ನಾಯಕನಹಟ್ಟಿ: ಮೊಳಕಾಲ್ಮೂರು ಕ್ಷೇತ್ರದ ಪ್ರತಿ ಗ್ರಾಪಂಗೆ ಒಂದರಂತೆ ನೀರಿನ ಟ್ಯಾಂಕರ್ ಒದಗಿಸಲಾಗುವುದು ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು. ಸಮೀಪದ ಮಲ್ಲೂರಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಮೊಳಕಾಲ್ಮೂರು ಕ್ಷೇತ್ರದಲ್ಲಿ ಬರದ ಪರಿಸ್ಥಿತಿ ಇದೆ. ಎಲ್ಲ ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಇದರಿಂದ ಕುಡಿಯುವ ನೀರಿಗಾಗಿ ಜನರು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರು.
ತುಂಗಭದ್ರಾ ಹಿನ್ನೀರು ಯೋಜನೆ ಇದೀಗ ಟೆಂಡರ್ ಹಂತದಲ್ಲಿದ್ದು, ಈ ಯೋಜನೆ ಜಾರಿಯಾಗಲು 3-4 ವರ್ಷಗಳು ಬೇಕು. ಅಲ್ಲಿಯವರೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. 45ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಅವುಗಳಲ್ಲಿ ಹತ್ತರಲ್ಲಿ ಮಾತ್ರ ನೀರು ದೊರೆತಿದೆ. ಶಾಶ್ವತ ನೀರಿನ ಸಮಸ್ಯೆ ಬಗೆಹರಿಯುವವರೆಗೆ ಕ್ಷೇತ್ರದ 36 ಗ್ರಾಪಂಗಳಿಗೆ ಪ್ರತಿ ಗ್ರಾಪಂ ಒಂದರಂತೆ 36 ಟ್ಯಾಂಕರ್‌ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಮೊಳಕಾಲ್ಮೂರು ಕ್ಷೇತ್ರದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಸಮಸ್ಯೆ ಉಂಟಾಗುತ್ತಿದೆ. ಕ್ಷೇತ್ರ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಕ್ಷೇತ್ರದಲ್ಲಿ ಹಂಚಿ ಹೋಗಿದೆ. ಹೀಗಾಗಿ ಎರಡು ತಾಲೂಕುಗಳ ಅಧಿಕಾರಿಗಳು ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ.
ನಾಯಕನಹಟ್ಟಿ, ತಳಕು ಹೋಬಳಿಗಳು ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿದ್ದರೆ, ಮೊಳಕಾಲ್ಮೂರು ಹಾಗೂ ರಾಂಪುರ ಗ್ರಾಮಗಳು ಮೊಳಕಾಲ್ಮೂರು ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಗ್ರಾಮಸಂಪರ್ಕ ಸಭೆಗಳಲ್ಲಿ ಎರಡು ತಾಲೂಕುಗಳ ಅಧಿಕಾರಿಗಳು ಹಾಜರಿರುವಂತೆ ಸೂಚಿಸಿಲಾಗಿದೆ. ಚಳ್ಳಕೆರೆಯ ಎಲ್ಲ ಅಕಾರಿಗಳು ಎರಡು ಹೋಬಳಿಗಳ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ರಾಜಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಕಾರ್ಯದರ್ಶಿ ಪಿ. ಶಿವಣ್ಣ, ತಾಪಂ ಸದಸ್ಯರಾದ ರತ್ನಮ್ಮ, ಮಲ್ಲಮ್ಮ, ಉಪ ತಹಶೀಲ್ದಾರ್ ಜಗದೀಶ್, ಪಿಡಿಒ ಯರ್ರಿಸ್ವಾಮಿ, ವೆಂಕಟೇಶ್, ಮಲ್ಲಿಕಾರ್ಜುನ್, ಪಿ.ಬಿ. ತಿಪ್ಪೇಸ್ವಾಮಿ, ಸುರೇಶ್ ಮತ್ತಿತರರು ಇದ್ದರು.
ಚಿತ್ರದುರ್ಗ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾ ಧಿಸಿದೆ. ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರೂ ಅಧಿಕಾರ ಪಡೆಯಲು ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಅಧಿಕಾರ ದೊರೆಯುತ್ತದೆ. ಅಲ್ಲದೆ ನನಗೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉತ್ತಮ ಸ್ಥಾನ ದೊರೆಯುವ ನಿರೀಕ್ಷೆಯಿದೆ. ಆಗ ಮೊಳಕಾಲ್ಮೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುತ್ತೇನೆ.
ಬಿ. ಶ್ರೀರಾಮುಲು, ಮೊಳಕಾಲ್ಮೂರು ಶಾಸಕ.