ಕೆ ಜಲಪಾತಕ್ಕೆ ದಕ್ಷಿಣ ಗೋವಾದ ಕಾಣಕೋಣ ನಗರದಿಂದ ಖೋತಿಗಾಂವ ವನ್ಯಜೀವಿ ಅಭಯಾರಣ್ಯದ ಮೂಲಕ ಕುಸ್ಕೆ ಗ್ರಾಮದ ಮೂಲಕ ತೆರಳಬಹುದಾಗಿದೆ. ಸುಮಾರು 1.5 ಕಿ.ಮೀ ಚಾರಣದ ಮೂಲಕ ಜಲಪಾತದ ಕೆಳಭಾಗಕ್ಕೆ ಹೋಗಬಹುದು. ಇಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರ ವರೆಗೆ ಮಾತ್ರ ವೀಕ್ಷಣೆಗೆ ಅವಕಾಶವಿದೆ.
ತಾಂಬಡಿ ಸುರ್ಲಾ: ತಾಂಬಡಿ ಸುರ್ಲಾ ಜಲಪಾತವು ಗೋವಾದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ. ಇಲ್ಲಿನ ಸುಂದರ ಹಚ್ಚ ಹಸಿರಿನ ಬೆಟ್ಟಗಳ ಮಧ್ಯೆ ಸುಂದರ ಜಲಪಾತ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಈ ಜಲಪಾತ ದಟ್ಟ ಕಾಡಿನ ನಡುವೆ ಇದೆ. ಹೀಗಾಗಿ ಸ್ಥಳೀಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಉತ್ತಮ. ಒಂದೂವರೆ ಗಂಟೆಯಷ್ಟು ಇಲ್ಲಿನ ಚಾರಣ ಕೈಗೊಂಡರೆ ಇಲ್ಲಿ ತೆರಳಬಹದು. ಈ ಜಲಪಾತವು ಗೋವಾ ರಾಜಧಾನಿ ಪಣಜಿಯಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ದಟ್ಟ ಕಾಡಿನಲ್ಲಿ ಈ ಜಲಪಾತ ಇರುವುದರಿಂದ ಕಾಡುಪ್ರಾಣಿಗಳಿಂದ ಕೂಡ ಎಚ್ಚರಿಕೆ ಅಗತ್ಯ. ತಾಂಬಡಿ ಸುರ್ಲಾ ಜಲಪಾತಕ್ಕೆ ತೆರಳುವ ಮುನ್ನ ಅಲ್ಲಿಯೇ ಇರುವ ಪ್ರಸಿದ್ಧ ಏಕಶಿಲೆಯ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿದರೆ, ದೇವಸ್ಥಾನದ ಬಳಿಯಿಂದಲೇ ಜಲಪಾತಕ್ಕೆ ತೆರಳುವ ಮಾರ್ಗ ಕೂಡ ಸುಲಭವಾಗಲಿದೆ.
ಚರಾಯನೆ: ಚರಾಯನೆ ಜಲಪಾತ ಗೋವಾದ ವಾಳಪೈ ನಗರದಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಚಾರಣಕ್ಕೆ ಹಾಗೂ ಸಾಹಸ ಉತ್ಸಾಹಿಗಳಿಗೆ ಈ ಜಲಪಾತ ಹೇಳಿಮಾಡಿಸಿದ ಸ್ಥಳ. ಈ ಜಲಪಾತಕ್ಕೆ ತಲುಪಬೇಕಾದರೆ ಸುಂದರ ಪರಿಸರದ ಮೂಲಕ ಟ್ರೆಕ್ಕಿಂಗ್ ಮೂಲಕವೇ ಸಾಗಬೇಕು. ಈ ಜಲಪಾತ ಪ್ರವಾಸಿಗರನ್ನು ಮಂತ್ರಮುಗªಗೊಳಿಸುತ್ತದೆ.
ಟ್ವಿನ್ ಜಲಪಾತ: ಈ ಜಲಪಾತವು ಗೋವಾ ರಾಜಧಾನಿ ಪಣಜಿಯಿಂದ 29 ಕಿ.ಮೀ ದೂರದಲ್ಲಿದೆ. ಪೋಂಡಾ ನಗರದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಇದು ಪೋಂಡಾ ಸಮೀಪದ ಬೋರಿಮ್‌ನ ಶಿರಶಿರೆಮ್‌ನಲ್ಲಿದೆ.
ಮೈನಾಪಿ ಜಲಪಾತ: ಈ ಜಲಪಾತವು ಗೋವಾದ ನೇತ್ರಾವಳಿ ನಗರದ ಸಮೀಪದಲ್ಲಿದೆ. ಈ ಜಲಪಾತದ ಮಾರ್ಗವು ಅತ್ಯಂತ ಕಷ್ಟಕರವಾಗಿದೆ. ನೇತ್ರಾವಳಿ ಪಟ್ಟಣದಿಂದ ದಟ್ಟ ಕಾಡಿನ ಮೂಲಕ ಮಧ್ಯ ಮಧ್ಯ ಐದಾರು ಸಣ್ಣ ಹಳ್ಳ ಕೊಳ್ಳಗಳನ್ನು ದಾಟಿ ಸುಮಾರು ಒಂದು ತಾಸು ಚಾರಣ ಮಾಡಿ ಈ ಜಲಪಾತದ ಬಳಿ ತಲುಪಬಹುದಾಗಿದೆ.
ಭಾಟಿ ಜಲಪಾತ: ಈ ಜಲಪಾತವು ದಕ್ಷಿಣ ಗೋವಾದ ಸಾಂಗೆಮ್‌ನಲ್ಲಿದೆ. ಮಡಗಾಂವ್‌ನಿಂದ 45 ಕಿ.ಮೀ ದೂರದಲ್ಲಿದೆ. ಮುಖ್ಯ ರಸ್ತೆಯಿಂದ ಕಾಲ್ನಡಿಗೆಯಲ್ಲಿ ಸಾಗಿದರೆ ಕೇವಲ 5 ನಿಮಿಷದಲ್ಲಿ ಜಲಪಾತದ ಬಳಿ ತಲುಪಬಹುದಾಗಿದೆ.
ಮಳೆಗಾಲದ ಜಲಪಾತಗಳು ಗೋವಾ ಬೆಳಗಾವಿ ಮಾರ್ಗ ಚೋರ್ಲಾ ಘಾಟ್‌ನಲ್ಲಿ ಮಳೆಗಾಲದ ಸಂದರ್ಭದಲ್ಲಿ ಸೃಷ್ಟಿಯಾಗುವ ಹತ್ತಾರು ಸುಂದರ ಜಲಪಾತಗಳಿವೆ. ಈ ಜಲಪಾತಗಳ ವೀಕ್ಷಣೆಗೆ ಮಳೆಗಾಲದ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿನ ಹತ್ತಾರು ಜಲಪಾತಗಳು ಪ್ರವಾಸಿಗರ ಕಣ್ಮನ ಸೆಳೆಯುವುದಂತೂ ಖಂಡಿತ.