Advertisement

ಶ್ರೀಕೃಷ್ಣ ಮಠದ ಸಾವಿರಾರು ಯಾತ್ರಿಕರಿಗೆ ನೀರು ಪೂರೈಕೆ

10:52 AM Jun 02, 2019 | sudhir |

ಉಡುಪಿ: ಶ್ರೀಕೃಷ್ಣಮಠಕ್ಕೆ ವರ್ಷಪೂರ್ತಿ ಬರುವ ಯಾತ್ರಿಕರ ಅಗತ್ಯಗಳನ್ನು ಪೂರೈಸುತ್ತಿರುವುದು ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನ. ಇಲ್ಲಿಗೆ ಬರುವ ಬಹು ಯಾತ್ರಿಕರು ಲಾಡ್ಜ್, ಛತ್ರಗಳಲ್ಲಿ ಉಳಿದುಕೊಳ್ಳುವುದಿಲ್ಲ. ಅಂದರೆ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಬರುವ ಸಾಮಾನ್ಯ ಜನರು. ಇವರಿಗೆ ಸಮಯವೂ ಇಲ್ಲ. ಮಧ್ಯರಾತ್ರಿಯಲ್ಲಿ ಬಸ್ಸು, ಮಿನಿ ಬಸ್ಸುಗಳಲ್ಲಿ ಬರುವವರೂ ಇದ್ದಾರೆ. ಇವರಿಗೆ ಮುಖ್ಯವಾಗಿ ಬೇಕಾದ ಸ್ನಾನ, ಶೌಚಾಲಯ ಅಗತ್ಯವನ್ನು ಈಗಲೂ ಶ್ರೀಕೃಷ್ಣಮಠದ ವಾಹನ ಪಾರ್ಕಿಂಗ್‌ ಪ್ರದೇಶದಲ್ಲಿರುವ ಸಾಮುದಾಯಿಕ ಶೌಚಾಲಯದಲ್ಲಿ ದಿನದ 24 ಗಂಟೆಯೂ ಉಚಿತವಾಗಿ ಪೂರೈಸಲಾಗುತ್ತಿದೆ.

Advertisement

ಯಾತ್ರಿಕರ ನಿತ್ಯದ ಸಂಖ್ಯೆ 10,000ರಿಂದ 15,000. ಶನಿವಾರ, ರವಿವಾರ ಈ ಸಂಖ್ಯೆ ಹೆಚ್ಚಿಗೆ ಇರುತ್ತದೆ.

ಸುಮಾರು ಒಂದು ತಿಂಗಳ ಹಿಂದಿನವರೆಗೆ ಪ್ರತಿಷ್ಠಾನದ ಆವರಣದಲ್ಲಿರುವ ಬಾವಿ, ನಗರಸಭೆಯ ನೀರಿನಿಂದ ನಿರ್ವಹಿಸಲಾಗುತ್ತಿತ್ತು. ಅನಂತರ 6,000 ಲೀ. ಸಾಮರ್ಥ್ಯದ ಐದಾರು ಟ್ಯಾಂಕರ್‌ ಟ್ರಿಪ್‌ಗ್ಳಲ್ಲಿ ತರಿಸಲಾಗುತ್ತಿದೆ. ಮೊದ ಮೊದಲು ಆಸುಪಾಸಿನ ಬಾವಿಗಳಿಂದ ನೀರು ತರಿಸುತ್ತಿದ್ದರೆ ಅದು ಖಾಲಿಯಾದ ಬಳಿಕ 12 ಕಿ.ಮೀ. ದೂರದ ಮಣಿಪುರ ಹೊಳೆಯಿಂದ ನೀರು ತರಿಸಲಾಗುತ್ತಿದೆ.

ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ಉಷಾ ಕೋಟ್ಯಾನ್‌, ಗ್ರಾ.ಪಂ. ಸದಸ್ಯರ ಸಹಕಾರದಿಂದ ನೀರನ್ನು ತರಿಸಲಾಗುತ್ತಿದೆ. ಯಾತ್ರೀ ನಿವಾಸದಲ್ಲಿ ನೀರಿನ ನಿರ್ವಹಣೆಯ ಮುತುವರ್ಜಿಯನ್ನು ಸಾಮಾಜಿಕ ಕಾರ್ಯಕರ್ತ ಯೋಗೀಶ್‌ ಶೇಟ್ ವಹಿಸುತ್ತಿದ್ದಾರೆ.

‘ಶ್ರೀಕೃಷ್ಣಮಠಕ್ಕೆ ಬರುವ ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸುವುದೇ ನಮ್ಮ ಮೊದಲ ಆದ್ಯತೆ’ ಎನ್ನುತ್ತಾರೆ ಯೋಗೀಶ್‌ ಶೇಟ್.

Advertisement

ನೀರಿನ ಮೂಲವನ್ನು ಪ್ರತಿಷ್ಠಾನದವರೇ ಹುಡುಕಿ ಕೊಡುವುದರಿಂದ ಟ್ಯಾಂಕರ್‌ನವರು ರಿಯಾಯಿತಿ ದರದಲ್ಲಿ ನೀರುತಂದು ಹಾಕುತ್ತಿದ್ದಾರೆ. ಒಂದು ಟ್ಯಾಂಕರ್‌ ಸಾಗಾಟಕ್ಕೆ 1,000 ರೂ. ತೆಗೆದು ಕೊಳ್ಳುತ್ತಾರೆ.

ವಿದ್ಯುತ್‌ ಪೂರೈಕೆ, ಸಿಬಂದಿ ವೆಚ್ಚ ಇತ್ಯಾದಿಗಳಿಗೆಂದು ಈ ಸಾಮುದಾಯಿಕ ಶೌಚಾಲಯದ ನಿರ್ವಹಣೆಗೇ ತಿಂಗಳಿಗೆ ಸುಮಾರು 50,000 ರೂ. ಖರ್ಚು ತಗಲುತ್ತದೆ. ಇದು ನೀರಿನ ಖರ್ಚು ಹೊರತುಪಡಿಸಿ. ಶುಚಿತ್ವ ಕಾಪಾಡುವುದೇ ಮೊದಲಾದ ಕೆಲಸಗಳನ್ನು ಐದಾರು ಮಂದಿ ಸಿಬಂದಿಗಳು ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next