ಹೊನ್ನಾವರ: ಲಿಂಗನಮಕ್ಕಿ ನೀರು ಬಿಡುವ ಮುನ್ನವೇ ತಾಲೂಕಿನಲ್ಲಿ ಜಲಕಂಟಕ ಎದುರಾಗಿದ್ದು, ಚಿಕ್ಕನಕೋಡ, ಖರ್ವಾ, ಹಡಿನಬಾಳ, ಹೊಸಾಕುಳಿ ಗ್ರಾ.ಪಂ. ವ್ಯಾಪ್ತಿಯ ನೂರಾರು ಮನೆಗಳಿಗೆ ಗುರುವಾರ ಮುಂಜಾನೆ ನೀರು ನುಗ್ಗಿದೆ.
ಜು.31ರ ಬುಧವಾರ ರಾತ್ರಿ ತಾಲೂಕಿನಲ್ಲಿ ಹಾಗೂ ಸಿದ್ದಾಪುರದಲ್ಲಿ ಸುರಿದ ಮಳೆಯಿಂದ ಗುಂಡಬಾಳ ಹೊಳೆಯು ಅಪಾಯ ಮಟ್ಟ ಮೀರಿ ಮುಂಜಾನೆ ಮೂರು ಗಂಟೆಯ ಸಮಯದಲ್ಲಿ ನೀರು ನುಗ್ಗಿದೆ. ಇದರಿಂದ ಮತ್ತೆ ನದಿ ತೀರದ ಪ್ರದೇಶಗಳಲ್ಲಿ ನೆರೆ ಭೀತಿ ಮುಂದುವರೆದಿದೆ.
ಗುಂಡಬಾಳ, ಬಾಸ್ಕೇರಿ, ಹೊಳೆ ಭರ್ತಿಯಾಗಿ ಮೈದುಂಬಿ ಹರಿಯುತ್ತಿದ್ದು, ನದಿ ತೀರದ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗುತ್ತಿದೆ. ಗುಂಡಿಬೈಲ್, ಚಿಕ್ಕನಕೋಡ, ಮುಟ್ಟಾ, ಹೆಬೈಲ್, ಕೆಂಚಗಾರ, ಗುಂಡಬಾಳ ದೇವಸ್ಥಾನ ಕೇರಿ, ಹಡಿನಬಾಳ,ಕಾವೂರು, ಖರ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಥಗೇರಿ, ಕೂಡ್ಲ ನದಿ ತಟದ ಎಡಬಲ ದಂಡೆಯ ಪ್ರದೇಶಗಳಲ್ಲಿ ಪ್ರವಾಹ ಸಂಭವಿಸಿದ ಪರಿಣಾಮ ರಾತ್ರಿ ಇಡೀ ಜನರು ಆತಂಕದಲ್ಲಿ ಕಾಲ ಕಳೆಯುವಂತಾಯಿತು.
ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ಆವರಿಸಿದೆ. ದೋಣಿಯ ಮೂಲಕ ಜನ, ಜಾನುವಾರು ಸಾಗಾಟಕ್ಕೆ ಗ್ರಾಮ ಪಂಚಾಯತ್ ಹಾಗೂ ಅಧಿಕಾರಿ ವರ್ಗ ಕಾಳಜಿ ಕೇಂದ್ರದಲ್ಲಿ ಜನರನ್ನು ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.
ಹೊಸಾಕುಳಿ ಸಮೀಪದ ವಿಶ್ವೇಶ್ವರ ಹೆಗಡೆ ಇವರ ಮನೆಯ ಮೇಲೆ ಬೃಹತ್ ಬಂಡೆ ಬಿದ್ದು, ಮನೆ ಸಂಪೂರ್ಣ ಜಖಂ ಆಗಿದೆ. ಮನೆಯೊಳಗಡೆ ಇದ್ದ ಟಿವಿ, ರೆಪ್ರಿಜರೇಟರ್, ವಾಷಿಂಗ್ ಮಿಷನ್ ಸೇರಿದಂತೆ ಹಲವು ವಸ್ತುಗಳಿಗೆ ಹಾನಿಯಾಗಿದೆ.
ನೋಡಲ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಆರೋಗ್ಯ ಇಲಾಖೆಯವರು ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಮುಖಾಂ ಹೂಡಿದ್ದಾರೆ.