ಚಿಂಚೋಳಿ: ತಾಲೂಕಿನಲ್ಲಿ ಮಳೆ ಅಭಾವದಿಂದಾಗಿ ಮುಂಗಾರು ಹಂಗಾಮಿನ ಹೆಸರು, ಉದ್ದು, ತೊಗರಿ ಬೆಳೆಗಳು ಬಾಡುತ್ತಿರುವುದರಿಂದ ಶಾಸಕ ಡಾ| ಉಮೇಶ ಜಾಧವ್ ಹಾಗೂ ರೈತರ ಬೇಡಿಕೆಯಂತೆ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಮುಖ್ಯ ಕಾಲುವೆಗೆ ನೀರು ಹರಿದು ಬಿಡಲಾಗಿದೆ ಎಂದು ಯೋಜನೆ ಎಇಇ ಕೃಷ್ಣ ಅಗ್ನಿಹೋತ್ರಿ ತಿಳಿಸಿದ್ದಾರೆ. ತಾಲೂಕಿನ ಮುಲ್ಲಾಮಾರಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ, ಕನಕಪುರ, ನಿಮಾಹೊಸಳ್ಳಿ, ಚಿಂಚೋಳಿ, ಗೌಡನಹಳ್ಳಿ, ಅಣವಾರ, ಖೋದಂಪುರ, ಹೂಡದಳ್ಳಿ, ಚಿಮ್ಮಾಇದಲಾಯಿ, ಪರದಾರ ಮೋತಕಪಳ್ಳಿ, ದೋಟಿಕೊಳ, ಸುಲೇಪೇಟ, ಬೆಡಕಪಳ್ಳಿ, ರಾಮತೀರ್ಥ, ಯಾಕಾಪುರ ಗ್ರಾಮಗಳ ರೈತರ ಹೊಲಗಳಲ್ಲಿ ಇರುವ ಬೆಳೆಗಳಿಗೆ ನೀರು ಹರಿಸಬೇಕಾಗಿದೆ.
ಕೆಳದಂಡೆ ಮುಲ್ಲಾಮಾರಿ ಜಲಾಶಯದಲ್ಲಿ ರೈತರ ಜಮೀನುಗಳಿಗೆ ನೀರು ಹರಿದು ಬಿಡಲು ಸಾಕಷ್ಟು ನೀರಿನ ಸಂಗ್ರಹಣೆ ಇದೆ. ಒಟ್ಟು 80 ಕಿಮೀ ಉದ್ದ ಎಡದಂಡೆ ಮುಖ್ಯಕಾಲುವೆಗೆ ಈಗಾಗಲೇ 40 ಕಿಮೀ ವರೆಗೆ ನೀರು ಹರಿದು ಹೋಗಿದೆ. ರೈತರ ಮುಂಗಾರಿನ
ಬೆಳೆಗಳಿಗೆ ನೀರು ಅವಶ್ಯಕತೆ ಮತ್ತು ರೈತರ ಬೇಡಿಕೆಯಂತೆ ಆ.6 ರಂದು ಮುಖ್ಯಕಾಲುವೆಗೆ ನೀರು ಹರಿದು ಬಿಡಲಾಗಿದೆ ಎಂದು ಎಇಇ ತಿಳಿಸಿದ್ದಾರೆ. ಕೆಳದಂಡೆ ಮುಲ್ಲಾಮಾರಿ ಜಲಾಶಯ ಗೇಟಿನ ಬಳಿ ಎರಡೂ ದಂಡೆಗೆ ಸಿಮೆಂಟ್ ತಡೆಗೋಡೆ ನಿರ್ಮಿಸಲಾಗುತ್ತಿದೆ. ಸರಕಾರದಿಂದ 37ಕೋಟಿ ರೂ.ಮಂಜೂರಿ ಆಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.