Advertisement

ಕೊಯ್ನಾ ಡ್ಯಾಂ ಮೂಲಕ ಕೃಷ್ಣಾ ನದಿಗೆ ನೀರು: ರಾಜ್ಯದ ಮನವಿಗೆ ಸ್ಪಂದಿಸದ ಮಹಾರಾಷ್ಟ್ರ

10:38 PM Jun 26, 2023 | Team Udayavani |

 

Advertisement

ಮೈಸೂರು: ಕೊಯ್ನಾ ಡ್ಯಾಂ ಮೂಲಕ 3 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮಾಡಿರುವ ಮನವಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿ, ಬೆಂಗಳೂರಿನಲ್ಲಿ ಮಂಗಳವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮುಂಗಾರು ಮಳೆ ಆರಂಭದಲ್ಲೇ ಕೈ ಕೊಟ್ಟಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದ ಮಳೆ ಕೊರತೆಯಾಗಿದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗಾಗಲೇ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾಹಿತಿ ಪಡೆದುಕೊಂಡಿದ್ಧಾರೆ. ಎಲ್ಲಿಯೂ ಕುಡಿಯುವ ನೀರಿನ ಕೊರತೆಯಾಗದಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ಧಾರೆ ಎಂದರು.

ಮಹದಾಯಿ ಯೋಜನೆ ಅನುಷ್ಠಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಡಬಲ್‌ ಎಂಜಿನ್‌ ಸರ್ಕಾರ ಇತ್ತು. ಕೇಂದ್ರ, ರಾಜ್ಯ, ಗೋವಾ ಎಲ್ಲಾ ಕಡೆಯೂ ಬಿಜೆಪಿ ಸರ್ಕಾರಗಳಿದ್ದವು. ಸುಲಭವಾಗಿ ಸಮಸ್ಯೆ ಬಗೆಹರಿಸಬಹುದಿತ್ತು. ಈ ವಿಚಾರದಲ್ಲಿ ಪ್ರಧಾನಿ ಮೋದಿ  ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು ಜನರನ್ನು ದಾರಿ ತಪ್ಪಿಸುವ ಕೆಲಸ ಬಿಟ್ಟು ಬೇರೇನನ್ನೂ ಮಾಡಲಿಲ್ಲ. ಬಿಜೆಪಿಯವರು ಕೇವಲ ಭಾವನಾತ್ಮಕವಾಗಿ ಚುನಾವಣೆ ದೃಷ್ಟಿಯಿಂದ ಮಾತನಾಡುತ್ತಾರೆ. ಇವರಿಗೆ ಜನರ ಬಗ್ಗೆ ಕಾಳಜಿಯಿಲ್ಲ ಎಂದು ಟೀಕಿಸಿದರು.

Advertisement

ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆಗೆ ಚಾಲನೆ: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ  ಕೊಕ್ಕೆ ಹಾಕಿದೆ. ಕೇಂದ್ರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನು ಇದೆ. ಅದರಲ್ಲಿ ಹೆಚ್ಚುವರಿ ಅಕ್ಕಿ ಕೊಡಿ ಅಂತ ಕೇಳಿದ್ದೇವೆ. ಮೋದಿಯವರ ಮನೆಯಿಂದ ಅಥವಾ ಇನ್ಯಾರೋ ಮನೆಯಿಂದ ಕೊಡುತ್ತಿಲ್ಲ. ರಾಜಕೀಯ ಕಾರಣಗಳಿಂದ ಅಕ್ಕಿ ಕೊಡುತ್ತಿಲ್ಲ ಅಷ್ಟೇ.  ನಾವು ಜನರಿಗೆ ನೀಡಿರುವ ಭರವಸೆ ಈಡೇರಿಸುತ್ತೇವೆ ಎಂದು ಸಚಿವರು ಹೇಳಿದರು.

ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ಕೊಡಿ ಅಂತ ಯಡಿಯೂರಪ್ಪ ಕೇಳಬೇಕು. ಶೋಭಾ ಕರಂದ್ಲಾಜೆ ಕೂಡ ಗ್ಯಾರಂಟಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇವರು ಹೇಳಬೇಕಲ್ವೇ ಎಂದು ತಿರುಗೇಟು ನೀಡಿದರು.

ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಗೃಹಲಕ್ಷ್ಮೀ ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ. ಆ್ಯಪ್‌ ಕೂಡ ರೆಡಿಯಾಗಿದೆ. ಮಂಗಳವಾರ ಅರ್ಜಿ ಸಲ್ಲಿಕೆಗೆ ಚಾಲನೆ ಸಿಗಲಿದೆ. ಆ.15ರ ನಂತರ ಫ‌ಲಾನುಭವಿಗಳ ಖಾತೆಗೆ ಹಣ ಹಾಕಲಾಗುತ್ತದೆ ಎಂದು ಹೇಳಿದರು.

ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ನನ್ನ ಬಳಿಗೆ ಬನ್ನಿ. ಅನುಕೂಲ ಮಾಡಿಕೊಡೋಣ. ಆದರೆ ಈ ವಿಚಾರದಲ್ಲಿ ಮಧ್ಯವರ್ತಿಗಳು ಬೇಡ. ಏನೇ ಸಮಸ್ಯೆ ಇದ್ದರೂ ನನ್ನ ಬಳಿಯೇ ಹೇಳಿ.

-ಬೋಸರಾಜು, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next