Advertisement

2 ದಶಕ ಕಳೆದರೂ ಹರಿಯದ ನೀರು!

10:07 AM Jul 23, 2019 | Suhan S |

ಚಿಕ್ಕೋಡಿ: ಕಳೆದ ಎರಡು ದಶಕಗಳಿಂದ ಈ ಭಾಗದ ಜನರ ಪಾಲಿಗೆ ವರದಾನವಾಗಬೇಕಿದ್ದ ರಾಯಬಾಗ ಉನ್ನತ ಮಟ್ಟದ (ಆರ್‌ಎಚ್ಎಲ್ಡಿ) ಕಾಲುವೆಯಲ್ಲಿ ನೀರು ಹರಿದಿಲ್ಲ. ಇದರಿಂದ ಕಾಲುವೆಯಲ್ಲಿ ಹೂಳು, ಮುಳ್ಳು ಕಂಟಿಗಳು ಬೆಳೆದು ನೀರು ಹರಿಯದ ಸ್ಥಿತಿ ನಿರ್ಮಾಣವಾಗಿದೆ.

Advertisement

ಘಟಪ್ರಭಾದ ಹಿರಣ್ಯಕೇಶಿ ನದಿಯಿಂದ ಈ ಕಾಲುವೆಗೆ ನೀರು ಪೂರೈಕೆ ಯಾಗುತ್ತದೆ. ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸಲು 1973ರಲ್ಲಿ ಕಾಲುವೆ ಕೆಲಸ ಪ್ರಾರಂಭವಾಗಿದ್ದು, 1976ರಲ್ಲಿ ನೀರು ಹರಿದಿದೆ. ಅಲ್ಲಿಂದ 2000 ಇಸ್ವಿಯವರಿಗೆ ಚಿಕ್ಕೋಡಿ ತಾಲೂಕಿನ ಕೊನೆ ಹಳ್ಳಿಗಳಿಗೆ ನೀರು ಹರಿದಿದೆ. ನಂತರದ ದಿನಗಳಿಂದ ಇಲ್ಲಿಯವರೆಗೆ ಒಂದು ಹನಿ ನೀರು ಹರಿದಿಲ್ಲ. ಕಾಲುವೆ ನಂಬಿ ಜೀವನ ನಡೆಸುತ್ತಿರುವ ರೈತರ ಗೋಳು ಮಾತ್ರ ನಿಂತಿಲ್ಲ.

ರಾಯಬಾಗ ತಾಲೂಕಿನವರೆಗೆ ಸರಾಗವಾಗಿ ಕಾಲುವೆಗೆ ನೀರು ಬರುತ್ತದೆ. ಅಲ್ಲಿಂದ ಚಿಕ್ಕೋಡಿ ತಾಲೂಕಿನ ಹಳ್ಳಿಗಳಿಗೆ ನೀರು ಬರದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಕಾಲುವೆಗೆ ನೀರು ಹರಿಸಬೇಕೆಂದು ಚಿಕ್ಕೋಡಿ ತಾಲೂಕಿನ ಕಾಡಾಪೂರ, ಕೇರೂರ, ಕೇರೂರವಾಡಿ, ಅರಬ್ಯಾನವಾಡಿ, ನನದಿ, ನನದಿವಾಡಿ, ರೂಪಿನಾಳ, ಹಿರೇಕೊಡಿ ಮುಂತಾದ ಹಳ್ಳಿಯ ರೈತರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾರೆ. ಪ್ರತಿಭಟನೆಯನ್ನೂ ನಡೆಸುತ್ತಾರೆ. ಆದರೂ ಕಾಲುವೆಗೆ ನೀರು ಹರಿಯುತ್ತಿಲ್ಲವೆಂಬುದು ರೈತರ ಗಂಭೀರ ಆರೋಪ.

ರಾಯಬಾಗ ಉನ್ನತ ಮಟ್ಟದ ಕಾಲುವೆಗೆ ನೀರು ಹರಿದು 19 ವರ್ಷ ಕಳೆದಿವೆ. ಈ ಹಿಂದೆ 2013ರಲ್ಲಿ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಬೃಹತ್‌ ಪ್ರತಿಭಟನೆ ನಡೆಸಿದಾಗ ಒಂದು ಬಾರಿ ನೀರು ಹರಿಸಿದ್ದು ಬಿಟ್ಟರೆ ಮತ್ತೆ ನೀರು ಹರಿಸಿಲ್ಲ. ಕೊನೆ ಹಳ್ಳಿಯ ರೈತರಿಗೆ ಒಂದು ಹನಿ ನೀರು ತಲುಪಿಲ್ಲ. ಮಳೆ ಇಲ್ಲದೆ ಕಂಗಾಲಾಗಿರುವ ರೈತನಿಗೆ ಕಾಲುವೆಯಿಂದ ನೀರು ಮುಟ್ಟದೆ ಇರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

ಕಾಲುವೆಯಲ್ಲಿ ಹೂಳು: ರಾಯಬಾಗ ತಾಲೂಕು ಮುಗಿದು ಚಿಕ್ಕೋಡಿ ತಾಲೂಕು ಗಡಿಯಿಂದ ಹಾಯ್ದು ಹೋಗಿರುವ ಆರ್‌ಎಚ್ಎಲ್ಡಿ ಕಾಲುವೆಯಲ್ಲಿ ಸಾಕಷ್ಟು ಹೂಳು ತುಂಬಿದೆ. ಕೇರೂರ, ಅರಬ್ಯಾನವಾಡಿ, ನನದಿ ಮುಂತಾದ ಕಡೆಗಳಲ್ಲಿ ಕಾಲುವೆಯಲ್ಲಿ ಜಾಲಿ ಮುಳ್ಳಿನ ಗಿಡ, ಕಸಕಡ್ಡಿ ಬೆಳೆದಿವೆ. ಕಾಲುವೆ ಗೋಡೆಗಳು ಕುಸಿದಿವೆ. ಕೆಲ ಭಾಗದಲ್ಲಿ ಕಾಲುವೆ ನಡುವೆಯೇ ಮಣ್ಣಿನ ದಿಬ್ಬ ಕುಸಿದಿದೆ. ಹೀಗಾಗಿ ಕೊನೆ ಹಳ್ಳಿಗಳಿಗೆ ನೀರು ಹೋಗುತ್ತಿಲ್ಲ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎನ್ನುತ್ತಾರೆ ರೈತರು.

Advertisement

ನೀರು ಹರಿದರೆ ಬದುಕು ಬಂಗಾರ: ರಾಯಬಾಗ ಉನ್ನತ ಮಟ್ಟದ ಕಾಲುವೆ ವ್ಯಾಪ್ತಿಯ ರೈತರು ಹೆಚ್ಚಾಗಿ ಈ ಕಾಲುವೆ ನೀರನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಅದರೆ ಸಮರ್ಪಕ ನೀರು ಹರಿಯದೇ ಇರುವ ಕಾರಣ ರೈತರ ಬದುಕು ಮೂರಾಬಟ್ಟೆಯಾಗಿದೆ. ಹಿಂಗಾರು ಅಥವಾ ಮುಂಗಾರಿನಲ್ಲಿ ಒಂದು ಬಾರಿ ಈ ಕಾಲುವೆಗೆ ನೀರು ಹರಿದರೇ ಸಾಕು ರೈತರ ಬಾಳು ಬಂಗಾರವಾಗುತ್ತಿದೆ. ವರ್ಷದಲ್ಲಿ 20 ದಿನ ಈ ಕಾಲುವೆಯಲ್ಲಿ ನೀರು ಹರಿದರೆ ಬಾವಿ, ಕೊಳವೆಬಾವಿಯಲ್ಲಿ ಅಂತರ್ಜಲ ಹೆಚ್ಚಳವಾಗುತ್ತದೆ. ಹೀಗಾಗಿ ಭೂಮಿಯಲ್ಲಿ ಬಿತ್ತಿದ ಒಂದು ಬೆಳೆಯಾದರೂ ಕೈಗೆ ಬರುತ್ತದೆ ಎಂಬ ಆಶಾಭಾವ ಹೆಚ್ಚಿದೆ ಎನ್ನುತ್ತಾರೆ ಕೇರೂರ ಗ್ರಾಮದ ರೈತ ಸಿದ್ದಗೌಡ ಪಾಟೀಲ.

ರಾಯಬಾಗ ಉನ್ನತ ಮಟ್ಟದ ಕಾಲುವೆಯಿಂದ ಸಮರ್ಪಕ ನೀರು ಹರಿಸಿದರೆ ನಮಗೆ ಯಾವುದೇ ಪರ್ಯಾಯ ಯೋಜನೆ ಬೇಕಿಲ್ಲ. ಪ್ರತಿ ವರ್ಷ ಅಧಿಕಾರಿಗಳು ಕಾಲುವೆ ದುರಸ್ತಿಗೆ ಕೋಟ್ಯಂತರ ಹಣ ವ್ಯಯ ಮಾಡುತ್ತಾರೆ. ಆದರೂ ಒಂದು ಹನಿ ನೀರು ಹರಿಯುತ್ತಿಲ್ಲ. ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಹರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. •ದುಂಡಪ್ಪ ಹಿಂಗ್ಲಜ,

ಅರಬ್ಯಾನವಾಡಿ ರೈತ ಹಿಂಗಾರಿನಲ್ಲಿ 20 ದಿನ ಈ ಕಾಲುವೆಗೆ ನೀರು ಹರಿಸುವ ಅವಕಾಶ ಇದ್ದು, ಆದರೆ ಸಮರ್ಪಕ ಮಳೆ ಆಗದ ಕಾರಣ ಕಾಲುವೆಗೆ ನೀರು ಹೋಗುತ್ತಿಲ್ಲ. ಚಿಕ್ಕೋಡಿ ತಾಲೂಕಿನ ಕೊನೆ ಹಳ್ಳಿ ರೈತರಿಗೆ ನೀರು ತಲುಪಿಸಲು ಸತತ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ. ಪ್ರಸಕ್ತ ವರ್ಷ ರಾಯಬಾಗ ಕೆರೆ ತುಂಬಿಸಿ ನೀರು ಹರಿಸುವ ಪ್ರಯತ್ನ ನಡೆಸಲಾಗಿದೆ. ಕಾಲುವೆ ನಿರ್ವಹಣೆ ಹಾಗೂ ದುರಸ್ತಿಗೆ ಅನುದಾನ ಬಂದರೂ ಅದು ಕೆಲ ನಿರ್ವಹಣೆ ಕಾರ್ಯಕ್ಕೆ ಖರ್ಚಾಗಿದೆ. •ಎಚ್.ಎಲ್. ಪೂಜೇರಿ, ಸಹಾಯಕ ಕಾರ್ಯಕಾರಿ ಅಭಿಯಂತ ನೀರಾವರಿ ಇಲಾಖೆ ರಾಯಬಾಗ

 

•ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next