ಶಿರ್ವ: ಬಂಟಕಲ್ಲು ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಸ್ವಯಂಚಾಲಿತ ನೀರಿನ ಟ್ಯಾಂಕ್ ಸ್ವಚ್ಛ ಗೊಳಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.
ಯಾಂತ್ರಿಕ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಶ್ರೀನಾಥ್‌ಆರ್.ಎಸ್., ನಿಖೀಲ್ ಎಸ್.ಎಸ್., ವಿಜಯ ಕುಮಾರ್ ದೊಡ್ಡಮನಿ ಮತ್ತು ಚಂದನ್ ಎಂ.ಡಿ. ಅವರು ವಿಭಾಗದ ಮುಖ್ಯಸ್ಥ ಡಾ| ಸುದರ್ಶನ್ ರಾವ್ ಕೆ. ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.
ಸಾಮಾನ್ಯವಾಗಿ ಮನೆ, ಹೊಟೇಲ್ ಮತ್ತು ಆಸ್ಪತ್ರೆ ಮುಂತಾದ ಕಟ್ಟಡಗಳ ಮೇಲ್ಛಾವಣಿಗಳಲ್ಲಿ ಇರಿಸಲಾದ ನೀರಿನ ಟ್ಯಾಂಕ್‌ಗಳನ್ನು ಕಾರ್ಮಿಕರ ಸಹಾಯದಿಂದ ಸ್ವಚ್ಛ ಗೊಳಿಸಲಾಗುತ್ತದೆ. ಇದರಿಂದ ಟ್ಯಾಂಕ್‌ಗಳನ್ನು ಸರಿಯಾಗಿ ಸ್ವಚ್ಛ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಕೆಲವೊಮ್ಮೆ ಅವಘಢಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಪ್ರಸ್ತುತ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಬಳಸಿ ನೀರಿನ ಟ್ಯಾಂಕ್‌ಗಳನ್ನು ಸಮರ್ಪಕ ರೀತಿಯಲ್ಲಿ ಹೆಚ್ಚು ಶ್ರಮವಿಲ್ಲದೆ ಸ್ವಚ್ಛ ಗೊಳಿಸಲು ಸಾಧ್ಯ.
ಈ ಉಪಕರಣವನ್ನು ಸಿಲಿಂಡರ್ ಆಕಾರದ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ವಿನ್ಯಾಸ ಮಾಡಲಾಗಿದೆ. ಇದು ನಾಲ್ಕು ಲಿಂಕ್‌ಗಳ ಮೆಕ್ಯಾನಿಸಂ ಹೊಂದಿದ್ದು, ಟ್ಯಾಂಕ್‌ನ ತೂತಿನ ಮುಖಾಂತರ ಟ್ಯಾಂಕ್‌ನ ಒಳಾಂಗಣಕ್ಕೆ ಸೇರಿಸಬಹುದಾಗಿದೆ. ಈ ಉಪಕರಣವು ಮೋಟಾರು ಚಾಲಿತವಾಗಿದ್ದು, ನಾಲ್ಕು ಲಿಂಕ್‌ಗಳ ಮೆಕ್ಯಾನಿಸಂಗೆ ಅಳವಡಿಸಲಾದ ತಂತಿ ಬ್ರಷ್ ಮುಖಾಂತರ ಉಪಕರಣವು ಟ್ಯಾಂಕಿನ ಒಳ ಮೇಲ್ಮೈಯನ್ನು ಉತ್ತಮ ರೀತಿಯಲ್ಲಿ ಸ್ವತ್ಛಗೊಳಿಸುತ್ತದೆ.
ಕಾಲೇಜಿನ ಪ್ರಾಚಾರ್ಯ ಡಾ|ತಿರುಮಲೇಶ್ವರ ಭಟ್, ವಿಭಾಗದ ಮುಖ್ಯಸ್ಥ ಡಾ|ಸುದರ್ಶನ್‌ರಾವ್. ಕೆ, ವಿಭಾಗದ ಪ್ರಾಜೆಕ್ಟ್ ವರ್ಕ್ ಸಂಯೋಜಕ ಡಾ| ಎಚ್. ಉದಯ ಪ್ರಸನ್ನ, ಗಣೇಶ್ ಕಾಳಗಿ ಉಪಸ್ಥಿತರಿದ್ದರು.