ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಡದಂಡೆ-ಬಲದಂಡೆ ಕಾಲುವೆಗೆ ಮಾ.31ರವರೆಗೂ ನೀರು ಹರಿಸುವುದಾಗಿ ಹೇಳಿದ್ದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಇದೀಗ ಏ.5ರವರೆಗೂ ನೀರು ಹರಿಸಲು ಸಮ್ಮತಿಸಿದ್ದು ರೈತರಲ್ಲಿ ಕೊಂಚ ಸಮಾಧಾನ, ನಿರಾಳ ಮೂಡಿಸಿದೆ. ಹಣಸಗಿ-ಸುರಪುರ ಭಾಗದಲ್ಲಿ ಈಗಾಗಲೇ ಭತ್ತದ ಬೆಳೆ ತೆನೆ ಹಿಡಿದು ಕಾಳು ಕಟ್ಟಿವೆ.
ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಿ ಶಾಸಕ ರಾಜುಗೌಡ ಮನವಿ ಮಾಡಿ ಮಾತುಕತೆ ನಡೆಸಿದ್ದರಿಂದ ಕಾರಜೋಳ ಅವರು ನೀರು ಹರಿಸಲು ಒಪ್ಪಿಗೆ ನೀಡಿದ್ದು, ಈ ಭಾಗದ ರೈತರ ಭತ್ತದ ಬೆಳೆ ಕಟಾವಿಗೆ ಯಾವುದೇ ತೊಂದರೆ ಇಲ್ಲದಂತಾಗಿ ಚಿಂತೆಯನ್ನು ದೂರ ಮಾಡಿದೆ.
ಪ್ರತಿ ವರ್ಷ ಈ ಭಾಗದ ರೈತರಿಗೆ ನೀರಿನ ಚಿಂತೆಯೇ ಕಾಡುತ್ತಿತ್ತು. ಆದರೆ ಪ್ರಕೃತಿ ವಿಕೋಪ, ಮಳೆ ಬಂದಾಗ ವಾರಾಬಂದಿ ಮೂಲಕ ಮುಂಗಾರು-ಹಿಂಗಾರು ಬೆಳೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗುತ್ತದೆ. ಈ ಬಾರಿಯೂ ಜೂನ್ ಮುಂಗಾರು ಹಂಗಾಮಿನಲ್ಲಿ ಮಳೆಯಾಗಿತ್ತು. ಹೀಗಾಗಿ ಹಿಂಗಾರು ಹಂಗಾಮಿಗೆ ನೀರು ಹರಿಸಲು ಸರಳವಾಗಿತ್ತು. ಕೆಲವೊಮ್ಮೆ ಅನಾವೃಷ್ಟಿಯಿಂದಾಗಿ ಮಳೆ ಇಲ್ಲದ ಸಂದರ್ಭ ಮುಂಗಾರು ಹಂಗಾಮಿಗೆ ಮಾತ್ರ ನೀರು ಹರಿಸಿ ಹಿಂಗಾರು ಹಂಗಾಮಿಗೆ ನೀರು ಕೈಕೊಟ್ಟ ಪರಿಸ್ಥಿತಿ ಈ ಭಾಗದಲ್ಲಿ ಎದುರಾಗಿದ್ದು ಹೊಸದೇನಲ್ಲ.
2020-21ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತಕ್ಕೆ ಬೆಲೆ ಇಲ್ಲದೆ ಕೈ ಸುಟ್ಟುಕೊಂಡ ರೈತರಿಗೆ ಈಗ ನೀರಿನ ಸಂಕಷ್ಟವೂ ಎದುರಾಗಿತ್ತು. ಏ.10ರವರೆಗೂ ನೀರು ಹರಿಸಬೇಕೆಂದು ರೈತ ಸಂಘಟನೆಗಳ ಹಠವಾಗಿತ್ತು. ಮಾ.31ರಂದು ನೀರು ಸ್ಥಗಿತಗೊಳಿಸುವ ನಿರ್ಧಾರ ಕೈಬಿಟ್ಟು ಈಗ ಏ.5ರವರೆಗೂ ನೀರು ಹರಿಸಲು ದಿನಾಂಕ ವಿಸ್ತರಿಸಿದ್ದರಿಂದ ಹುಣಸಗಿ-ಸುರಪುರ ತಾಲೂಕಿನಲ್ಲಿ 54 ಸಾವಿರ ಹೆಕ್ಟೇರ್ ಪ್ರದೇಶಲ್ಲಿನ ಭತ್ತದ ಬೆಳೆ ರೈತರ ಕೈ ಹಿಡಿಯಲಿವೆ ಎಂದು ಸಂತಸಪಟ್ಟ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೋವಿಡ್-19ನಿಂದ ತತ್ತರಿಸಿದ್ದ ರೈತರಿಗೆ ಹಿಂಗಾರು ಬೆಳೆಗಳೇ ಉಸಿರಾಗಿವೆ. ಸಾಲ ಮಾಡಿ ಬೆಳೆದ ಬೆಳೆಗಳು ರೈತರ ಕೈ ಸೇರುವಲ್ಲಿ ಕಾಲುವೆ ನೀರು ವರದಾನವಾಗಿದೆ. ಇದಾಗ್ಯೂ ನೀರು ಮಾ.31ಕ್ಕೆ ಸ್ಥಗಿತಗೊಂಡಿದ್ದರೆ ಕೈ ಬಂದ ತುತ್ತು ಬಾಯಿಗೆ ಬರದಂತಾಗುತ್ತಿತ್ತು. ಆದರೆ ರೈತರ ಸಮಸ್ಯೆ ಅರಿತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಹಾಗೂ ಈ ಭಾಗದ ಶಾಸಕ ರಾಜುಗೌಡ ಮುಂದಾಗಿರುವುದಕ್ಕೆ ರೈತಾಪಿ ವರ್ಗದಿಂದ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ.
ಬಾಲಪ್ಪ.ಎಂ. ಕುಪ್ಪಿ