Advertisement

ಜಿಲ್ಲೆಯ 3 ಸಾವಿರ ಕೆರೆಗಳಿಗೆ ನೀರು

12:43 PM Nov 21, 2021 | Team Udayavani |

ಮೈಸೂರು: ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಎಲ್ಲಾ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಬೇಸಿಗೆ ನೀರಿನ ಕೊರತೆ ನೀಗಿಸಿವೆ. ಪ್ರತಿ ವರ್ಷ ಉತ್ತಮ ಮಳೆಯಾದರೂ ಜಿಲ್ಲೆಯ ಶೇ.30ರಷ್ಟು ಕೆರೆಗಳು ಭರ್ತಿಯಾಗದೇ ಉಳಿದರೆ, ಉಳಿದ ಕೆರೆಗಳು ಭರ್ತಿಯಾಗಿ ಬೇಸಿಗೆ ಹೊತ್ತಿಗೆ ಒಣಗುತ್ತಿದ್ದವು.

Advertisement

ಆದರೆ, ಈ ಬಾರಿ ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ತಿಂಗಳಿನಿಂದ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜಲಾಶಯಗಳಲ್ಲದೇ ಕೆರೆ-ಕಟ್ಟೆಗಳು ಸಂಪೂರ್ಣ ಭರ್ತಿಯಾಗಿ ಕೋಡಿ ಹರಿಯುತ್ತಿದ್ದು, ಜನರಲ್ಲಿ ಬರಗಾಲದ ಆತಂಕ ದೂರವಾಗಿದೆ.

ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 3,148ಕ್ಕೂ ಹೆಚ್ಚು ಕೆರೆ-ಕಟ್ಟೆಗಳಿದ್ದು, ಇವುಗಳಲ್ಲಿ ಶೇ.80 ಕೆರೆಗಳು ತುಂಬಿ ಹರಿಯುತ್ತಿದ್ದರೆ ಶೇ.15 ರಷ್ಟು ಕೆರೆಗಳು ತುಂಬವ ಹಂತದಲ್ಲಿವೆ. ಉಳಿದ ಶೇ.5ರಷ್ಟು ಕೆರೆಗಳು ಅರ್ಧದಷ್ಟು ಭರ್ತಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಉಂಟಾಗುತ್ತಿದ್ದ ಬರಗಾಲ ಪರಿಸ್ಥಿತಿ ಈ ಬಾರಿ ನಿವಾರಣೆಯಾದಂತಾಗಿದೆ.

40 ವರ್ಷ ಬಳಿಕ ಲಿಂಗಾಂಬುದಿ ಕೆರೆ ಭರ್ತಿ: ಸಾಮಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಕೆರೆಯಾಗಿರುವ ಲಿಂಗಾಂಬುದಿ ಕೆರೆ 40 ವರ್ಷಗಳ ಬಳಿಕ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದೆ. ಕೊಳಚೆ ನೀರಿನಿಂದ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದ ಈ ಕೆರೆಗೆ ಕಳೆದೊಂದು ತಿಂಗಳಿನಿಂದ ಸುರಿದ ನಿರಂತರ ಮಳೆಯ ಪರಿಣಾಮ 400 ಎಕರೆಗೂ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಲಿಂಗಾಂಬುಂದಿ ಕೆರೆಯಲ್ಲಿ ಸುಮಾರು 109 ಎಕರೆ ಪ್ರದೇಶದಲ್ಲಿ ನೀರು ವ್ಯಾಪಿಸಿಕೊಂಡಿದೆ.

Advertisement

ಇದನ್ನೂ ಓದಿ:- ಹುತಾತ್ಮ ರೈತರ ಕುಟುಂಬಕ್ಕೆ ಪರಿಹಾರ ನೀಡಿ

ಜೊತೆಗೆ ಕಳೆದೆರೆಡು ದಿನಗಳಿಂದ ಕೋಡಿ ಮೂಲಕ ನೀರು ಹರಿಯು ತ್ತಿದ್ದು, ಕೆರೆಯ ಕಳೆಭಾಗದ ಬಡಾವಣೆಗಳು ಜಲಾವೃತವಾಗುವ ಭೀತಿಯಲ್ಲಿವೆ. ಕೆರೆಯಿಂದ ಹೊರ ಬಂದ ನೀರಿನ ಪ್ರಮಾಣ ಹೆಚ್ಚಾಗಿದ್ದ ಪರಿಣಾಮ ನೀರು ರಸ್ತೆ ಮೇಲೆ ಹರಿದು ಚರಂಡಿಗಳು ತುಂಬಿ ಹರಿಯುತ್ತಿವೆ. ಅಲ್ಲದೆ, ರಸ್ತೆಗಳಲ್ಲೆಲ್ಲಾ ನೀರು ನಿಂತು ಅಪರ್ಣ ಲೇಔಟ್‌, ವೀರರಾಜ ಅರಸ್‌ ಲೇಔಟ್‌, ಕೆಎಸ್‌ ಆರ್‌ಟಿಸಿ ಲೇಔಟ್‌ ಸೇರಿದಂತೆ ಕೆಲ ಬಡಾವ ಣೆಗಳ ನೂರಾರು ಮನೆಗಳು ಜಲಾವೃತವಾಗಿವೆ.

ಕಣ್ಮರೆಯಾದ ನೀರಿನ ಮೂಲ: ಜಿಲ್ಲೆಯ ಶೇ.05ರಷ್ಟು ಕೆರೆಗಳಿಗೆ ಇದ್ದ ನೀರಿನ ಮೂಲಗಳು ಒತ್ತುವರಿಯಾಗಿರುವ ಪರಿಣಾಮ ಕೆರೆಗೆ ಮಳೆನೀರು ಹರಿದು ಬರುವ ನೀರಿನ ಕಾಲುವೆ ಇಲ್ಲದೆ ಕೆರೆಗಳು ಬತ್ತಿವೆ. ಒಂದು ತಿಂಗಳಿನಿಂದ ಭಾರಿ ಪ್ರಮಾಣದಲ್ಲಿ ಮಳೆಯಾದರೂ ಹಲವು ಕೆರೆಗಳು ಅರ್ಧದಷ್ಟು ತುಂಬದೇ ಪಾಳು ಬಿದ್ದಿದ್ದು, ಕೆರೆಯ ನೀರಿನ ಮೂಲಗಳನ್ನು ಸಂರಕ್ಷಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ನಗರದ ಎಲ್ಲಾ ಕೆರೆಗಳು ಭರ್ತಿ: ನಿರಂತರ ಮಳೆಯಿಂದ ನಗರದ ಕುಕ್ಕರಹಳ್ಳಿ ಕೆರೆ, ಲಿಂಗಾಂಬುದಿ ಕೆರೆ, ಮರಿಯಪ್ಪನ ಕೆರೆ, ಕಾರಂಜಿ ಕೆರೆ, ಹಿನಕಲ್‌ ಕೆರೆ, ಹಬ್ಟಾಳ್‌ ಕೆರೆ, ಬೊಮ್ಮನಹಳ್ಳಿ ಕೆರೆ, ತಿಪ್ಪಯ್ಯನ ಕೆರೆ ಭರ್ತಿಯಾಗಿದ್ದು, ಎಲ್ಲಾ ಕೆರೆಗಳಲ್ಲೂ ಜೀವ ವೈವಿಧ್ಯತೆ ನಳನಳಿಸುತ್ತಿದೆ.

– ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next