Advertisement
ಸುಳ್ಯ ತಾಲೂಕಿನ ಪಂಜ ಗ್ರಾ.ಪಂ. ವ್ಯಾಪ್ತಿಯ ಐವತ್ತೂಕ್ಲು ಗ್ರಾಮದ ಚಿಂಗಾಣಿ ಗುಡ್ಡೆಯಲ್ಲಿ ಜಿ.ಪಂ. ಅನುದಾನದಲ್ಲಿ 7 ವರ್ಷಗಳ ಹಿಂದೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬೃಹತ್ ಟ್ಯಾಂಕ್ ಹಾಗೂ ಶುದ್ಧೀಕರಣ ಟ್ಯಾಂಕ್ ನಿರ್ಮಿಸಲಾಯಿತು. ಆದರೆ ಇದುವರೆಗೆ ಈ ಟ್ಯಾಂಕ್‌ಗೆ ಒಂದು ತೊಟ್ಟು ನೀರು ಬಿದ್ದಿಲ್ಲ ಎಂಬುವುದೇ ದುರಂತದ ಸಂಗತಿ. ನಿರ್ಮಾಣದ ಉದ್ದೇಶವೇ ವಿಫಲವಾದಂತಿದೆ ಎಂಬ ಆರೋಪ ಕೇಳಿ ಬಂದಿದೆ.
Related Articles
Advertisement
ನೀರು ಬರಲೇ ಇಲ್ಲ! :
ಅಂದುಕೊಂಡಂತೆ ಆಗಿದ್ದರೆ ಟ್ಯಾಂಕ್‌ಗೆ ನೀರು ಸರಬರಾಜಾಗಿ ಗ್ರಾಮಕ್ಕೆ ನೀರು ಪೊರೈಕೆಗೊಳ್ಳಬೇಕಿತ್ತು. ದುರಂತ ಎಂಬಂತೆ ಇಲ್ಲಿಗೆ ಇಂದಿಗೂ ನೀರು ಸರಬರಾಜು ಆಗಲೇ ಇಲ್ಲ. ಸರಕಾರದ ಅನುದಾನ ಬಳಸಿಕೊಂಡು ಕಾಮಗಾರಿ ನಿರ್ವಹಿಸಿ, ಉಪಯೋಗಕ್ಕೆ ಬಾರದೇ ಇದು ಅನಾಥ ಸ್ಥಿತಿಯಲ್ಲಿದೆ. ಪರಿಣಾಮ 7 ವರ್ಷಗಳ ಹಿಂದೆ ನಡೆಸಿದ ನೀರಿನ ಟ್ಯಾಂಕ್ ಪಾಳುಬಿದ್ದಂತಾಗಿದ್ದು, ಈಗ ಶಿಥಿಲಗೊಂಡಿದೆ ಎನ್ನಲಾಗಿದೆ. ಟ್ಯಾಂಕ್ ನಿರ್ಮಿಸಲಾದ ಪ್ರದೇಶ ಸದ್ಯ ಗಿಡ, ಪೊದೆಗಳಿಂದ ಆವೃತಗೊಂಡಿದೆ.
ಅವೈಜ್ಞಾನಿಕ ಟ್ಯಾಂಕ್? :
ಟ್ಯಾಂಕ್ ಅವೈಜ್ಞಾನಿಕ ಎಂಬ ಆರೋಪವೂ ವ್ಯಕ್ತವಾಗಿದೆ. ಎತ್ತರ ಪ್ರದೇಶವಾಗಿರುವುದರಿಂದ ಇಲ್ಲಿಗೆ ನೀರು ಸರಬರಾಜು ಆಗುತ್ತಿಲ್ಲ. ಪಂಪ್ ಸಾಮಾರ್ಥ್ಯ ಸಾಕಾಗುತ್ತಿಲ್ಲ ಎನ್ನಲಾಗಿದೆ. ಆದರೆ ಸರಕಾರ ಮಟ್ಟದಲ್ಲಿ ನಡೆಸುವ ಕಾಮಗಾರಿಯ ಕ್ರಿಯಾ ಯೋಜನೆ ಸಂದರ್ಭದಲ್ಲಿ ಈ ಬಗ್ಗೆ ಪರಿಶೀಲನೆ ಅಥವಾ ಯಾವುದೇ ಮುಂದಾಲೋಚನೆ ನಡೆಸಿಲ್ಲವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಕಾಮಗಾರಿ ಕಳಪೆ ಯಾಗಿರುವ ಸಾಧ್ಯತೆಯನ್ನೂ ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಚಿಂಗಾಣಿಗುಡ್ಡೆ ಟ್ಯಾಂಕ್‌ಗೆ ನೀರು ಪೂರೈಸಲು ಪೈಪ್‌ಲೈನ್ ಹಾಕಲಾಗಿತ್ತು. ಬಳಿಕ ನಡೆದ ರಸ್ತೆ ಕಾಮಗಾರಿಯಿಂದ ಪೈಪ್‌ಲೈನ್‌ಗಳು ಹಾನಿಗೊಂಡಿತ್ತು. ದುರಸ್ತಿಗೆ ಬೇರೆ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ಅನುದಾನ ಬರಲಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇಲ್ಲಿಗೆ ಬಂದಲ್ಲಿ ಈ ಟ್ಯಾಂಕ್ ಅದಕ್ಕೆ ಬಳಕೆಯಾಗಲಿದೆ. -ಎಸ್.ಎಸ್.ಹುಕ್ಕೇರಿ , ಜೂನಿಯರ್ ಎಂಜಿಯರ್, ಜಿ.ಪಂ.
ಗ್ರಾಮಕ್ಕೆ ನೀರು ಪೂರೈಸಲು ನಿರ್ಮಿಸಲಾದ ನೀರಿನ ಟ್ಯಾಂಕ್ 7 ವರ್ಷವಾದರೂ ಜನರ ಪ್ರಯೋಜನಕ್ಕೆ ಬಂದಿಲ್ಲ ಎಂಬುದೇ ನೋವಿನ ಸಂಗತಿ. ಟ್ಯಾಂಕ್‌ನ್ನು ಕೂಡಲೇ ಜನರಿಗೆ ಅನುಕೂಲವಾಗುವಂತೆ ವ್ಯವಸ್ಥಿತಗೊಳಿಸಿ, ನೀರು ಸರಬರಾಜಿಗೆ ಇಲಾಖೆ ಮುಂದಾಗಬೇಕು. ಇಲ್ಲವೇ ಹೋರಾಟದ ದಾರಿ ಹಿಡಿಯಲಾಗುವುದು. -ಜಿನ್ನಪ್ಪ ಗೌಡ ಅಲ್ಪೆ, ಸ್ಥಳೀಯರು