ಸುರತ್ಕಲ್: ಸುರತ್ಕಲ್ ನಲ್ಲಿ 162 ಕೋ.ರೂ. ವೆಚ್ಚದಲ್ಲಿ ಬೃಹತ್ ಮಾರ್ಕೆಟ್ ಸಂಕೀರ್ಣಕ್ಕೆ ಯೋಜನೆ ರೂಪಿಸಿ ಇದೀಗ ಆಂದಾಜು 15 ಕೋ. ರೂ. ಕಾಮಗಾರಿ ಮುಗಿದಿದೆ. ಎರಡನೇ ಹಂತದ ಕಾಮಗಾರಿಗೆ ಅನುಮತಿ ದೊರಕಿದ್ದು, ಟೆಂಡರ್ ಹಂತದಲ್ಲಿದೆ. ಆದರೆ ಕಾಮಗಾರಿ ಆರಂಭಿಸಲು ಮಾರ್ಕೆಟ್ ತಳಭಾಗದಲ್ಲಿ ನಿಂತಿರುವ ಗ್ಯಾಲನ್ ಗಟ್ಟಲೆ ನೀರನ್ನು ಖಾಲಿ ಮಾಡುವುದು ಪಾಲಿಕೆಗೆ ಸವಾಲಾಗಲಿದೆ. ಇದಕ್ಕಾಗಿ ಹಲವಾರು ಪಂಪ್ ಸೆಟ್ ಜೋಡಿಸಿ ಕೋಟಿ ರೂ. ವೆಚ್ಚ ಮಾಡಬೇಕಾದ ಅನಿವಾರ್ಯ ಸ್ಥಿತಿಯಿದೆ.
ಈ ಮಾರ್ಕೆಟ್‌ನಲ್ಲಿ ಪಾರ್ಕಿಂಗ್‌ಗೆ ಅಂಡರ್‌ಗ್ರೌಂಡ್‌ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇದೀಗ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತು ಕೆರೆಯಾಗಿದೆ. ಹೆದ್ದಾರಿ, ಕುಡಿಯುವ ನೀರಿನ ಒಡೆದ ಪೈಪ್‌ನಿಂದ ಹಾಗೂ ಸುತ್ತಮುತ್ತಲಿನ ಮಳೆನೀರು ಇಲ್ಲಿಗೆ ಹರಿದು ಶೇಖರಣೆಗೊಳ್ಳುತ್ತಿದೆ.
ಶುಚಿತ್ವದ ಕೊರತೆ
ನೀರಿನೊಂದಿಗೆ ಭಾರೀ ಪ್ರಮಾಣದಲ್ಲಿ ಕಸ ತ್ಯಾಜ್ಯಗಳು ಸೇರಿಕೊಂಡಿದ್ದು, ಶುಚಿತ್ವದ ಕೊರತೆ ಕಾಣುತ್ತಿದೆ. ಇಲ್ಲಿನ ರಸ್ತೆ ಬದಿಯ ಗೂಡಂಗಡಿಗಳ ಅಳಿದುಳಿದ ತ್ಯಾಜ್ಯಗಳೂ ಈ ನೀರಿಗೆ ಸೇರುತ್ತಿದೆ. ಈ ಹಿಂದೆ ಇಲ್ಲಿ ಕೆರೆಯಿತ್ತು ಎಂಬ ಪ್ರತೀತಿಯಿದ್ದು, ನೀರಿನ ಒರತೆಯಿಂದ ಶೇಖರಣೆಗೊಂಡ ನೀರು ಆವಿಯಾಗುತ್ತಿಲ್ಲ. ಬೇರೆಗೆ ಹರಿದು ಹೋಗಲು ಜಾಗವಿಲ್ಲದೆ ನೀರು ಕೊಳೆತ ದುರ್ವಾಸನೆ ಪಸರಿಸಿದೆ.
ಚರಂಡಿ ವ್ಯವಸ್ಥೆಗೆ ಆದ್ಯತೆ: ಮಾರ್ಕೆಟ್ ಕಾಮಗಾರಿಗೆ ಈಗಾಗಲೇ ನಗರಾಭಿವೃದ್ಧಿ ಇಲಾಖೆಯಿಂದ ಹಸುರು ನಿಶಾನೆ ದೊರಕಿದೆ. ಟೆಂಡರ್ ಹಂತದಲ್ಲಿದೆ. ಮುಂದಿನ ಕಾಮಗಾರಿ ಸಂದರ್ಭ ಮೊದಲನೆಯದ್ದಾಗಿ ಮಾರ್ಕೆಟ್ ತಳಭಾಗದಲ್ಲಿ ಮಳೆ ನೀರು ಹಾಗೂ ಚರಂಡಿ ಹರಿದು ಶೇಖರಣೆಗೊಳ್ಳದಂತೆ ವಿಶೇಷ ಆದ್ಯತೆ ನೀಡಿ ಸುತ್ತಲೂ ಬೇಕಾದ ಚರಂಡಿ ವ್ಯವಸ್ಥೆ ಮಾಡಲು ನಿಗಾ ವಹಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. –
ಡಾ| ಭರತ್ ಶೆಟ್ಟಿ ವೈ., ಶಾಸಕರು