ಜಮಖಂಡಿ: ಪ್ರತಿ ಬೇಸಿಗೆಯಲ್ಲಿ ಕೃಷ್ಣಾ ನದಿ ತೀರದ ರೈತರ ಬೆಳೆಗಳಿಗೆ, ಜನ- ಜಾನುವಾರುಗಳಿಗೆ ನೀರಿನ ಬವಣೆ ತಪ್ಪಿಸಲು ತಾಲೂಕಿನ ಕೃಷ್ಣಾತೀರ ರೈತ ಸಂಘದ ಮೂಲಕ ರೈತರ ಶ್ರಮದಾನ, ವಂತಿಗೆಯಲ್ಲಿ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಆಲಮಟ್ಟಿ ಹಿನ್ನೀರು ಸಂಗ್ರಹಿಸುವ ಯೋಜನೆ ಆರಂಭಗೊಂಡಿದೆ.
ರೈತರ ವಂತಿಕೆಯಲ್ಲಿ 1989ರಲ್ಲಿ ಕೃಷ್ಣಾನದಿಗೆ ಚಿಕ್ಕಪಡಸಲಗಿ ಹತ್ತಿರ ನಿರ್ಮಿಸಿದ ಬ್ಯಾರೇಜ್ ರೈತರ ಬ್ಯಾರೇಜ್ ಎಂದೇ ಖ್ಯಾತಿ ಪಡೆದಿದೆ. ದಿ| ಸಿದ್ದು ನ್ಯಾಮಗೌಡರ ಅಕಾಲಿಕ ನಿಧನದಿಂದ ಯೋಜನೆ ಸ್ಥಗಿತಗೊಳ್ಳುವ ಮಾತುಗಳ ನಡುವೆ ಶಾಸಕ ಆನಂದ ನ್ಯಾಮಗೌಡ ಕೃಷ್ಣಾತೀರ ರೈತ ಸಂಘದ ಚುಕ್ಕಾಣಿ ಹಿಡಿಯುವ ಮೂಲಕ ಹಿನ್ನೀರು ಎತ್ತಿ ಹಾಕುವ ಯೋಜನೆ ನಿರಂತರ ಚಾಲನೆಯಲ್ಲಿಟ್ಟಿದ್ದಾರೆ. ಬೇಸಿಗೆಯಲ್ಲಿ ಕನಿಷ್ಠ 4 ಟಿಎಂಸಿ ನೀರು ಸಂಗ್ರಹಿಸುವ ಯೋಜನೆ ಆರಂಭಗೊಂಡಿದ್ದರಿಂದ ರೈತರಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಆಗಸ್ಟ್‌ನಲ್ಲಿ ಭೀಕರ ಪ್ರವಾಹದಲ್ಲಿ ಚಿಕ್ಕಪಡಲಸಗಿ ಬ್ಯಾರೇಜಿನ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ಅವುಗಳ ಮರುಜೋಡಣೆ ಕೆಲಸಕ್ಕೆ ಅಂದಾಜು 70 ಲಕ್ಷ ಮತ್ತು ಹಿನ್ನೀರು ಎತ್ತುವುದಕ್ಕಾಗಿ ವಿದ್ಯುತ್ ಬಿಲ್ 1.21 ಕೋಟಿ ಸಹಿತ ಅಂದಾಜು 1.91 ಕೋಟಿ ಹಣದ ಅವಶ್ಯಕತೆಯಿದೆ. ಈಗಾಗಲೇ 10ಎಚ್.ಪಿ. ಸಾಮರ್ಥ್ಯದ ವಿದ್ಯುತ್ ಮೋಟಾರಕ್ಕೆ ಕನಿಷ್ಠ 5 ಸಾವಿರ ವಂತಿಗೆ ನೀಡಬೇಕೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಈಗಾಗಲೇ ರೈತರಿಂದ ಅಂದಾಜು 70 ಲಕ್ಷ ವಂತಿಗೆ ಸಂಗ್ರಹವಾಗಿದೆ. ಇನ್ನೂ 1.20 ಕೋಟಿ ವಂತಿಗೆ ಸಂಗ್ರಹವಾಗಬೇಕಾಗಿದೆ. ಕೃಷ್ಣಾನದಿ ತೀರದ ರೈತರು ವಂತಿಗೆ ನೀಡುವ ಮೂಲಕ ಬ್ಯಾರೇಜ್ ಗೇಟ್‌ಗಳ ಅಳವಡಿಕೆಯಲ್ಲಿ ಕೂಡ ಶ್ರಮದಾನ ಮಾಡಿದ್ದು, ಪ್ರತಿದಿನ ಒಂದು ಗ್ರಾಮದ ಯುವಕರ ತಂಡ ಶ್ರಮದಾನದಲ್ಲಿ ತೊಡಗಿಸಿಕೊಂಡಿದ್ದರು.
ಮಾರ್ಚ 31ರವರೆಗೆ ಆಲಮಟ್ಟಿ ಹಿನ್ನೀರು ಎತ್ತಿ ಹಾಕುವ ಯೋಜನೆ ನಡೆಯಲಿದ್ದು, ಅಂದಾಜು 4 ಟಿಎಂಸಿ ನೀರು ಸಂಗ್ರಹಗೊಳ್ಳಲಿದೆ. ಮಾ. 14ರಂದು ಚಿಕ್ಕಪಡಸಲಗಿ ಬ್ಯಾರೇಜಿನಲ್ಲಿ ಅಂದಾಜು 1.8 ಟಿಎಂಸಿ ನೀರು ಸಂಗ್ರಹವಾಗಿದೆ. 180 ಮತ್ತು 100 ಅಶ್ವಶಕ್ತಿ ಸಾಮರ್ಥ್ಯದ ಅಂದಾಜು 30 ವಿದ್ಯುತ್ ಮೋಟರ್ ಗಳು ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಿದ್ದು, ಚಿಕ್ಕಪಡಸಲಗಿ ಬ್ಯಾರೇಜಿನಲ್ಲಿ ಒಂದು ದಿನಕ್ಕೆ ಅಂದಾಜು 0.07 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಆಲಮಟ್ಟಿ ಜಲಾಶಯದಲ್ಲಿ ಅಂದಾಜು 513 ಮೀಟರ್ ಸಂಗ್ರಹವಿದ್ದು, 512 ಮೀಟರ್ ವರೆಗೆ ಮಾತ್ರ ಹಿನ್ನೀರು ಎತ್ತಿ ಹಾಕಲು ಅವಕಾಶವಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಹಿನ್ನೀರು ಎತ್ತಿಹಾಕುವ ಕಾರ್ಯ ಶರವೇಗದಲ್ಲಿ ನಡೆಯುತ್ತಿದೆ. ಚಿಕ್ಕಪಡಸಲಗಿ ಬ್ಯಾರೇಜ್‌ನಲ್ಲಿ 4 ಟಿಎಂಸಿ ನೀರು ಸಂಗ್ರಹವಾದಲ್ಲಿ ಕೃಷ್ಣಾನದಿ ತೀರದ 38 ಹಳ್ಳಿಗಳಿಗೆ ಬೇಸಿಗೆಯಲ್ಲಿ ನೀರಿನ ತೊಂದಲರೆ ಉಂಟಾಗುವುದಿಲ್ಲ.
ಭೀಕರ ಪ್ರವಾಹದಿಂದ ವಿದ್ಯುತ್ ವ್ಯವಸ್ಥೆ ಹಾಳಾಗಿದ್ದು , ಮತ್ತೇ ಹೊಸದಾಗಿ ಜೋಡಣೆ ಮಾಡಲಾಗಿದೆ. ಭೀಕರ ಪ್ರವಾಹ ಬಂದಿದ್ದು, ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವದಿಲ್ಲವೆಂದ ರೈತರಿಗೆ ನದಿಯಲ್ಲಿ ನೀರು ಖಾಲಿ ಆಗುವುದನ್ನು ಸಹಿಸಲು ಸಾಧ್ಯವಾಗಲಿಲ್ಲ. ಕೃಷ್ಣಾತೀರ ರೈತ ಸಂಘದ ಸಭೆಯಲ್ಲಿ ನಿರ್ಧರಿಸಿದಂತೆ ರೈತರು ಈಗಾಗಲೇ 70 ಲಕ್ಷ ವಂತಿಗೆ ನೀಡಿದ್ದಾರೆ. ಉಳಿದ ರೈತರು ಕೂಡಲೇ ವಂತಿಗೆ ಹಣ ನೀಡಬೇಕು. ಈ ಸಲದ ಚಿಕ್ಕಪಡಸಲಗಿ ಬ್ಯಾರೇಜಿಗೆ ಹಿನ್ನೀರು ಎತ್ತಿಹಾಕಲು ಅಂದಾಜು 1.91 ಕೋಟಿ ವೆಚ್ಚ ತಗಲುವ ಸಾಧ್ಯತೆಯಿದೆ. ಹಿನ್ನೀರು ಎತ್ತಿಹಾಕುವ ಯೋಜನೆ ಕೃಷ್ಣಾನದಿ ತೀರದ ರೈತರ ಸಹಕಾರ ಅಗತ್ಯವಾಗಿದೆ.
– ಆನಂದ ನ್ಯಾಮಗೌಡ, ಶಾಸಕರು