Advertisement

ಸಣ್ಣ-ಮಧ್ಯಮ ಕೈಗಾರಿಕೆಗಳಿಗೂ “ಜಲ ಸಂಕಟ’?

06:54 AM May 15, 2019 | Team Udayavani |

ಮಂಗಳೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ನೀರಿನ ಅಗತ್ಯ ಹೆಚ್ಚಿರುವ ಸುಮಾರು 700ಕ್ಕೂ ಅಧಿಕ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ಸಂಕಟ ಎದುರಾಗುವ ಸಾಧ್ಯತೆಯಿದೆ.

Advertisement

ಸದ್ಯ ಬಹುತೇಕ ಕೈಗಾರಿಕೆಗಳಿಗೆ ಖಾಸಗಿ ಬಾವಿ, ಬೋರ್‌ವೆಲ್‌, ಟ್ಯಾಂಕರ್‌ ಮೂಲಕ ನೀರಿನ ವಿತರಣೆ ನಡೆಯುತ್ತಿದ್ದರೂ ಮುಂದೆ ಕೆಲವು ದಿನಗಳವರೆಗೆ ಮಳೆ ಬಾರದಿದ್ದರೆ ಕಷ್ಟ ಎದುರಾಗಬಹುದು. 2016ರಲ್ಲಿ ಇದೇ ರೀತಿ ಸಮಸ್ಯೆ ಎದುರಾಗಿ ಕೆಲವು ಸಣ್ಣ-ಮಧ್ಯಮ ಕೈಗಾರಿಕೆಗಳು ಕೆಲವು ದಿನ ಸ್ಥಗಿತಗೊಂಡಿದ್ದವು.

ಬೈಕಂಪಾಡಿ ವ್ಯಾಪ್ತಿಯ ಒಟ್ಟು ಕೈಗಾರಿಕೆಗಳ ಪೈಕಿ ಸುಮಾರು 400ಕ್ಕೂ ಅಧಿಕ ಪಾಲಿಕೆ ನೀರನ್ನೇ ಅವಲಂಬಿಸಿವೆ. ವಾರ್ಷಿಕವಾಗಿ ಸುಮಾರು 4 ಕೋಟಿ ರೂ.ಗಳಷ್ಟನ್ನು ನೀರಿನ ಬಿಲ್‌ ಆಗಿ ಪಾವತಿಸುತ್ತಿವೆ. ಸದ್ಯ ಬೋರ್‌ವೆಲ್‌, ಬಾವಿ, ಟ್ಯಾಂಕರ್‌ ನೀರು ಇರುವುದರಿಂದ ದೊಡ್ಡ ಕೊರತೆ ಆಗಿಲ್ಲ. ಎಸ್‌ಇಝಡ್‌ ಒಳಗಿರುವ ಎರಡು ಕೈಗಾರಿಕೆಗಳಿಗೆ ನಗರದಿಂದ ನೀರು ಸರಬರಾಜು ನಿಂತಿದ್ದು, ಅವು ಈಗಾಗಲೇ ಸ್ಥಗಿತಗೊಂಡಿವೆ.

ಮಿತ ಬಳಕೆ; ಇರುವುದರ ಹಂಚಿಕೆ
ಬೈಕಂಪಾಡಿಯ ಕೈಗಾರಿಕೆಗಳ ಪೈಕಿ ಕೆಲವು ಸ್ವಂತ ನೀರಿನ ಮೂಲ ಬಳಸುತ್ತಿವೆ. ಮಿತ ಮತ್ತು ಕನಿಷ್ಠ ನೀರಿನ ಬಳಕೆಗೆ ಒತ್ತು ನೀಡಿರುವುದರಿಂದ ಸದ್ಯಕ್ಕೆ ಸಮಸ್ಯೆ ಗಂಭೀರವಾಗಿಲ್ಲ ಎಂಬುದು ಉದ್ಯಮಿಯೊಬ್ಬರ ಅಭಿಪ್ರಾಯ.
ಈಗ ಲಭ್ಯವಿರುವ ನೀರನ್ನು ಹಂಚಿಕೊಳ್ಳುವ ವ್ಯವಸ್ಥೆಯನ್ನು ಇಲ್ಲಿನ
ಬಹುತೇಕ ಕೈಗಾರಿಕೆಗಳ ಮುಖ್ಯಸ್ಥರು ಮಾಡಿಕೊಂಡಿದ್ದಾರೆ. ಜತೆಗೆ ಅಗತ್ಯವಿರುವಲ್ಲಿ ಟ್ಯಾಂಕರ್‌ ನೀರು ಸರಬರಾಜಿದೆ. ಹೀಗಾಗಿ ಸದ್ಯ ಬೆರಳೆಣಿಕೆ ಸಣ್ಣ ಕೈಗಾರಿಕೆಗಳಿಗೆ ಮಾತ್ರ ಸಂಕಷ್ಟ ಇದ್ದು, ಮುಂದೆ ಮಳೆ ಆಗದಿ
ದ್ದರೆ ಹಲವು ಕೈಗಾರಿಕೆಗಳು ಗಂಭೀರ ಸಮಸ್ಯೆ ಎದುರಿಸ ಬೇಕಾದೀತು ಎನ್ನುತ್ತಾರೆ ಅವರು.

ಯೆಯ್ನಾಡಿಯ ಕೈಗಾರಿಕೆಗಳು ಬೋರ್‌ವೆಲ್‌ ನೀರನ್ನು ಬಳಸುತ್ತಿವೆ. ದಿನ ಕಳೆದಂತೆ ಇಲ್ಲಿಯೂ ನೀರಿನ ಲಭ್ಯತೆ ಕಡಿಮೆಯಾಗುತ್ತಿದ್ದು, ಆತಂಕ ಆರಂಭವಾಗಿದೆ. ಮೇ ತಿಂಗಳ ಅಂತ್ಯದೊಳಗೂ ಮಳೆ ಬಾರದಿದ್ದರೆ ಸಣ್ಣ
ಕೈಗಾರಿಕೆಗಳು ಸಂಕಷ್ಟ ಎದುರಿಸುವುದರಲ್ಲಿ ಅನುಮಾನವಿಲ್ಲ.

Advertisement

ಸದ್ಯ ಬೈಕಂಪಾಡಿ ಕೈಗಾರಿಕಾ ಪ್ರಾಂಗಣ ವ್ಯಾಪ್ತಿಯ ಹಲವು ಕೈಗಾರಿಕೆಗಳು ಸಂಸ್ಕರಣ ಘಟಕ ಆರಂಭ ಮಾಡಿದ ಅನಂತರ ನೀರಿನ ಮರುಬಳಕೆಗೆ ವಿಶೇಷ ಒತ್ತು ನೀಡುತ್ತಿವೆ. ಜತೆಗೆ ಸಣ್ಣ ಕೈಗಾರಿಕೆಗಳು ಜಲಮರುಪೂರಣ ವ್ಯವಸ್ಥೆಗೆ ಒತ್ತು ನೀಡಿವೆ. ಮಳೆ ನೀರನ್ನು ಇಂಗಿಸುವ ಕೆಲಸಕ್ಕೆ ಬಹುತೇಕ ಸಣ್ಣ ಕೈಗಾರಿಕೆಗಳು ಮನಸ್ಸು ಮಾಡಿರುವುದು ಇಲ್ಲಿನ ವಿಶೇಷ.

650 ಕೈಗಾರಿಕೆಗಳು; 20,000 ಉದ್ಯೋಗಿಗಳು
ಬೈಕಂಪಾಡಿ ಮತ್ತು ಯೆಯ್ನಾಡಿಯಲ್ಲಿ ಕಿರು ಮತ್ತು ಸಣ್ಣ ಕೈಗಾರಿಕೆಗಳಿವೆ. ಆಹಾರ ಮತ್ತು ತಂಪು ಪಾನೀಯ, ಜವುಳಿ, ಮರದ ಉತ್ಪನ್ನ, ಪ್ರಿಂಟಿಂಗ್‌ ಮತ್ತು ಲೇಖನ ಸಾಮಗ್ರಿ, ಚರ್ಮದ ಉತ್ಪನ್ನ, ರಬ್ಬರ್‌ ಮತ್ತು ಪ್ಲಾಸ್ಟಿಕ್‌, ರಾಸಾಯನಿಕ, ಗ್ಲಾಸ್‌ ಮತ್ತು ಸಿರಾಮಿಕ್‌, ಮೂಲ ಲೋಹದ ಉತ್ಪನ್ನ, ಜನರಲ್‌ ಎಂಜಿನಿಯರಿಂಗ್‌, ಇಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌, ಆಟೋಮೊಬೈಲ್‌, ಸಾರಿಗೆ ಉತ್ಪನ್ನ ಮತ್ತು ಇತರ ಉತ್ಪಾದನೆಯಾಗುತ್ತವೆ.

ಬೈಕಂಪಾಡಿಯಲ್ಲಿ ಕಿರು ಮತ್ತು ಸಣ್ಣ ಸೇರಿದಂತೆ ಸುಮಾರು 650ರಷ್ಟು ಕೈಗಾರಿಕೆಗಳು ಹಾಗೂ ಯೆಯ್ನಾಡಿಯಲ್ಲಿ ಸುಮಾರು 45ರಷ್ಟು ಕೈಗಾರಿಕೆಗಳಿವೆ. 20,000ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

ಮಳೆಯಾಗದಿದ್ದರೆ
ನಗರದ ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಸದ್ಯಕ್ಕೆ ನೀರಿನ ಸಮಸ್ಯೆ ಅಷ್ಟೊಂದು ಎದುರಾಗಿಲ್ಲ. ಇನ್ನೂ ಕೆಲವು ದಿನ ಮಳೆಯಾಗದಿದ್ದರೆ ಅವು ಕೂಡ ನೀರಿನ ಕೊರತೆ ಎದುರಿಸಬೇಕಾಗಬಹುದು.
– ಗೌರವ್‌ ಹೆಗ್ಡೆ, ಅಧ್ಯಕ್ಷ, ಬೈಕಂಪಾಡಿ ಕೆನರಾ ಸಣ್ಣ ಕೈಗಾರಿಕೆಗಳ ಸಂಘ

ಹೊಟೇಲ್‌ಗ‌ೂ ನೀರಿನ ಕೊರತೆ
ನೀರಿನ ಕೊರತೆ ಕಾಣಿಸಿಕೊಳ್ಳುತ್ತಿದ್ದಂತೆ ನಗರದ ಹೊಟೇಲ್‌ ಉದ್ಯಮಕ್ಕೂ ಬಿಸಿ ತಟ್ಟಲಾರಂಭಿಸಿದೆ. ನಗರದಲ್ಲಿ ಸುಮಾರು 500ರಷ್ಟು ಹೊಟೇಲ್‌ಗ‌ಳಿವೆ. ಕೆಲವು ಖಾಸಗಿ ಬೋರ್‌ವೆಲ್‌, ಬಾವಿಯ ನೀರನ್ನು ಆಶ್ರಯಿಸಿದ್ದರೆ, ಮಿಕ್ಕುಳಿದವುಗಳಿಗೆ ಟ್ಯಾಂಕರ್‌ ನೀರು. ಸಣ್ಣ-ಪುಟ್ಟ ಹೊಟೇಲ್‌ನವರು ಪಾಲಿಕೆ ನೀರಿಗಾಗಿ ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next