ಚಿಕ್ಕೋಡಿ: ನಗರದಿಂದ ಒಂದು ಕಿಮೀ ಅಂತರದಲ್ಲಿರುವ ಬಾನಂತಿಕೋಡಿ ರಸ್ತೆಗೆ ಹೊಂದಿಕೊಂಡು ಕೆಎಲ್ಇ ಸಂಸ್ಥೆ ನಿರ್ಮಿಸಿರುವ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ ಇದೀಗ ಪರಿಸರ ಸ್ನೇಹಿಯಾಗಿ ರೂಪುಗೊಂಡಿದೆ.
ಕಾಲೇಜಿನ ಆವರಣದಲ್ಲಿ ಕಾಲಿಡುತ್ತಿದ್ದಂತೆಯೇ ಬಿಸಿಲಿನಿಂದ ಬಳಲಿ ಬರುವವರಿಗೆ ಹಸಿರಿನಿಂದ ಕಂಗೊಳಿಸುವ ಉದ್ಯಾನ ತಂಪಿನ ಸಿಂಚನವನ್ನುಂಟು ಮಾಡುತ್ತದೆ. ಬಾಯಾರಿ ಬರುವ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆಯ ನೆರಳು ಇಲ್ಲಿ ಕಂಡು ಬರುತ್ತದೆ.
ಚಿಕ್ಕೋಡಿಯ ಕೆ.ಎಲ್.ಇ. ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ 19 ಎಕರೆ ಇದ್ದು, ಇಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಕಾಲೇಜು ಆವರಣದ ಉದ್ಯಾನದಲ್ಲಿ ವಿವಿಧ ಬಗೆಯ ಗಿಡಗಳು ಬೆಳೆದು ನಿಂತಿದ್ದು, ಕೆಲವು ಕಡೆಗಳಲ್ಲಿ ಇನ್ನೂ ಸಸಿಗಳ ಪೋಷಣೆ ಕಾರ್ಯ ಪ್ರಗತಿಯಲ್ಲಿದೆ. ಉದ್ಯಾನದಲ್ಲಿ ಅಚ್ಚುಕಟ್ಟಾದ ಆಸನದ ವ್ಯವಸ್ಥೆ ಕಲ್ಪಿಸಿದ್ದು, ವಿದ್ಯಾರ್ಥಿಗಳಿಗೆ ಹಸಿರಿನ ತಪ್ಪಲಿನಲ್ಲಿ ಓದಿಕೊಳ್ಳಲೂ ವ್ಯವಸ್ಥೆ ಕಲ್ಪಿಸಲಾಗಿದೆ.
ಗಿಡಗಳಿಗೆ ನೀರಿನ ದಾನಿಗಳನ್ನು ತೂಗು ಬೀಡಲಾಗಿದ್ದು, ಗುಬ್ಬಚ್ಚಿ, ಪಾರಿವಾಳ, ಗಿಳಿ ಹಾಗೂ ಇನ್ನಿತರ ಪಕ್ಷಿಗಳು ದಾಹ ತೀರಿಸಿಕೊಳ್ಳುತ್ತಿವೆ. ವಿದ್ಯಾರ್ಥಿಗಳು ನೀರು ದಾನಿಗಳಲ್ಲಿ ನಿತ್ಯವೂ ನೀರು ಹಾಕಿ ಪರಿಸರ ಪ್ರೀತಿ ಮೆರೆಯುತ್ತಾರೆ. ಅಂತೆಯೇ ಉದ್ಯಾನದಲ್ಲಿ ಸದಾ ಪಕ್ಷಿಗಳ ಕಲರವ ಕೇಳಿ ಬರುತ್ತದೆ.
ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿರುವುದಷ್ಟೇ ಇಲ್ಲಿ ವಿಸೇಷ ಕಾರ್ಯವಲ್ಲ. ಕಾಲೇಜು ಆವರಣದಲ್ಲಿ ಚರಂಡಿ ಶುದ್ಧೀಕರಣ ಘಟಕದಲ್ಲಿ ಶುದ್ಧಗೊಳಿಸಿ ಮರು ಬಳಕೆ ಮಾಡುತ್ತಿರುವುದು ವಿಶೇಷ.
ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ಬಾಯಾರಿ ಬರುವ ಪಕ್ಷಿಗಳಿಗೆ ಆಸರೆಯಾಗಿದೆ. ಕಳೆದ ಎರಡು ತಿಂಗಳಿನಿಂದ ಕೃಷ್ಣಾ ನದಿ ಬತ್ತಿ ಹೋಗಿದ್ದು, ನಮ್ಮ ಭಾಗದಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಆದರೂ ನಮ್ಮ ಕಾಲೇಜಿನಲ್ಲಿ ಇಂದು ಉದ್ಯಾನ ಹಚ್ಚ ಹಸುರಾಗಿದೆ. ನಮ್ಮಲ್ಲಿ ಚರಂಡಿ ನೀರನ್ನು ಹೊರಬಿಡದೇ ಚರಂಡಿ ಸಂಸ್ಕರಣ ಘಟಕದಲ್ಲಿ ಶುದ್ಧೀಕರಿಸಿ ಉದ್ಯಾನದಲ್ಲಿ ಮರುಬಳಕೆ ಮಾಡಲಾಗುತ್ತದೆ. ನಾವು ಸಹಿತ ನೀರನ್ನು ಸರಿಯಾಗಿ ಬಳಸಿ, ಗಿಡಮರಗಳನ್ನು ರಕ್ಷಿಸಬೇಕೆಂದು ನಮ್ಮ ಮಹಾವಿದ್ಯಾಲಯ ಕಲಿಸಿ ಕೊಟ್ಟಿದೆ ಎನ್ನುತ್ತಾರೆ ವಿದ್ಯಾರ್ಥಿನಿ ಅಕ್ಷತಾ ಹೊನಕಡಂಬಿ.