Advertisement

ಅಂಕೋಲಾದಲ್ಲಿ ನಲ್ಲಿ ನೀರು ಸರಬರಾಜು ಸ್ಥಗಿತ

11:00 AM May 22, 2019 | Suhan S |

ಅಂಕೋಲಾ: ತಾಲೂಕಿನ ಜನತೆಗೆ ನೀರುಣಿಸುವ ಗಂಗಾವಳಿ ನದಿ ನೀರು ಸಂಪೂರ್ಣ ಬತ್ತಿದ್ದು ಪುರಸಭಾ ವ್ಯಾಪ್ತಿಯ ಜನತೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ನೀರಿಲ್ಲದೆ ಹಿಂದೆಂದು ಕಂಡರಿಯದ ಭೀಕರ ಬರ ಎದುರಿಸುತ್ತಿರುವ ತಾಲೂಕಿನಲ್ಲೀಗ ನೀರು ಸ್ಥಗಿತ ಮಾಡಿರುವುದರಿಂದ ಜನತೆ ಕಂಗಾಲಾಗಿದ್ದಾರೆ.

Advertisement

ಈಗಾಗಲೇ ನಲ್ಲಿ ನೀರಿನ ಸರಬರಾಜು ಸ್ಥಗಿತ ಮಾಡಿರುವುದನ್ನು ಪುರಸಭೆಯ 23 ವಾರ್ಡ್‌ಗಳಲ್ಲಿ ಧ್ವನಿ ವರ್ಧಕದ ಮೂಲಕ ಹೇಳಲಾಗುತ್ತಿದೆ. ಈ ವಾರ್ಡ್‌ಗಳಿಗೆ ಇಂದಿನಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ನಿಂದ ಸರಬರಾಜು ಮಾಡುವ ನೀರು ಜನರಿಗೆ ಅಗತ್ಯಕ್ಕೆ ತಕ್ಕಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ. ಗಂಗಾವಳಿ ನದಿಯಿಂದ ಪ್ರತಿನಿತ್ಯ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಿಗೆ 20 ಲಕ್ಷಕ್ಕೂ ಅಧಿಕ ನೀರು ಬೇಕಿತ್ತು. ಆದರೆ ಗಂಗಾವಳಿ ನದಿಯಲ್ಲಿ ನೀರು ಬತ್ತಿರುವುದರಿಂದ ಮುಂದಿನ ದಿನದಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಇನ್ನೂ 20 ದಿನಗಳ ನಂತರ ಮಳೆ ಆರಂಭವಾಗಲಿದ್ದು ನೀರಿಗಾಗಿ ಜನ ಪರದಾಡಬೇಕಾಗಿದೆ. ತಾಲೂಕು ಆಡಳಿತ ಮತ್ತು ಪುರಸಭೆ ಜನರಿಗೆ ಸಮರ್ಪಕವಾಗಿ ಟ್ಯಾಂಕರ್‌ ಮೂಲಕ ನೀರನ್ನು ನೀಡಲು ಈಗಾಗಲೇ ಆರಂಭಿಸಿದ್ದಾರೆ. ಆದರೂ ಜನರಿಗೆ ನೀರಿನ ಅಭಾವ ಕಾಡ ತೊಡಗಿದೆ.

ಪ್ರಥಮಬಾರಿಗೆ ಅಲಗೇರಿ ಗ್ರಾಮಕ್ಕೆ ನೀರಿನ ಬಿಸಿ ತಟ್ಟಿದ್ದು ದೊಡ್ಡ ಅಲಗೇರಿ, ಸಣ್ಣ ಅಲಗೇರಿ ಭಾಗದ ಬಾವಿಗಳು ಹಿಂದೆಂದು ಬತ್ತಿರಲಿಲ್ಲ. ಗ್ರಾಮದ ಹಿರಿಯರು ಹೇಳುವ ಪ್ರಕಾರ ಯಾವ ಕಾಲದಲ್ಲಿಯೂ ಇಲ್ಲಿ ಬಾವಿ ಬತ್ತಿರುವುದನ್ನು ನೋಡಿಲ್ಲ. ಈಗ ಇಲ್ಲಿಯ ಬಾವಿಗಳು ಬತ್ತಿರುವುದು ನೀರಿನ ಬರ ತಟ್ಟಿದೆ. ಈ ಗ್ರಾ.ಪಂ ವ್ಯಾಪ್ತಿಯಲ್ಲಿ ಟ್ಯಾಂಕರ್‌ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ತಾಲೂಕಿನಲ್ಲೀಗ ಖಾಸಗಿ ನೀರಿನ ಟ್ಯಾಂಕರ್‌ಗಳು ಹೆಚ್ಚಾಗಿ ಕಂಡುಬರುತ್ತಿದೆ. ಪಟ್ಟಣದ ಹೋಟೆಲ್ ಮತ್ತು ತಂಪುಪಾನೀಯ ಮಳಿಗೆಗಳಿಗೆ ಮನೆಮನೆಗಳಿಗೆ ಈ ಖಾಸಗಿ ನೀರಿನ ಮಾಲಕರು ನೀರನ್ನು ಸರಬರಾಜು ಮಾಡುತ್ತಾರೆ. ನೀರನ್ನು ದುಬಾರಿ ವೆಚ್ಚದಲ್ಲಿ ನೀಡದೆ ಜನರಿಗೆ ಇವರು ಸಹಕರಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಖಾಸಗಿ ಸಂಘ ಸಂಸ್ಥೆ ದಾನಿಗಳು ನೀರನ್ನು ಉಚಿತವಾಗಿ ನೀಡುತ್ತಿದ್ದಾರೆ.

Advertisement

ಮುಂದಿನ ದಿನದಲ್ಲಿ ನೀರಿನ ಬೇಡಿಕೆ ದುಪ್ಪಟ್ಟು ಆಗುವ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಸರಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

•ಅರುಣ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next