ಆಲಮಟ್ಟಿ: ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಯ ಕೊನೆಯ ವಿತರಣಾ ಕಾಲುವೆವರೆಗೂ ನೀರು ಹರಿಸಲಾಗುತ್ತಿದ್ದು, ಉಳಿದ ಮೂರು ಕಿ.ಮೀ ಕಾಲುವೆಗೆ ಎರಡು ದಿನದೊಳಗೆ ನೀರು ಹರಿಸುವ ಲಿಖೀತ ಭರವಸೆಯನ್ನು ಕೆಬಿಜೆಎನ್ ಎಲ್ ಅಧಿಕಾರಿಗಳು ನೀಡಿದ್ದರಿಂದ ಸರದಿ ಧರಣಿ ಸತ್ಯಾಗ್ರಹ ಹಾಗೂ ನ. 28ರಿಂದ ನಡೆಸಲು ಉದ್ದೇಶಿಸಿದ್ದ ಆಮರಣ ಉಪವಾಸ ಸತ್ಯಾಗ್ರಹವನ್ನು ಕೈಬಿಡಲಾಗಿದೆ ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಹೇಳಿದರು.
ಚಿಮ್ಮಲಗಿ ಏತ ನೀರಾವರಿ ಪಶ್ಚಿಮ ಕಾಲುವೆಯು ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕಿನ ಜಮೀನುಗಳಿಗೆ ನೀರುಣಿಸಲಿದ್ದು, ನೀರಿಗಾಗಿ ಭೂಮಿ ಕಳೆದುಕೊಂಡ ತಾಲೂಕಿನ ಜನತೆಗೆ ನೀರು ಬಾರದಂತಾಗಿತ್ತು. ಈಗ ಕಾಲುವೆ ವ್ಯಾಪ್ತಿಯ ಎಲ್ಲ ರೈತರ ಜಮೀನಿಗೆ ನೀರು ಪೂರೈಕೆಯಾಗುವುದರಿಂದ ರೈತರಿಗೆ ಸಂತಸವಾಗಲಿದೆ ಎಂದರು.
ಇದಕ್ಕೂ ಮುಂಚೆ ಧರಣಿ ಸ್ಥಳಕ್ಕೆ ಮುಖ್ಯ ಅಭಿಯಂತರ ಜಗನ್ನಾಥರೆಡ್ಡಿ, ಅಧೀಕ್ಷಕ ಅಭಿಯಂತರ ಎಸ್.ಎಚ್. ಮಂಜಪ್ಪ ಭೇಟಿ ನೀಡಿ, ವಿದ್ಯುತ್ ಪೂರೈಕೆ ತೊಂದರೆಯಿಂದ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಮುಖ್ಯ ಸ್ಥಾವರದಲ್ಲಿ ಪಂಪಸೆಟ್ ಕಾರ್ಯಾರಂಭ ಮಾಡುವಲ್ಲಿ ತಾಂತ್ರಿಕ ತೊಂದರೆಯಾಗಿತ್ತು. ಈಗ ಸಮಸ್ಯೆ ಬಗೆಹರಿದು ಪಂಪಸೆಟ್‌ಗಳು ದಿನದ 24 ಗಂಟೆಯೂ ಕಾರ್ಯಾರಂಭ ಮಾಡಿವೆ. ಸೋಮವಾರ ಬೆಳಗಿನ ಜಾವ ಪಶ್ಚಿಮ ಕಾಲುವೆಯಲ್ಲಿ 49 ಕಿ.ಮೀ ಹಾಗೂ ಎಲ್ಲಾ ವಿತರಣಾ ಕಾಲುವೆಯಲ್ಲಿ ನೀರು ಹರಿದಿದೆ.
ಸೋಮವಾರ ಸಂಜೆಯವರೆಗೆ 52 ಕಿ.ಮೀ ವರೆಗೂ ನೀರು ಹರಿಯಲಿದೆ, ಹೀಗಾಗಿ ಹೋರಾಟವನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಸೋಮವಾರ ಧರಣಿ ಸತ್ಯಾಗ್ರಹದಲ್ಲಿ ಸಂಗಮೇಶ ಶಿವಯೋಗಿ, ತಿರುಪತಿ ಬಂಡಿವಡ್ಡರ, ಸಂಗಣ್ಣ ಕೋತಿನ್, ಕಲ್ಲಪ್ಪ ಕುಂಬಾರ, ಬಿಜೆಪಿ ಮುಖಂಡರಾದ ಎಂ.ಎಸ್. ಪಾಟೀಲ (ನಾಲತವಾಡ), ರಾಮು ಜಗತಾಪ, ಆರ್.ಎಸ್. ಪಾಟೀಲ (ಕೂಚಬಾಳ), ರಾಮು ಜಗತಾಪ, ಬಸವರಾಜ ದಂಡೀನ,ನಿತ್ಯಾನಂದ ಮೇಲಿನಮಠ ಮೊದಲಾದವರಿದ್ದರು.