Advertisement
ಸದ್ಯ ಮಂಗಳೂರಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಇಲ್ಲ; ತುಂಬೆ ಡ್ಯಾಂನಲ್ಲಿ ಸಾಕಷ್ಟು ನೀರಿನ ಲಭ್ಯತೆಯಿದ್ದು, ಒಳಹರಿವೂ ಉತ್ತಮವಾಗಿದೆ. ಆದರೆ, ಕುಡಿಯುವ ನೀರಿನ ಬಗ್ಗೆ ನಗರದಲ್ಲಿ ಜಾಗೃತಿ ಮನೋಭಾವ ಈಗಿನಿಂದಲೇ ಮೂಡದಿದ್ದರೆ ಕಳೆದ ವರ್ಷದಂತೆಯೇ ಈ ಬಾರಿಯೂ ನೀರಿನ ಹಾಹಾಕಾರ ಎದುರಾಗಲೂಬಹುದು.
Related Articles
Advertisement
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ (2019)ಎ.18ರ ಸಂಜೆ 6 ಗಂಟೆಯಿಂದಲೇ ನೀರು ರೇಷನಿಂಗ್ ಆರಂಭವಾಗಿತ್ತು. 2-3 ದಿನಕ್ಕೊಮ್ಮೆ ನೀರು ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಬಹುತೇಕ ಭಾಗಗಳಿಗೆ ಒಂದು ವಾರವಾದರೂ ನೀರು ಹೋಗದೆ ಸಮಸ್ಯೆ ಅನುಭವಿಸಿದ್ದೂ ಇದೆ. ಸುಮಾರು 2 ತಿಂಗಳು ನಗರದಲ್ಲಿ ಇಂತಹ ಪರಿಸ್ಥಿತಿ ಉಂಟಾಗಿತ್ತು ಎಂಬುದನ್ನು ನೆನಪು ಮಾಡಬಹುದು.
ಮಂಗಳೂರಿಗೆ ಸಮರ್ಪಕ ನೀರು ಸರಬರಾಜು ಮಾಡುವಲ್ಲಿ ಪಾಲಿಕೆ ಎಷ್ಟು ಪ್ರಯತ್ನಿಸಿದರೂ, ಪ್ರತೀದಿನ 20 ಎಂ.ಎಲ್.ಡಿ.(ಮಿಲಿಯನ್ ಲೀಟರ್ )ನೀರು ಸೋರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಇನ್ನೂ ಸಾಧ್ಯವಾಗಿಲ್ಲ. ಪಾಲಿಕೆಯೇ ತಿಳಿಸಿರುವಂತೆ, ತುಂಬೆಯಿಂದ ಪ್ರತೀದಿನ 160 ಎಂ.ಎಲ್.ಡಿ. ನೀರು ಪಂಪಿಂಗ್ ಮಾಡಲಾಗುತ್ತಿದೆ. ಇದರಲ್ಲಿ 140 ಎಂ.ಎಲ್.ಡಿಯಷ್ಟು ಮಾತ್ರ ನೀರು ಬಳಕೆಯಾಗುತ್ತಿದೆ. ಉಳಿದ 20 ಎಂ.ಎಲ್.ಡಿ ನೀರು ಸೋರಿಕೆಯಾಗುತ್ತಿದೆ. ತುಂಬೆ ಪಂಪ್‌ಹೌಸ್‌ನಿಂದ ನೀರು ಪಂಪ್ ಮಾಡಿ ನಗರದ ಪಂಪ್‌ಹೌಸ್‌ಗಳಿಗೆ ಪೂರೈಕೆ ಮಾಡುವ ಹಂತದಲ್ಲಿ ಭಾರೀ ನೀರು ಸೋರಿಕೆಯಾಗುತ್ತಿದೆ. ಕಣ್ಣೂರು, ಫರಂಗಿಪೇಟೆ, ಅಡ್ಯಾರು ಮುಂತಾದ ವ್ಯಾಪ್ತಿಗಳಿಗೆ ಈ ನೀರು ಸರಬರಾಜಾಗುತ್ತದೆ. ವಿಶೇಷವೆಂದರೆ ಇದಕ್ಕೆ ಯಾವುದೇ ಶುಲ್ಕ ವಸೂಲಿ ಮಾಡಲಾಗುತ್ತಿಲ್ಲ. ಇದರ ವಿರುದ್ಧ ಪಾಲಿಕೆ ಕಳೆದ ವರ್ಷ ಆಂದೋಲನ ರೂಪಿಸಿ ಸೋರಿಕೆ ತಡೆಗಟ್ಟಲು ಪ್ರಯತ್ನಿಸಿದರೂ ಅದು ಯಾವುದೇ ಫಲ ನೀಡಿಲ್ಲ. ಹೀಗಾಗಿ ಸೋರಿಕೆಗೆ ಪರಿಹಾರ ದೊರೆತು ಆ ಭಾಗದವರಿಗೆ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಿದರೆ ಮಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಕೊಂಚ ಬ್ರೇಕ್ ಹಾಕಬಹುದು.
ನೀರಿನ ಬಿಲ್ ಸರಿಪಡಿಸಿಸದ್ಯ ಕೆಲವರಿಗೆ ಬಂದಿರುವ ನೀರಿನ ಬಿಲ್‌ಗಳನ್ನು ಕಂಡು ಮನೆ ಮಂದಿ ಹೆದರುವ ಪರಿಸ್ಥಿಯಿದೆ. ನೂರು-ಇನ್ನೂರು ಬರುವ ನೀರಿನ ಬಿಲ್ ಕೆಲವರೆಗೆ 20,000 ರೂ. ಬಂದಿದ್ದೂ ಇದೆ. ಇನ್ನು ಕೆಲವೆಡೆಗೆ ಇನ್ನೂ ಕೂಡ ನೀರಿನ ಬಿಲ್ ಬರಲೇ ಇಲ್ಲ. ಅವರಿಗೆ ಅದೆಷ್ಟು ಸಾವಿರ ರೂ. ಬಿಲ್ ಬರಲಿದೆಯೋ? ಎಂಬ ಭಯದಲ್ಲಿದ್ದಾರೆ. ಇದರ ಜತೆಗೆ, ನಗರದ ಮುಖ್ಯ ನೆಲೆಯಲ್ಲಿ ಗುರುತಿಸಿದ ಸಂಸ್ಥೆಗಳು ಕೋಟಿಗಟ್ಟಲೆ ನೀರಿನ ಬಿಲ್ ಬಾಕಿ ಉಳಿಸಿಕೊಂಡಿದೆ. ನೀರಿನ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ ಮಾಡಲಾಗುವುದು ಎಂದು ಎಷ್ಟು ಬಾರಿ ಪಾಲಿಕೆ ಎಚ್ಚರಿಸಿದರೂ ಬಾಕಿ ಮೊತ್ತ ಇನ್ನೂ ಪಾವತಿಯಾಗಿಲ್ಲ. ನೀರಿನ ಸಂಕಷ್ಟ ಎದುರಾದಾಗ ಮಾತ್ರ ಕೆರೆ, ಬಾವಿ, ಬೋರ್‌ವೆಲ್ ನೆನಪು!
ನೇತ್ರಾವತಿಯ ಒಡಲು ಬರಿದಾಗುತ್ತಿರುವಂತೆ ಪರ್ಯಾಯ ಮೂಲಗಳಾಗಿರುವ ಕೆರೆ, ಬಾವಿ, ಬೋರ್‌ವೆಲ್‌ಗಳತ್ತ ಮಂಗಳೂರು ಪಾಲಿಕೆ ಅಧಿಕಾರಿಗಳು ದೌಡಾಯಿಸುವುದು ಸಾಮಾನ್ಯ. ಆದರೆ, ತುಂಬೆಯಲ್ಲಿ ಸಾಕಷ್ಟು ನೀರು ಇರುವವರೆಗೂ ಪಾಲಿಕೆ ಅಧಿಕಾರಿಗಳು ಪರ್ಯಾಯ ನೀರಿನ ಮೂಲಗಳತ್ತ ಯೋಚಿಸುವುದೇ ಇಲ್ಲ ಎಂಬುದು ಬಹುದೊಡ್ಡ ಅಪವಾದ. ಜತೆಗೆ ಮನೆ ಪಕ್ಕದಲ್ಲಿರುವ ಬಾವಿ, ಕೆರೆಗಳ ಬಗ್ಗೆಯೂ ಮೇ ವರೆಗೂ ಮೌನವಾಗಿರುವ ಅಧಿಕಾರಿಗಳು ನೀರಿನ ಕೊರತೆ ಎದುರಾಗುವಾಗ ಮಾತ್ರ ಪರ್ಯಾಯ ನೀರಿನ ವ್ಯವಸ್ಥೆಗಳ ಬಗ್ಗೆ ಲೆಕ್ಕಹಾಕಲು ಶುರು ಮಾಡುತ್ತಾರೆ. ಅಲ್ಲಿಯವರೆಗೆ ಕೆರೆ, ಬಾವಿ, ಬೋರ್‌ವೆಲ್‌ಗಳನ್ನು ಕೇಳುವವರೇ ಇಲ್ಲ. ಇಂತಹ ಪರಿಸ್ಥಿತಿ ಬದಲಾಗಬೇಕಿದೆ. ಪರ್ಯಾಯ ಮೂಲಗಳತ್ತ ವಿಶೇಷ ಆದ್ಯತೆ ನೀಡುವ ಬಗ್ಗೆಯೂ ಪಾಲಿಕೆ ಕ್ರಮ ಕೈಗೊಂಡರೆ ಭವಿಷ್ಯಕ್ಕೆ ಉತ್ತಮ. ಮುಂದಿದೆ ಅಪಾಯದ ಸೂಚನೆ!
ಪ್ರತೀ ದಿನ 160 ಎಂ.ಎಲ್.ಡಿ ನೀರು ಪಂಪಿಂಗ್
ಗೃಹಬಳಕೆಗಾಗಿ 80 ಎಂ.ಎಲ್.ಡಿ ನೀರು
ಗೃಹೇತರ/ವಾಣಿಜ್ಯ ಬಳಕೆ 39.50 ಎಂ.ಎಲ್.ಡಿ
ಭಾರೀ ಕೈಗಾರಿಕೆಗಳ ಬಳಕೆಗಾಗಿ 11 ಎಂ.ಎಲ್.ಡಿ
ಇತರ ಶೇ.22.75, ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆಗಳು, ಕಟ್ಟಡ ರಚನೆ 5.50 ಎಂ.ಎಲ್.ಡಿ
ಒಟ್ಟು 140 ಎಂ.ಎಲ್.ಡಿ
ಟ್ರಾನ್ಸ್‌ಮಿಶನ್ ಲೋಸಸ್, ಕೊಳವೆ ಹಾದುಹೋಗಿರುವ ಹಳ್ಳಿಗಳಲ್ಲಿ ನೀರು ಸೋರುವಿಕೆ 20 ಎಂ.ಎಲ್.ಡಿ
ಒಟ್ಟು 160 ಎಂ.ಎಲ್.ಡಿ