Advertisement

ಹಲವೆಡೆ ಜಲಸಾಕ್ಷರ ಜಾಗೃತಿ; ಮಳೆಕೊಯ್ಲು ಅಳವಡಿಕೆ

12:08 PM Jul 02, 2019 | sudhir |

ಮಹಾನಗರ: ‘ಮನೆ ಮನೆಗೆ ಮಳೆಕೊಯ್ಲು’ ಉದಯವಾಣಿ ಜಾಗೃತಿ ಅಭಿಯಾನದ ಪರಿಣಾಮ ಹಲವೆಡೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತಮ್ಮ ಮನೆಗಳಲ್ಲಿ ಮಳೆನೀರುಕೊಯ್ಲು ಅಳವಡಿಸುತ್ತಿರುವುದು ಸ್ವಾಗತಾರ್ಹ.

Advertisement

ಕಟಪಾಡಿಯ ರಂಜಿತ್‌ ಅವರು ಹತ್ತು ದಿನಗಳ ಹಿಂದೆ ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಕೆಲವು ವರ್ಷಗಳಿಂದ ಇವರ ಮನೆಯ ಬಾವಿಯ ನೀರು ಕಲುಷಿತಗೊಂಡಿತ್ತು. ನೀರು ಕುದಿಸುವ ವೇಳೆ ಪಾಚಿ ರೀತಿಯ ವಸ್ತು ಕಾಣಿಸಿಕೊಳ್ಳುತ್ತಿತ್ತು. ಇನ್ನು, ಡಿಸೆಂಬರ್‌ ತಿಂಗಳಾಗುವ ವೇಳೆ ಬಾವಿ ನೀರು ಕೆಂಪುಬಣ್ಣಕ್ಕೆ ತಿರುಗುತ್ತಿತ್ತು. ಇದೇ ಕಾರಣಕ್ಕೆ ಮನೆಯಲ್ಲಿ ಬಾವಿ ಇದ್ದರೂ ಅದರ ನೀರನ್ನು ಉಪಯೋಗಿಸಲಾಗದ ಪರಿಸ್ಥಿತಿ ಇತ್ತು.

ನಾನಾ ಸಾಹೇಬ್‌ ಧರ್ಮಾಧಿಕಾರಿ ಪ್ರತಿಷ್ಠಾನದ ಮುಖಾಂತರ ಎರಡು ವಾರಗಳ ಹಿಂದೆ ಮನೆಯ ಛಾವಣಿ ನೀರು ಪೋಲಾಗಲು ಬಿಡದೆ ಮಳೆನೀರು ಕೊಯ್ಲು ಅಳವಡಿಸಿದ್ದಾರೆ. ಟೆರೇಸ್‌ನಿಂದ ನೀರನ್ನು ಪೈಪ್‌ಮುಖೇನ ಬಾವಿಗೆ ಬಿಡಲಾಗುತ್ತಿದೆ. ಬಾವಿ ಬಳಿ ಫಿಲ್ಟರ್‌ ಅಳವಡಿಸಿದ್ದಾರೆ. ಈಗಾಗಲೇ ಒಂದೆರಡು ಮಳೆ ಬಂದಿದ್ದು, ಬಾವಿ ನೀರಿನ ಮಟ್ಟ ಸ್ವಲ್ಪ ಏರಿಕೆಯಾಗಿದೆ. ಇದೀಗ ನೀರು ಕುದಿಸಿದಾಗ ಯಾವುದೇ ರೀತಿಯ ಪಾಚಿ ವಸ್ತು ಕಾಣಿಸಿಕೊಳ್ಳುತ್ತಿಲ್ಲ ಎನ್ನುತ್ತಾರೆ ರಂಜಿತ್‌.

ಮಳೆ ಕೊಯ್ಲಿನಿಂದ ನೀರಿನ ಸಮಸ್ಯೆ ತಪ್ಪಿತು

ಮೂಲ್ಕಿಯ ನವೀನ್‌ ಅವರು ಮೂರು ವರ್ಷಗಳ ಹಿಂದೆ ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಅವರ ಮನೆಯ ಖರ್ಚಿಗೆ ಬಾವಿ ನೀರೇ ಸಾಕಾಗುತ್ತಿದೆ.

Advertisement

ನೀರಿನ ಅಭಾವದಿಂದಾಗಿ ನವೀನ್‌ ಮನೆಯವರು ಟ್ಯಾಂಕರ್‌ ಮೂಲಕ ನೀರು ತರಿಸುತ್ತಿದ್ದರು. ಬಳಿಕ ಸಂಬಂಧಿಕರಾದ ನಾಗಪ್ಪ ಪೂಜಾರಿ ಅವರ ಸಲಹೆ ಮೇರೆಗೆ ನಾನಾ ಸಾಹೇಬ್‌ ಧರ್ಮಾಧಿಕಾರಿ ಪ್ರತಿಷ್ಠಾನದ ಮುಖಾಂತರ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿದರು. ಛಾವಣಿ ನೀರನ್ನು ಪೈಪ್‌ ಮೂಲಕ ಹಾಯಿಸಿ, ಫಿಲ್ಟರ್‌ ಮುಖಾಂತರ ಶುದ್ಧೀಕರಣಗೊಳಿಸಿ ಬಾವಿಗೆ ಬೀಳುವಂತೆ ಮಾಡಲಾಗಿದೆ. ಇದರಿಂದ ಕಳೆದ ವರ್ಷವೂ ಅವರ ಮನೆಯ ಬಾವಿಯಲ್ಲಿ ಉತ್ತಮ ನೀರುತ್ತು. ಈ ವರ್ಷದ ಕೆಲವೇ ಕೆಲವು ಮಳೆಗೆ ಬಾವಿಯಲ್ಲಿ ನಾಲ್ಕು ರಿಂಗ್‌ಗಿಂತಲೂ ಮೇಲೆ ನೀರು ಬಂದಿದೆ.

ಉದಯವಾಣಿಯಿಂದ ಸಮಾಜಮುಖೀ ಕಾರ್ಯ: ಕಲ್ಬಾವಿ

ಮಳೆನೀರು ಪೋಲಾಗದಂತೆ ಹಿಡಿದುಕೊಂಡರೆ ಬೇಸಗೆಯಲ್ಲಿ ಜಲಕ್ಷಾಮ ಬಾರದು ಎಂಬ ಉದ್ದೇಶದಿಂದ ಉದಯವಾಣಿ ‘ಮನೆ ಮನೆಗೆ ಮಳೆಕೊಯ್ಲು’ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಆ ಬಳಿಕ ಅನೇಕ ಸಂಘ – ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಮಳೆಕೊಯ್ಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.

ಭಾರತ್‌ಮಾತ ನಾಗರಿಕ ಪರಿಸರ ವೇದಿಕೆ ಕೋಡಿಕಲ್ ವತಿಯಿಂದ ನಗರದ ಕೋಡಿಕಲ್ನಲ್ಲಿರುವ ಜಿಎಸ್‌ಬಿ ಸಭಾಭವನದಲ್ಲಿ ರವಿವಾರ ಮಳೆಕೊಯ್ಲಿನ ವಿಷಯದ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.

ಎನ್‌ಐಟಿಕೆ ಸುರತ್ಕಲ್ನ ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ಇ.ಆರ್‌. ಕಲ್ಬಾವಿ ರಾಜೇಂದ್ರ ರಾವ್‌ ಅವರು ಮಳೆಕೊಯ್ಲಿನ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡುತ್ತಾ, ನಿರ್ಮಿತಿ ಕೇಂದ್ರ 2004ರಿಂದ ಮಳೆನೀರು ಕೊಯ್ಲು ಅಭಿಯಾನವನ್ನು ನಡೆಸುತ್ತಿದೆ. ಆದರೆ ‘ಉದಯವಾಣಿ’ ಇತ್ತೀಚೆಗೆ ಹಮ್ಮಿಕೊಂಡಿದ್ದ ಮನೆ ಮನೆಗೆ ಮಳೆಕೊಯ್ಲು ಅಭಿಯಾನವು ಈ ಕಾರ್ಯವನ್ನು ಮತ್ತಷ್ಟು ಸಮಾಜಮುಖೀಯನ್ನಾಗಿಸಿದೆ. ಒಬ್ಬ ಮನುಷ್ಯ ಸುಮಾರು 300 ಲೀಟರ್‌ಗೂ ಅಧಿಕ ನೀರು ಉಪಯೋಗಿಸುತ್ತಾನೆ. ಆದರೆ ಯುನೆಸ್ಕೋ ಸಂಶೋಧನೆಯ ಪ್ರಕಾರ ಒಬ್ಬ 50 ಲೀಟರ್‌ ನೀರು ಉಪಯೋಗಿಸಿ ಬದುಕಲು ಸಾಧ್ಯವಿದೆ. ನೀರು ಹಿಡಿದಿಟ್ಟುಕೊಳ್ಳಲು ಆರಂಭಿಸದಿದ್ದರೆ ಮುಂದೊಂದು ದಿನ ರೇಷನ್‌ ಅಂಗಡಿಗಳಲ್ಲಿ ನೀರು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ನೀರನ್ನು ಯಾವ ರೀತಿ ಉಪಯೋಗ ಮಾಡಬೇಕು ಎಂಬುವುದನ್ನು ಯೋಚನೆ ಮಾಡುವುದಿಲ್ಲ. ಎಂದು ತಿಳಿಸಿದರು.

ರವಿವಾರದಂದು ಪ್ರಶಾಂತಿ ಮಹಿಳಾ ಮಂಡಳ ಸೋನಾಲಿಕೆ ಜಲ್ಲಿಗುಡ್ಡೆ ವತಿಯಿಂದ ಅಂತರ್ಜಲ ಹೆಚ್ಚಿಸಲು ಮನೆ ಮನೆಗೆ ಮಳೆಕೊಯ್ಲು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಕಲ್ಬಾವಿ ರಾಜೇಂದ್ರ ರಾವ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next