Advertisement

3 ದಿನಕ್ಕೊಮ್ಮೆ ನೀರು ಪೂರೈಕೆ ವಿಫಲ

07:33 AM May 28, 2019 | Suhan S |

ಕಲಬುರಗಿ: ನಗರದಲ್ಲಿ ನಿಗದಿಯಂತೆ ನಳದ ಮೂಲಕ ಮೂರು ದಿನಗಳಿಗೊಮ್ಮೆ ನಾಗರಿಕರಿಗೆ ಕುಡಿಯುವ ನೀರು ಪೂರೈಸದಿರುವುದಕ್ಕೆ ಪಾಲಿಕೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿಯರ್‌ಗಳನ್ನು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತರಾಟೆಗೆ ತೆಗೆದುಕೊಂಡರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಕರೆಯಲಾಗಿದ್ದ ಇಂಜಿನಿಯರ್‌ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಒಂದು ವೇಳೆ ಮೂರು ದಿನಗಳೊಳಗೆ ನೀರು ಪೂರೈಸಲು ವಿಫಲವಾದಲ್ಲಿ 4ನೇ ದಿನವೇ ನೀರು ಬಿಡದಂತಹ ಬಡಾವಣೆಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಅವರು ತಾಕೀತು ಮಾಡಿದರು.

ನೀರು ಸರಬರಾಜು ಮಂಡಳಿಯಿಂದ ಪ್ರಸಕ್ತ 5 ಟ್ಯಾಂಕರ್‌ಗಳಲ್ಲಿ ನಗರಕ್ಕೆ ನೀರು ಪೂರೈಕೆಸಲಾಗುತ್ತಿದೆ. ನೀರಿನ ಅಭಾವ ಇರುವ ಇತರೆ ಪ್ರದೇಶಗಳಿಗೆ ಇನ್ನೂ 5-10 ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸಾರ್ವಜನಿಕರಿಂದ ದೂರು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬೆಳಗ್ಗೆ 6:00ರಿಂದ ರಾತ್ರಿ 9:00ರ ವರೆಗೆ ನೀರು ಪೂರೈಕೆ ಮಾಡಬೇಕು. ಪ್ರತಿದಿನ ಒಂದು ಟ್ಯಾಂಕರ್‌ನಿಂದ ಕನಿಷ್ಠ 5 ಟ್ರಿಪ್‌ ನೀರು ಸರಬರಾಜಾಗಬೇಕು ಎಂದು ಅವರು ಸೂಚಿಸಿದರು.

Advertisement

ಗುಲಬರ್ಗಾ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ (ಜಿಮ್ಸ್‌ ಆಸ್ಪತ್ರೆ)ಯಲ್ಲಿ ನೀರಿನ ಸಮಸ್ಯೆ ದೂರುಗಳು ಭಾರೀ ಪ್ರಮಾಣದಲ್ಲಿ ಕೇಳಿ ಬರುತ್ತಿವೆ. ಆಸ್ಪತ್ರೆಗೆ ಪ್ರತಿದಿನ 2 ಲಕ್ಷ ಲೀಟರ್‌ ನೀರಿನ ಅಗತ್ಯವಿದೆ. ಈ ಪ್ರಮಾಣದಲ್ಲಿ ನೀರು ಪೂರೈಸಲಾಗದಿರುವುದಕ್ಕೆ ಕಾರಣಗಳೇನು ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು.

ಸರ್ಕಾರಿ ಆಸ್ಪತ್ರೆಗೆ ನೀರು ಸರಬರಾಜು ಮಾಡಲು ವಿಫಲರಾದ ಅಧಿಕಾರಿಗಳ ವಿರುದ್ಧ ವರದಿ ಸಿದ್ಧಪಡಿಸಿ ಅಮಾನತು ಮಾಡಬೇಕು ಎಂದು ಪಾಲಿಕೆ ಆಯಕ್ತೆ ಬಿ. ಫೌಜಿಯಾ ತರನ್ನುಮ್‌ ಅವರಿಗೆ ಸೂಚನೆ ನೀಡಿದರು.

ಭೀಮಾ ನದಿಯಿಂದ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಕಲಬುರಗಿ ನಗರಕ್ಕೆ ನೀರು ಪೂರೈಕೆಯಾಗುತ್ತಿದೆ. ಆದರೆ, ನಿಗದಿಯಂತೆ ನೀರು ಪೂರೈಕೆ ಮಾಡುವಲ್ಲಿ ವಿಫಲರಾಗುತ್ತಿದ್ದೀರಿ. ಈ ಸಮಸ್ಯೆಯಿಂದ ಜನರು ಪ್ರತಿಭಟನೆಯಂತಹ ಹಾದಿತುಳಿಯುವಂತಾಗಿದೆ. ಕೆಲವೆಡೆ ಹತ್ತು ದಿನಗಳಾದರೂ ನೀರು ಬರುತ್ತಿಲ್ಲ.

ನೀರಿನ ಸಮಸ್ಯೆ ಬಗ್ಗೆ ತಮ್ಮ ಮೊಬೈಲಿಗೆ ಪ್ರತಿದಿನ 150ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಜತೆಗೆ ಎಸ್‌ಎಂಎಸ್‌ ಕೂಡ ಬರುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಫೋನ್‌ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ಕೆಂಡಾಮಂಡಲವಾದರು.

ಪಾಲಿಕೆ ಆಯುಕ್ತೆ‌ ಬಿ. ಫೌಜಿಯಾ ತರನ್ನುಮ್‌ ಮಾತನಾಡಿ, ನಗರಕ್ಕೆ ನೀರು ಸರಬರಾಜಾಗುತ್ತಿರುವ ಪೈಪ್‌ಲೈನ್‌ನಲ್ಲಿ ಹೆಚ್ಚಿನ ಪ್ರಮಾಣದ ಲಿಕೇಜ್‌ ಇರುವುದರಿಂದ ನೀರು ಸರಬರಾಜು ಸಮಸ್ಯೆಗೆ ಕಾರಣವಾಗಿದೆ. ಈ ಲಿಕೇಜ್‌ ಅನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಲಬುರಗಿ ಕಾರ್ಯನಿರ್ವಾಹಕ ಇಂಜಿನಿಯರ್‌ ಆರ್‌.ವಿ. ಪಾಟೀಲ ಮಾತನಾಡಿ, ವೀರೇಂದ್ರ ಪಾಟೀಲ ಬಡಾವಣೆಗೆ ನೀರು ಪೂರೈಕೆಯಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ಅಲ್ಲಿ 8ರಿಂದ 10 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದಂತೆ ಬೇರೆ ಬಡಾವಣೆಗಳಲ್ಲಿ ಅಷ್ಟೊಂದು ನೀರಿನ ಸಮಸ್ಯೆ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಶಾಲೆಗಳು, ಕಾಲೇಜ್‌, ಹೊಟೇಲ್ ಸೇರಿದಂತೆ ವಾಣಿಜ್ಯ ಬಳಕೆಗೆ ನೀರು ಬಳಕೆಗೆ ಸದ್ಯ ಕಡಿವಾಣ ಹಾಕಿ ಸಾರ್ವಜನಿಕರಿಗೆ ಕುಡಿಯಲು ನೀರು ಪೂರೈಸುವುದೇ ಪ್ರಥಮಾದ್ಯತೆಯಾಗಬೇಕು. ಹಾಗೆಯೇ ಅಕ್ರಮವಾಗಿ ನಳಗಳಿಗೆ ಮೋಟಾರ್‌ ಅಳವಡಿಸಿ, ನೀರು ಪಡೆಯುವವರ ವಿರುದ್ಧ ಕಳವು ಕೇಸ್‌ ಹಾಕಬೇಕು. ಈ ನಿಟ್ಟಿನಲ್ಲಿ ತಂಡ ರಚಿಸಿ ಕಾರ್ಯಚರಣೆ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಶಾಖಾಧಿಕಾರಿ ಉಮೇಸ ಪಾಂಚಾಳ ಅವರ ವ್ಯಾಪ್ತಿಯಲ್ಲಿ ಬರುವ ಐವಾನ್‌-ಇ-ಶಾಹಿ, ಆದರ್ಶನಗರ, ಬಸವೇಶ್ವರ ನಗರ, ಶಕ್ತಿ ನಗರ, ಗೋದು ತಾಯಿ ಬಡಾವಣೆಗಳಲ್ಲಿ ಹೆಚ್ಚಿನ ಕುಡಿಯುವ ನೀರಿನ ಸಮಸ್ಯೆ ಇದೆ. ಭೀಮಾ ನದಿಯಿಂದ ಅಗತ್ಯ ನೀರು ಪೂರೈಕೆಯಾದರೂ ಸರಿಯಾಗಿ ನಿರ್ವಹಣೆ ಮಾಡದಿರುವುದೇ ಇದಕ್ಕೆ ಕಾರಣ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಕಲಬುರಗಿ ವಲಯದ ಮುಖ್ಯ ಇಂಜಿನಿಯರ್‌ ಎಸ್‌.ಎನ್‌.ದಿನೇಸ ಮಾತನಾಡಿ, ಇಡೀ ನಗರದಲ್ಲಿ ಕಾರ್ಯನಿರ್ವಹಿಸಲು ಆರು ಕಾರ್ಯನಿರ್ವಾಹಕ ಇಂಜಿನಿಯರುಗಳ ಅಗತ್ಯವಿದೆ. ಆದರೆ, ಇಬ್ಬರು ಪ್ರಭಾರ ಸೇರಿ ನಾಲ್ಕು ಮಂದಿ ಇಂಜಿನಿಯರು ಮಾತ್ರ ಇದ್ದಾರೆ. ಜತೆಗೆ ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ವೇತನ ನೀಡದೆ ಇರುವುದು ಸಮರ್ಪಕ ಕಾರ್ಯನಿರ್ವಹಣೆಗೆ ಹಿನ್ನಡೆಯಾಗಿದೆ ಎಂದು ಸಮಸ್ಯೆ ಬಿಚ್ಚಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ವೇತನ ಕೊಡಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ ಮತ್ತು ಕಲಬುರಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿಯರ್‌ಗಳು, ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next