ಬೀದರ: ಬರ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ದಿನೇದಿನೆ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರು ಪೂರೈಸುವುದು, ಮಳೆ ನೀರು ಸಂಗ್ರಹಣೆ ಹಾಗೂ ಅಂತರ್ಜಲ ಸಂರಕ್ಷಣೆಯ ಕೆಲಸವನ್ನು ಕೂಡ ಜೊತೆಜೊತೆಗೆ ನಡೆಯಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಬರ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇನ್ನಷ್ಟು ಕೆರೆಗಳ ಹೂಳೆತ್ತುವುದಕ್ಕೆ ಸಂಬಂಧಿಸಿದಂತೆ 3 ಕೋಟಿ ರೂ. ಪ್ರಸ್ತಾವನೆ ತಯಾರಿಸಿ ಸಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಜಿಲ್ಲೆಯ ಇನ್ನಿತರ ಕಡೆಗಳಲ್ಲಿ ಮತ್ತೆ 25 ಕೆರೆಗಳಲ್ಲಿ ಹೂಳೆತ್ತುವ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದ ಅವರು, ಎಲ್ಲಾ ತಾಲೂಕುಗಳಲ್ಲಿ ಕೆಲವು ಕೆರೆಗಳಲ್ಲಿ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ ಎಂದರು.
ಬರ ಹಿನ್ನೆಲೆಯಲ್ಲಿ ಜಿಲ್ಲೆಯ ಅಲ್ಲಲ್ಲಿ ಕೊರೆದ 63 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ವಿಳಂಬವಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಕೂಡಲೇ ಎಲ್ಲ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಸಚಿವರು ಜೆಸ್ಕಾಂ ಅಧಿಕಾರಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಇನ್ನೂ ಎರಡು ತಿಂಗಳಿಗೆ ಆಗುವಷ್ಟು ಮೇವು ಲಭ್ಯವಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಕೆಲವು ರೈತರು ಮೇವು ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಹಳ್ಳಿಗಳಲ್ಲಿ ನಿಜವಾದ ಸ್ಥಿತಿ ಏನಿದೆ ಎಂದು ತಿಳಿಯಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ತಹಶೀಲ್ದಾರರು ಖುದ್ದು ಹಳ್ಳಿಗಳಿಗೆ ಭೇಟಿ ನೀಡಿ ಮೇವು ಲಭ್ಯತೆಯ ಬಗ್ಗೆ ವರದಿ ನೀಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ಮಾತನಾಡಿ, ಬರ ಇರುವ ಹಿನ್ನೆಲೆಯಲ್ಲಿ ನೀರಿನ ಕೊರತೆಯಾಗುವ ಕಡೆಗಳಲ್ಲಿ ಕೂಡಲೇ ಕೊಳವೆಬಾವಿ ಕೊರೆಯಿಸಲು ಕ್ರಮ ವಹಿಸಬೇಕು. ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.