Advertisement

ಸಂಪ್ ನಿಂದ ಪೋಲಾಗುತ್ತಿರುವ ನೀರು: ಪುರಸಭಾ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಬೇಸತ್ತ ಜನ

12:40 PM Oct 05, 2021 | Team Udayavani |

ವಿಜಯಪುರ: ಪಟ್ಟಣದಲ್ಲಿ ವರ್ಷಾನುಗಟ್ಟಲೆ ಇಂದ ನೀರಿಗೆ ಆಹಾಕಾರ. ಕುಡಿಯುವ ನೀರು ಸಿಗುವುದು ಮತ್ತಷ್ಟು ಕಷ್ಟ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪಟ್ಟಣದ ಹಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಗೊಂಡಿದೆ. ನೀರು ಶುದ್ಧಗೊಂಡಾಗ ಅಶುದ್ಧ ನೀರು ಸಹ ಹೊರಹೋಗುತ್ತದೆ. ಇದನ್ನು ಸಂಗ್ರಹಿಸಲು ನಿರ್ಮಿಸಿದ ಸಂಪ್ ವ್ಯರ್ಥವಾಗುತ್ತಿದೆ. ಇದರಲ್ಲಿ ಶೇಖರಣೆಯಾದ ನೀರನ್ನು ಸಾರ್ವಜನಿಕರು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳಲು ಆಗದೆ ನಷ್ಟವಾಗುತ್ತಿದೆ.

Advertisement

ಸುಮಾರು 5 ವರ್ಷಗಳ ಹಿಂದೆ ಪಟ್ಟಣದ 12 ನೇ ವಾರ್ಡ್ ನ ದುರ್ಗಾತಾಯಿ ಕಾಲೋನಿಯಲ್ಲಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಯಿತು. ಇದಕ್ಕೆ ನೀರಿನ ವ್ಯವಸ್ಥೆ ಪುರಸಭೆ ಕಡೆಯಿಂದಲೇ ಆಗಿದೆ. ವ್ಯರ್ಥ ನೀರು ರಸ್ತೆಗೆ ಹೋಗದಂತೆ ಲಕ್ಷಾಂತರ ರೂ ವೆಚ್ಚದ ಸಂಪ್ ಸಹ ಪುರಸಭೆ ವತಿಯಿಂದ ನಿರ್ಮಾಣ ವಾಯಿತು. ಸಂಪ್ ನಲ್ಲಿ ಸಂಗ್ರಹವಾದ ನೀರನ್ನು ಸಾರ್ವಜನಿಕರು ಬಳಸಿಕೊಳ್ಳುವ ವ್ಯವಸ್ಥೆ ಯಾದರೂ ಮಾಡಬೇಕಿತ್ತು. ಆದರೆ ಅಷ್ಟೂ ವರ್ಷಗಳಿಂದ ಸಂಪ್ ನಲ್ಲಿ ಶೇಖರಣೆಯಾದ ನೀರು ಬಳಕೆಯಾಗದೆ ಸಂಪ್ ನಲ್ಲಿಯೇ ಉಳಿದು ಕೊಳೆತು ಪಾಚಿ ಕಟ್ಟಿ ಹುಳ ಉಪ್ಪಟೆಗಳು ತುಂಬಿವೆ. ಸಂಪ್ ತುಂಬಿ ಹೋಗಿ ನೀರು ಹೊರಗೆ ಬಂದು ಸುತ್ತಲೂ ನಿಲ್ಲುತ್ತಿದೆ. ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹೋಗುವ ಕಾಲು ದಾರಿ ಕೆಸರಿನಿಂದ ತುಂಬಿದ್ದು, ಜನ ನೀರನ್ನು ತರಲು ಕಷ್ಟವಾಗಿದೆ. ಎಷ್ಟೋ ಸಲ ವಯಸ್ಸಾದ ವೃದ್ಧರು ನೀರು ತರಲು ಹೋಗಿ ತಾವು ಬಿದ್ದು ಕೈಕಾಲು ಮುರಿದುಕೊಂಡು ನೀರಿನ ಕ್ಯಾನ್ ಸಹ ಒಡೆದು ಹೋಗಿದೆ.

ಇದನ್ನೆಲ್ಲಾ ನೋಡುತ್ತಿದ್ದ ವಾರ್ಡ್ ಜನತೆ ಬಹಳಷ್ಟು ಸಲ ಪುರಸಭೆಗೆ ದೂರು ನೀಡಿದರೂ ಯಾರೊಬ್ಬ ಅಧಿಕಾರಿಯೂ ಬಂದು ಅವ್ಯವಸ್ಥೆ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಪರಿಸರ ಅಭಿಯಂತರೆ ಸುಪ್ರಿಯಾ ಸ್ಥಳಕ್ಕೆ ಭೇಟಿ ನೀಡಲು ಮನವಿ ಮಾಡಿದರೂ ಬರಲಿಲ್ಲ. ಪುರಸಭೆಗೆ ಇತ್ತೀಚೆಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ನೇಮಕವಾಗಿದ್ದು, ಈ ಹಿಂದೆ ಇದ್ದ ಅಧಿಕಾರಿಗಳ ನಿರ್ಲಕ್ಷ್ಯ ಇನ್ನಾದರೂ ಸರಿ ಹೋಗಬಹುದೇನೋ ಎಂದು ವಾರ್ಡ್ ಜನತೆ ನಿರೀಕ್ಷಿಸುತ್ತಿದ್ದಾರೆ.

12 ನೇ ವಾರ್ಡ್ ಪುರಸಭಾ ಸದಸ್ಯ ವಿ.ನಂದಕುಮಾರ್ ಈ ವಿಚಾರವಾಗಿ ಮಾತನಾಡಿ, ನೀರಿನ ವಿಚಾರವಾಗಿ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ  ಯಾವ ಪುರಸಭಾ ಅಧಿಕಾರಿಗಳೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಾರ್ವಜನಿಕರು ಕಟ್ಟುವ ತೆರಿಗೆ ಹಣದಲ್ಲಿ ಆಗುವ ಕಾಮಗಾರಿಗಳು ಈ ರೀತಿ ನಿರ್ಲಕ್ಷ್ಯ ಕ್ಕೆ ಒಳಗಾಗುತ್ತಿವೆ. ನಷ್ಟ ದ ಜೊತೆ ವ್ಯರ್ಥವಾಗುತ್ತಿದೆ. ನೀರು ಚರಂಡಿ ಪಾಲಾಗುತ್ತಿದೆ. ಚರಂಡು ತುಂಬಿ  ಆ ನೀರು ಮತ್ತೆ ಸಂಪ್ ಗೆ ಸೇರುತ್ತಿದೆ. ನಾನು ಸದಸ್ಯನಾದ ಮೇಲೆ ಬಹಳಷ್ಟು ಸಹ ಪುರಸಭಾ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದ್ದೇನೆ. ಆದರೆ ಈ ವಿಚಾರದ ಬಗ್ಗೆ ಯಾವುದೇ ಕಾಳಜಿ ವಹಿಸಿತ್ತಿಲ್ಲ. ರಿಪೇರಿ ಮಾಡಿಸುತ್ತಿಲ್ಲ. ಮೂರು ವರೆ ವರ್ಷದಿಂದ ಸಂಪ್ ನಲ್ಲಿ ಸಂಗ್ರಹವಾಗಿರುವ ನೀರು ಅದರೊಳಗೆ ಇದೆ. ಉಪಯೋಗಕ್ಕೂ ಬಾರದಂತಾಗಿದೆ. ಪುರಸಭೆ ಲಕ್ಷ ಲಕ್ಷ ಖರ್ಚು ಮಾಡಿದ ಕಾಮಗಾರಿ ಈ ಮಟ್ಟಕ್ಕೆ ಹಾಳಾಗುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನ.

ಕಚೇರಿ ಖುರ್ಚಿ ಬಿಟ್ಟು ಕದಲದ ಅಧಿಕಾರಿಗಳು: ಸಮಸ್ಯೆ ಗಂಭೀರವಾಗಿದೆ ಎಂದು ತಿಳಿಸಿದರೂ ಪುರಸಭಾ ಮುಖ್ಯಾಧಿಕಾರಿ ಆಗಲಿ ಎಂಜಿನಿಯರ್ ಸುಪ್ರಿಯಾ ಅವರಾಗಲಿ ಬಂದು ನೋಡಿ ಪರಿಹಾರ ಸೂಚಿಸುವ ಕೆಲಸ ಇಂದಿಗೂ ಮಾಡುತ್ತಿಲ್ಲ. ಕಚೇರಿಗೆ ಬಂದರೆ ಕುರ್ಚಿಗೆ ಅಂಟಿಕೊಂಡು ಕುಳಿತು ತಲೆ ಅಲ್ಲಾಡಿಸಿ ನೋಡೋಣ ಎಂದು ಹಾರಿಕೆಯ ಉತ್ತರ ಕೊಡುತ್ತಾರೆ.

Advertisement

ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಿ : ಜನರ ಬಗ್ಗೆ ನಿರ್ಲಕ್ಷ್ಯ ವಹಿಸುವ ಪುರಸಭಾ ಅಧಿಕಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಗುತ್ತಿಗೆದಾರರ ಅವೈಜ್ಞಾನಿಕ ಸಂಪ್ ನಿರ್ಮಾಣ, ಇದರಿಂದ ಉಂಟಾಗಿರುವ ನಷ್ಟಕ್ಕೆ ಬೆಲೆ ತೆರಬೇಕು.

ವಾರ್ಡ್ ಗೆ ಸಿಗದ ಬೀದಿ ದೀಪ: ಸುಮಾರು ಐದು ತಿಂಗಳಿಂದ ನಮ್ಮ  ವಾರ್ಡ್ ನ ರಸ್ತೆಗಳಿಗೆ ಬೀದಿ ದೀಪ ಬೇಕೆಂದು ಕೇಳುತ್ತಿದ್ದೇನೆ. ಪ್ರಾವಿಷನ್ ಇಲ್ಲ, ದುಡ್ಡಿಲ್ಲ, ಟೆಂಡರ್ ಕರೆಯಬೇಕು ಎಂಬ ಸಾಲು ಸಾಲು ನೆಪಗಳು ಮಾತ್ರ ಹೇಳುತ್ತಿದ್ದಾರೆ ವಿನಃ. ಬಡ ಜನರು ಇರುವ ರಸ್ತೆಗೆ ಬೀದಿ ದೀಪದ ವ್ಯವಸ್ಥೆ ಆಗಲೇ ಇಲ್ಲ ಎಂದು ತಿಳಿಸಿದರು.

ದುರ್ಗಾತಾಯಿ ಕಾಲೋನಿಯ ನಿವಾಸಿ ಶಿವಕುಮಾರ್ ಇಲ್ಲಿನ ಸಮಸ್ಯೆ ಬಗ್ಗೆ ಮಾತನಾಡಿ, ಸಂಪ್ ನೀರನ್ನು ಜನರು ಉಪಯೋಗಿಸುವ ವ್ಯವಸ್ಥೆ ಸಹ ಮಾಡದೆ ನೀರು ವ್ಯರ್ಥ ವಾಗಿ ಹೋಗುತ್ತಿದ್ದು, ಹುಳ ಬಿದ್ದ ಸೊಂಪ್ ನೀರಿನಿಂದ ಕಾಲೋನಿಯಲ್ಲಿ ಕಾಯಿಲೆಗಳು ಕಂಡುಬರಬೇಕಷ್ಟೇ. ಅದೆಷ್ಟು ಸಲ ಪುರಸಭೆಗೆ ಹೋಗಿ ಸಮಸ್ಯೆಯ ಗಂಭೀರತೆ ಬಗ್ಗೆ ವಿವರಿಸಿದ್ದೇವೆ. ಜೊತೆಗೆ ಪುರಸಭೆ ಯವರು ಊರಿನ ಕಸವನ್ನು ತಂದು ಇಲ್ಲೇ ಸುರಿಯುತ್ತಿದ್ದಾರೆ. ಅದನ್ನು ನೋಡಿ ಸಾರ್ವಜನಿಕರು ಕಸದ ರಾಶಿಗೆ ತಾವು ಒಂದಿಷ್ಟು ಕಸ ತಂದು ಸುರಿಯುತ್ತಿದ್ದಾರೆ. ಇಲ್ಲಿ ಬಂದು ನೀರು ಹಿಡಿದುಕೊಂಡು ಹೋಗಲು ರಸ್ತೆ ಇಲ್ಲದ ಕಾರಣ ಜನರು ಇಲ್ಲಿನ ನೀರನ್ನು ಬಳಸಿಕೊಳ್ಳಲು ಆಗುತ್ತಿಲ್ಲ. ಕೊನೆಗೆ ಇಲ್ಲಿನ ಕಾಮಗಾರಿ ಬಗ್ಗೆ ಮಾಹಿತಿ ಹಕ್ಕುನಲ್ಲಿ ಕೇಳಿದರೂ, ನೀವು ಕೇಳಿರುವುದೇ ಸರಿ ಇಲ್ಲ ಎಂದು  ಪುರಸಭಾ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ಉತ್ತರವೂ ನೀಡುತ್ತಿಲ್ಲ. ಇನ್ನು ಎಂಜಿನಿಯರ್ ಸುಪ್ರಿಯಾ ಇದರ ಬಗ್ಗೆ ಯಾವ ರೀತಿಯಲ್ಲೂ ಸ್ಪಂದನೆ ನೀಡಿ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಪುರಸಭೆಗೆ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ನೇಮಕವಾಗಿದ್ದು ಈ ಸಮಸ್ಯೆ ಬಗ್ಗೆ ಗಮನ ಹರಿಸಿ ಜನರಿಗೆ ಅನುಕೂಲ ಮಾಡಿಕೊಡಲಿ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next