ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನದಿ ಮೂಲಕ ನೀರು ಹರಿಸುವ ಕ್ರಮ ಖಂಡಿಸಿ ನದಿಗಿಳಿದು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಸ್ನಾನಘಟ್ಟದ ಬಳಿ ರೈತ ಸಂಘದ ಅಧ್ಯಕ್ಷ ಕೃಷ್ಣೇಗೌಡ ನೇತೃತ್ವದಲ್ಲಿ ಜಮಾಯಿಸಿ ಕಾವೇರಿ ನದಿಗಿಳಿದು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿಸಲಾಗುತ್ತಿದೆ. ಕಾವೇರಿ ನ್ಯಾಯ ಮಂಡಳಿಗೆ ಇಲ್ಲಿನ ವಾಸ್ತವ ಸ್ಥಿತಿ ಅರ್ಥವಾಗದಿರುವುದು ನಮ್ಮ ದುರದೃಷ್ಟ. ಮುಂಗಾರು ಮಳೆ ಕೈಕೊಟ್ಟಿದೆ. ಕೊಡಗಿನಲ್ಲೂ ಸಮರ್ಪಕ ಮಳೆ ಬೀಳುತ್ತಿಲ್ಲ. ಇದರಿಂದ ಜಲಾಶಯದ ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿದೆ. ಆದರೂ ತಮಿಳುನಾಡಿಗೆ ಇನ್ನು 5 ದಿನ ನೀರು ಹರಿಸಿ ಎಂದು ಸೂಚಿಸಿರುವುದು. ಇಲ್ಲಿನ ರೈತರ ಹೊಟ್ಟೆಗೆ ಬರೆ ಎಳೆದಂತಾಗಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣೇಗೌಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಬೆಳೆಗಳಿಗೆ ನೀರಿಲ್ಲ: ರಾಜ್ಯದಲ್ಲಿ ಮಳೆ ಬೀಳದೆ ಮಂಡ್ಯ ಜಿಲ್ಲೆಯ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬೇಸಿಗೆ ಬೆಳೆಗೆ ನೀರು ಕೊಡದೆ ಬೆಳೆದಿದ್ದ ಬೆಳೆಗಳೆಲ್ಲಾ ಒಣಗಿ ನಷ್ಟ ಅನುಭವಿಸುತ್ತಿದ್ದಾರೆ. ಮುಂಗಾರು ಮಳೆಯಿಲ್ಲದೆ ಬಿತ್ತನೆ ಕಾಲ ಮುಗಿಯುತ್ತಿದೆ. ಆದರೂ ಬಿತ್ತನೆ ಮಾಡಿಲ್ಲ. ನಾಲೆಗಳ ಮೂಲಕ ನೀರು ಹರಿಸದೆ ಕಟಾವಿಗೆ ಬಂದ ಬೆಳೆಗಳೂ ಒಣಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಸರ್ಕಾರಗಳಿಗೆ ನ್ಯಾಯವೇ ಎಂದು ರೈತ ಸಂಘದ ಕಾರ್ಯಕರ್ತರು ಪ್ರಶ್ನಿಸಿದರು.
ಸರ್ಕಾರಕ್ಕೆ ರೈತರ ಕಾಳಜಿ ಇಲ್ಲ: ಬದುಕು ಆಸೆಯಿಂದ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಹೇಗಾದರೂ ಮಾಡಿ ಸರ್ಕಾರವನ್ನು ಒಪ್ಪಿಸಿ ನಾಲೆಗಳಿಗೆ ನೀರು ಬಿಡಿಸಿಕೊಳ್ಳೋಣವೆಂಬ ನಂಬಿಕೆಯಿಂದ ರೈತರು ಬೆಳೆ ಬೆಳೆಯುತ್ತಾರೆ. ನಾವೇ ಆರಿಸಿ ಕಳಿಸಿರುವ ಜನಪ್ರತಿನಿಧಿಗಳು ನಮಗಾಗಿಯೇ ಇರುವ ನಮ್ಮ ಸರ್ಕಾರಕ್ಕೆ ನಮ್ಮ ಸಂಕಷ್ಟ ಹೇಳಿ ನೀರು ಬಿಡಿಸಿಕೊಳ್ಳೋಣ ಎಂದು ಪ್ರತಿಭಟನೆಗಳಿಯುತ್ತಾರೆ. ಆದರೆ, ನಾಡಿನ ರೈತರ ಈ ಯಾವ ಕಳಕಳಿಯೂ ಸರ್ಕಾರಕ್ಕೆ ಮಾತ್ರ ಕೇಳಿಸುವುದಿಲ್ಲ. ಕಾಣಿಸುವುದಿಲ್ಲ. ತಮಿಳುನಾಡಿಗೆ ಜಲಾಶಯದಿಂದ ನೀರು ಹರಿಸಿರುವುದು, ಅವರವರ ಸರ್ಕಾರವನ್ನು, ಖುರ್ಚಿಯನ್ನು ಕಾಪಾಡಿಕೊಳ್ಳುವುದಷ್ಟೆ ಅವರಿಗೆ ಮುಖ್ಯ ಎಂದು ರೈತರು ದೂರಿದರು.
ನೀರು ಹರಿಸುವುದು ಸ್ಥಗಿತಗೊಳಿಸಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಹಿತ ಕಾಯದೆ ಕಾವೇರಿ ನಿರ್ವಹಣಾ ಮಂಡಳಿಗೆ ಇಲ್ಲಿನ ರೈತರ ಸಮಸ್ಯೆಗಳನ್ನು ತಿಳಿಸದೆ ನೀರು ಹರಿಸುತ್ತಿದೆ. ಕೂಡಲೇ ತಮಿಳುನಾಡಿಗೆ ಹರಿಸುವ ನೀರನ್ನು ಸ್ಥಗಿತಗೊಳಿಸಿ, ಜಿಲ್ಲೆಯ ನಾಲೆಗಳಿಗೆ ನೀರು ಹರಿಸಬೇಕು ಎಂದು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಸ್ವಾಮೀಗೌಡ ಒತ್ತಾಯಿಸಿದರು.
ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ನದಿಗಿಳಿದು ಘೋಷಣೆ ಕೂಗಿದರು. ಬಳಿಕ ಪೊಲಿಸರು ಮನವೊಲಿಸಿ ಪ್ರತಿಭಟನೆ ಬಿಡಿಸಿದರು. ಪ್ರತಿಭಟನೆಯಲ್ಲಿ ಪಿಎಸ್ಸೆಸ್ಕೆ ಮಾಜಿ ನಿರ್ದೇಶಕ ಪಾಂಡು, ರೈತ ಮುಖಂಡರಾದ ಬಾಲಕೃಷ್ಣ, ರಮೇಶ್, ಶಂಕರೇಗೌಡ, ಶ್ರೀನಿವಾಸ್, ಸಿದ್ದಪ್ಪ, ನಾಗೇಂದ್ರ ಸೇರಿದಂತೆ 20ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.