ಆಲಮಟ್ಟಿ: ಕೃಷ್ಣೆಯ ಉಗಮಸ್ಥಾನ ಹಾಗೂ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ಹಾಗೂ ಜಿಲ್ಲೆಯಲ್ಲಿ ತುಂತುರು ಮಳೆ ಪರಿಣಾಮ ಮುಂಗಾರು ಹಂಗಾಮಿಗೆ ಜಮೀನಿಗೆ ನೀರು ಹರಿಸುವ ಅವ ಧಿಯನ್ನು ಯಾವಾಗ ನಿಗದಿ ಮಾಡಲಾಗುತ್ತದೆ ಎಂದು ರೈತರು ನೀರಾವರಿ ಸಲಹಾ ಸಮಿತಿಯತ್ತ ಚಿತ್ತ ನೆಟ್ಟಿದ್ದಾರೆ.
ಶುಕ್ರವಾರ ಸಾಯಂಕಾಲದ ಮಾಹಿತಿಯಂತೆ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ 1,46,211 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ತೌಕ್ತೆ ಚಂಡಮಾರುತದ ಪರಿಣಾಮ ಪ್ರತಿ ವರ್ಷಕ್ಕಿಂತಲೂ ಈ ಬಾರಿ ಜಲಾಶಯಕ್ಕೆ ಮುಂಚಿತವಾಗಿ ನೀರು ಹರಿದು ಬರುತ್ತಿದೆ. ಮೇ ತಿಂಗಳಿನಿಂದ ನಿರಂತರ ನೀರು ಹರಿದು ಬರುತ್ತಿದ್ದು ಜಲಾಶಯ ವಾಡಿಕೆಗಿಂತ ಮುಂಚಿತವಾಗಿ ತುಂಬಲಿದೆ ಎಂದು ರೈತರು ಆಶಾಭಾವ ಹೊಂದಿದ್ದಾರೆ. ಕಳೆದ ಬಾರಿ ಮುಂಗಾರು ಹಂಗಾಮಿನಲ್ಲಿ ರೈತರ ಜಮೀನಿಗೆ ಕಾಲುವೆ ನೀರು ಹರಿಸಬೇಕು ಎಂದು ಸರ್ಕಾರ ಯೋಚನೆ ಮಾಡುವ ವೇಳೆ ಮಳೆಗಾಲ ಆರಂಭವಾಗಿತ್ತು.
ನಿರಂತರ ಮಳೆ ಸುರಿದ ಪರಿಣಾಮ ಮೆಕ್ಕೆಜೋಳ, ಸಜ್ಜೆ, ಉಳ್ಳಾಗಡ್ಡಿ ಸೇರಿದಂತೆ ಬಹುತೇಕ ಬೆಳೆಗಳು ತೇವಾಂಶ ಹೆಚ್ಚಾಗಿ ಬೆಳೆ ಹಾನಿಯಾಗುವಂತಾಗಿತ್ತು. ಇನ್ನು ಹಿಂಗಾರು ಬಿತ್ತನೆಗೆ ನಿರಂತರ ಮಳೆ ಅವಕಾಶ ನೀಡಿರಲಿಲ್ಲ. ಈ ಬಾರಿ ಕೃಷ್ಣೆಯ ಉಗಮ ಸ್ಥಾನ ಹಾಗೂ ಕೃಷ್ಣಾ ನದಿಯ ಉಪ ನದಿಗಳ ಜಲಾನಯನ ಪ್ರದೇಶದಲ್ಲಿ ವಾಡಿಕೆಗಿಂತಲೂ ಮುಂಚಿತವಾಗಿ ತೌಕ್ತೆ ಚಂಡಮಾರುತದ ಪರಿಣಾಮ ಮೇ 22ರಿಂದ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಆರಂಭವಾಗಿದೆ. 519.60 ಮೀ. ಎತ್ತರವಾಗಿ 123.081 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 510.60 ಮೀ. ಎತ್ತರವಾಗಿ 32.922 ಟಿಎಂಸಿ ಅಡಿ ನೀರು ಸಂಗ್ರಹವಾಗಿ 1,46,211ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೂ ಹೊರ ಬಿಡುತ್ತಿಲ್ಲ.
ಕ್ಲೋಸರ್ ಕಾಮಗಾರಿ: ಪ್ರತಿ ಬಾರಿ ಮಳೆಗಾಲಕ್ಕೂ ಮುಂಚಿತವಾಗಿ ಕಾಲುವೆಗಳ ದುರಸ್ತಿ ಹಾಗೂ ಹೂಳು ಮತ್ತು ಗಿಡಗಂಟಿಗಳನ್ನು ತೆರವು ಮಾಡಲಲಾಗುತ್ತಿತ್ತು. ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗುವುದರಿಂದ ಕೃ.ಮೇ.ಯೋ. ನೀರಾವರಿ ಸಲಹಾ ಸಮಿತಿ ಸಭೆ ನಡೆದು ಕಾಲುವೆಗಳಿಗೆ ನೀರು ಹರಿಸುವುದು ವಾಡಿಕೆ. ಆದರೆ ಈ ಬಾರಿ ರೋಹಿಣಿ ಹಾಗೂ ಮೃಗಶಿರಾ ಮಳೆಯಾಗಿದ್ದು ಕಾಲುವೆಗಳಲ್ಲಿ ನೀರು ಸಂಗ್ರಹವಾಗಿದೆ.
ಇದರ ಮಧ್ಯೆ ಕೆಬಿಜೆನ್ನೆಲ್‌ನ ವಿವಿಧ ವಿಭಾಗಗಳಿಂದ ಸ್ಪೇಷಲ್ ರಿಪೇರಿ ಹಾಗೂ ಕ್ಲೋಸರ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಇದರಿಂದ ನೀರಿನಲ್ಲಿ ಹೂಳು ತಗೆಯುವದಾದರೂ ಹೇಗೆ ಎನ್ನುವ ಪ್ರಶ್ನೆ ಒಂದೆಡೆಯಾದರೆ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತಲೂ ಶೇ. 50 ಕಡಿಮೆ ದರದಲ್ಲಿ ಗುತ್ತಿಗೆದಾರರು ಕಾಮಗಾರಿಗಳನ್ನು ಪಡೆಯುತ್ತಿರುವುದು ಕೂಡ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಂಶಯ ಮೂಡುವಂತಾಗಿದೆ.