ರಾಮದುರ್ಗ: ಮೂಲ ಸೌಕರ್ಯ ಒದಗಿಸಿ ಗ್ರಾಮೀಣ ಜನತೆಗೆ ಆರೋಗ್ಯಯುತ ಬದುಕನ್ನು ಕಲ್ಪಿಸುವುದು ಸರಕಾರದ ಕೆಲಸ. ಆ ನಿಟ್ಟಿನಲ್ಲಿ ಸರಕಾರ ಕಡಿಮೆ ದರದಲ್ಲಿ ಗ್ರಾಮೀಣ ಮಟ್ಟದಲ್ಲಿ ಶುದ್ಧ ಕುಡಿಯುವ ನೀರು ದೊರಕಲಿ ಎಂಬ ಉದ್ದೇಶದಿಂದ ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ಸ್ಥಳೀಯ ಆಡಳಿತ ಯಂತ್ರದ ನಿಷ್ಕಾಳಜಿತನದಿಂದ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.
ತಾಲೂಕಿನ 37 ಗ್ರಾಪಂಗಳಲ್ಲಿ 131 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಅವುಗಳಲ್ಲಿ 28 ಘಟಕಗಳು ಪ್ರಾರಂಭಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಪ್ರಾರಂಭಗೊಂಡಿರುವ 103 ಘಟಕಗಳು ನಿರ್ವಹಣೆ ತೊಂದರೆಯಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಕೊಳವೆ ಬಾವಿಗಳ ನೀರಿಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಸ್ಥಳೀಯರು ಆರೋಪ.
ಪ್ಲೋರೈಡ್ ನೀರಿನ ಬಳಕೆಯಿಂದಾಗಿ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು ಅರಿತ ಸರಕಾರ ಜನತೆಯ ಆರೋಗ್ಯ ರಕ್ಷಿಸುವ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಸಾವಿರಾರು ಕೋಟಿ ಹಣ ವಿನಿಯೋಗಿಸುತ್ತಿದೆ. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸರಕಾರಿ ಯೋಜನೆಗಳು ಸಫಲತೆ ಕಾಣುವಲ್ಲಿ ವಿಫಲವಾಗಿವೆ ಎಂಬುದಕ್ಕೆ ಶುದ್ಧ ಕುಡಿಯುವ ನೀರಿನ ಘಟಕಗಳೇ ಸಾಕ್ಷಿ. ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ದೃಷ್ಟಿಯಿಂದ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದರೂ ಅವರು ಸಹ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಇನ್ನೂ ಅನೇಕ ಹಳ್ಳಿಗಳ ಜನರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸಬೇಕಾಗಿದೆ. ಅಧಿಕಾರಿಗಳ ಲೆಕ್ಕದಲ್ಲಿ ಬಹುತೇಕ ಘಟಕಗಳು ಪ್ರಾರಂಭವಾಗಿವೆ ಎಂದು ಹೇಳಿದರೂ ವಾಸ್ತವ ಬೇರೆಯಾಗಿದೆ.
ವರ್ಷವಾದರೂ ಪ್ರಾರಂಭಗೊಳ್ಳದ ಘಟಕಗಳು: ಶುದ್ಧ ಕುಡಿಯುವ ನೀರಿರ ಘಟಕಗಳನ್ನು ನಿರ್ಮಿಸಿ ವರ್ಷವಾದರೂ ಇನ್ನೂ ಅಂದಾಜು 28 ಘಟಕಗಳು ಪ್ರಾರಂಭಗೊಂಡಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಕೆಲ ತಾಂತ್ರಿಕ ತೊಂದರೆಗಳಿಂದ ವಿಳಂಬವಾಗಿದೆ. ಆದಷ್ಟು ಬೇಗ ಪ್ರಾರಂಭಿಸಲಾಗುವುದು ಎಂಬ ಭರವಸೆ ನೀಡುತ್ತಿದ್ದಾರೆ.
ನಿರ್ವಹಣೆ ಜವಾಬ್ದಾರಿ: ಈ ಹಿಂದ ಬೇರೆ-ಬೇರೆ ಕಂಪನಿಗಳಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗಿತ್ತು. ಅವು ಸರಿಯಾಗಿ ನಿರ್ವಹಣೆ ಮಾಡದ ಕಾರಣದಿಂದಾಗಿ ಅವುಗಳನ್ನು ತೆಗೆದು ಹಾಕಿ 131 ಘಟಕಗಳಲ್ಲಿ 88 ಘಟಕಗಳನ್ನು ಗುಡ್ ವ್ಹಿಲ್ ಕಂಪನಿಗೆ ಎರಡು ದಿನಗಳ ಹಿಂದೆ ಟೆಂಡರ್ ನೀಡಲಾಗಿದೆ. ಇನ್ನೂಳಿದ 43 ಘಟಕಗಳನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ.
ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಪಿಡಿಒಗಳಿಗೆ ಸೂಚಿಸಲಾಗಿದೆ. ಈ ಹಿಂದೆ ಗುತ್ತಿಗೆ ಪಡೆದ ಕೆಲ ಕಂಪನಿಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಕಾರಣದಿಂದಾಗಿ ಇನ್ನೂ ಕೆಲ ಘಟಕಗಳು ಪ್ರಾರಂಭವಾಗಿಲ್ಲ. ಈಗ ಅದನ್ನು ಬೇರೆ ಕಂಪನಿಗಳಿಗೆ ಟೆಂಡರ್ ನೀಡಲಾಗಿದ್ದು,ತ್ವರಿತಗತಿಯಲ್ಲಿ ಸರಿಪಡಿಸಿ ಸಾರ್ವಜನಿಕರಿಗೆ ನೀರು ದೊರೆಯುವಂತೆ ಮಾಡಲಾಗುವುದು.
-ಮುರಳಿಧರ ದೇಶಪಾಂಡೆ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಪಂ ರಾಮದುರ್ಗ
-ಈರನಗೌಡ ಪಾಟೀಲ