Advertisement

ಜಿಗಜಿಗಣಿ ಹುಟ್ಟೂರಲ್ಲೇ ಜಲದಾಹ

11:07 AM Mar 08, 2019 | |

ಇಂಡಿ: ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಗಣಿ ಅವರ ಸ್ವ ಗ್ರಾಮ ಅಥರ್ಗಾದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಸ್ಥಳೀಯ ಗ್ರಾಪಂ ವತಿಯಿಂದ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆಯಾದರೂ ಆ ನೀರು ಜನರಿಗೆ ಸಾಲುತ್ತಿಲ್ಲ. ಇನ್ನೂ ಹೆಚ್ಚಿನ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಜನರು ಗ್ರಾಮ ಪಂಚಾಯತ್‌ಗೆ ಮನವಿ ಮಾಡುತ್ತಿದ್ದಾರೆ.

Advertisement

ಅಥರ್ಗಾ ಗ್ರಾಮ ಈಗಿನ ಕೇಂದ್ರ ಸಚಿವ ರಮೇಶ ಜಿಗಜಿಣಗಿಯವರ ಹುಟ್ಟೂರು. ರಮೇಶ ಜಿಗಜಿಣಗಿ ಅವರು ಸತತ ಐವತ್ತು ವರ್ಷಗಳಿಂದ ರಾಜಕಾರಣದಲ್ಲಿದ್ದು ಶಾಸಕರು, ಸಂಸದರು, ಈಗ ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ತಮ್ಮ ಹುಟ್ಟೂರಲ್ಲೇ ನೀರಿನ ಸಮಸ್ಯೆ ಪರಿಹರಿಸಲು ಆಗಿಲ್ಲ.

ಟ್ಯಾಂಕರ್‌ ಬಂತೆಂದರೆ ಸಾಕು ಪ್ರತಿ ಮನೆಗಳಲ್ಲಿನ ಹತ್ತಾರು ಕೊಡ ತೆಗೆದುಕೊಂಡು ಮಹಿಳೆಯರು ತಾ ಮುಂದು, ನಾ ಮುಂದು ಎನ್ನುತ್ತಾ ಓಡಿ ಹೋಗಿ ನೀರಿಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಾರೆ.

ಈ ಸಮಸ್ಯೆ ಪ್ರತಿ ವರ್ಷವೂ ಸಹ ಇದ್ದದ್ದೆ. ಆದರೆ ಈ ವರ್ಷ ಬಹುತೇಕ ಕೊಳವೆಬಾವಿಗಳಿಗೆ ನೀರು ಬತ್ತಿದ್ದು, ಸಂಗೋಗಿ ಕೆರೆಯಲ್ಲಿಯೂ ನೀರಿಲ್ಲ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಮುಖಾಂತರ ನೀರು ಪೂರೈಸಲಾಗುತ್ತಿದ್ದು, ಸಂಗೋಗಿ ಕೆರೆಯಲ್ಲಿ ನೀರು ಖಾಲಿಯಾದ ಪ್ರಯುಕ್ತ ಪ್ರಸಕ್ತ
ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಮಸ್ಯೆ ಎದುರಾಗಿದೆ.

ಗ್ರಾಮ ಪಂಚಾಯತ್‌ ವತಿಯಿಂದ ನೀರು ಪೂರೈಸಲಾಗುತ್ತಿದ್ದು 12 ಸಾವಿರಕ್ಕಿಂತ ಹೆಚ್ಚು ಜನ ಸಂಖ್ಯೆ ಹೊಂದಿದ ದೊಡ್ಡ ಗ್ರಾಮವಾಗಿದ್ದರಿಂದ ಟ್ಯಾಂಕರ್‌ ಬಂತೆಂದರೆ ಸಾಕು ನೂರಾರು ಮಹಿಳೆಯರು ಸಾಲುಗಟ್ಟಿ ನೀರುಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ತಾಲೂಕು ಹಲವಾರು ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗುತ್ತಿದೆ. ಬೇಸಿಗೆಯಲ್ಲಿ ಪ್ರತಿ ಬಾರಿಯೂ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಯ ಮುಖಾಂತರ ತಾಲೂಕಿನ 84 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ ನೀರಿನ ಲಭ್ಯತೆ ಇಲ್ಲದ ಕಾರಣ ಯಾವ ನೀರು ಪೂರೈಕೆಯಾಗುತ್ತಿಲ್ಲ. ನಾರಾಯಣಪುರ ಡ್ಯಾಂ ಮುಖಾಂತರ ತಾಲೂಕಿನ ಕಾಲುವೆಗಳಿಗೆ ನೀರು ಹರಿಸಲು ಸೂಚಿಸಿದ್ದೇನೆ. ಅರ್ಧಕ್ಕೆ ನೀರು ಬಂದಿವೆ. ಕಾಲುವೆಗೆ ನೀರು ಹರಿದರೆ ಮತ್ತೆ ಒಂದು ತಿಂಗಳ ಮಟ್ಟಿಗೆ ಇಂಡಿ ತಾಲೂಕಿನ ಬಹುತೇಕ ಹಳ್ಳಿಗಳಿಗೆ ನೀರಿನ ತೊಂದರೆ ತಪ್ಪಲಿದೆ.  ರಮೇಶ ಜಿಗಜಿಣಗಿ. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ.

ತಾಲೂಕಿನ ಯಾವ ಹಳ್ಳಿಗಳಿಗೆ ಕುಡಿಯುವ ನೀರಿನ ತೊಂದರೆ ಇದೆಯೋ ಎಲ್ಲ ಹಳ್ಳಿಗಳಿಗೂ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಎಲ್ಲ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಥರ್ಗಾ ಗ್ರಾಮದಲ್ಲಿಯೂ
ನೀರಿನ ಸಮಸ್ಯೆ ಇದ್ದು, ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. 
 ಡಾ. ವಿಜಯಕುಮಾರ ಆಜೂರ, ಇಒ, ತಾಪಂ.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಲ್ಲಿ ಅಥರ್ಗಾ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ ಸಂಗೋಗಿ ಗ್ರಾಮದಲ್ಲಿನ ಕೆರೆಯಲ್ಲಿ ನೀರು ಇರದೇ ಇರುವುದರಿಂದ ಈಗ ನೀರಿನ ಸಮಸ್ಯೆ ಉಲ್ಬಣಿಸಿದೆ. ನಾರಾಯಣಪುರದಿಂದ ಕಾಲುವೆಗೆ ನೀರು ಹರಿಬಿಟ್ಟಿದ್ದು, ಶನಿವಾರ ಸಂಗೋಗಿ ಕೆರೆಗೆ ನೀರು ಬರಲಿದೆ. ರವಿವಾರದಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಮುಖಾಂತರ ನೀರು ಪೂರೈಸಲಾಗುತ್ತದೆ.
 ಬಿ.ಎಫ್‌. ನಾಯ್ಕರ, ಎಇಇ, ಜಿಪಂ ಕುಡಿಯುವ ನೀರು ಸರಬರಾಜು ಇಲಾಖೆ.

ಅಥರ್ಗಾ ಗ್ರಾಪಂ ವ್ಯಾಪ್ತಿಯಲ್ಲಿ 4 ಟ್ಯಾಂಕರ್‌ ಮೂಲಕ 24 ಟ್ರಿಪ್‌ ನೀರು ಪೂರೈಸಲಾಗುತ್ತಿದೆ. ಪಂಚಾಯತ್‌ ವ್ಯಾಪ್ತಿಯ ರಾಜನಾಳ ತಾಂಡಾಕ್ಕೆ ನೀರಿನ ಬೇಡಿಕೆಯಿದ್ದು, 3 ಟ್ಯಾಂಕರ್‌ ಮೂಲಕ 9 ಟ್ರಿಪ್‌ ನೀರು ಪೂರೈಸಲು ಅನುಮತಿಗಾಗಿ ತಾಪಂಗೆ ಕಳುಹಿಸಲಾಗಿದೆ. ಶುಕ್ರವಾರದಿಂದ ನೀರು
ಪೂರೈಸಲು ಪ್ರಾರಂಭ ಮಾಡಲಾಗುತ್ತದೆ. 
 ಜೆ.ಜಿ. ಕುಲಕರ್ಣಿ, ಪಿಡಿಒ, ಅಥರ್ಗಾ.

„ ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next