ಹಾವೇರಿ: ಕೇವಲ ಮೂರು ತಿಂಗಳ ಹಿಂದಷ್ಟೇ ಉಕ್ಕಿ ಹರಿದಿದ್ದ ನದಿಗಳು ಈಗ ನೀರಿಲ್ಲದೇ ಬರಿದಾಗುತ್ತಿದ್ದು, ರೈತರು ನೀರಿಗಾಗಿ ಈ ವರ್ಷವೂ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.
ಕಳೆದ ಆಗಸ್ಟ್ ಹಾಗೂ ಅಕ್ಟೋಬರ್ ತಿಂಗಳಲ್ಲಾದ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಹರಿದ ವರದಾ, ಕುಮದ್ವತಿ, ಧರ್ಮಾ, ತುಂಗಭದ್ರಾ ನದಿಗಳೆಲ್ಲವೂ ಅಪಾಯಮಟ್ಟ ಮೀರಿ ತುಂಬಿ ಹರಿದಿದ್ದವು. ನದಿ ಸುತ್ತಲಿನ ಪ್ರದೇಶವೆಲ್ಲ ಜಲಸಮಾ ಧಿಯಾಗುವಂತೆ ಮಾಡಿದ್ದವು. ಆ ನದಿಗಳೇ ಈಗ ನೀರಿಲ್ಲದೆ ಒಡಲು ಒಣಗಿಸಿಕೊಳ್ಳುವ ಸ್ಥಿತಿ ತಲುಪಿವೆ.
ನಾಲ್ಕೈದು ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರ ಬರಗಾಲ ಆವರಿಸಿತ್ತು. ಸಮರ್ಪಕ ಮಳೆ ಆಗದೆ ಇರುವುದರಿಂದ ಅಕ್ಟೋಬರ್ ಇಲ್ಲವೇ ನವೆಂಬರ್ ತಿಂಗಳಿನಲ್ಲಿಯೇ ನದಿ ಬಾಂದಾರಗಳಿಗೆ ಗೇಟ್ ಹಾಕಲಾಗುತ್ತಿತ್ತು. ಈ ಬಾರಿ ಆಗಸ್ಟ್ ಹಾಗೂ ಅಕ್ಟೋಬರ್‌ನಲ್ಲಿ ಸುರಿದ ಅತಿವೃಷ್ಟಿಯಿಂದ ಬಾಂದಾರಗಳಿಗೆ ಗೇಟ್ ಈ ಅವಧಿಯಲ್ಲಿ ಅಳವಡಿಸಿಲ್ಲ. ಆದರೆ, ಮಳೆ ಕಡಿಮೆಯಾದ ಒಂದೇ ತಿಂಗಳಲ್ಲಿ ನದಿಗಳಲ್ಲಿನ ನೀರು ಅಪಾರ ಪ್ರಮಾಣದಲ್ಲಿ ಖಾಲಿಯಾಗಿದೆ.
ಇತ್ತೀಚೆಗೆ ಕೆಲವು ಬಾಂದಾರಗಳಿಗೆ ಗೇಟ್ ಹಾಕಲಾಗಿದೆಯಾದರೂ ದೊಡ್ಡ ಪ್ರಮಾಣದ ನೀರು ಬಾಂದಾರಗಳಲ್ಲಿ ಉಳಿಯದೇ ಹರಿದು ಹೋಗಿರುವುದು ಸುತ್ತಲಿನ ರೈತರನ್ನು ಕಂಗೆಡಿಸಿದೆ. ಇಷ್ಟು ವರ್ಷ ಸರಿಯಾಗಿ ಮಳೆ ಬಾರದೆ ನೀರಿನ ಕೊರತೆ ಅನುಭವಿಸುತ್ತಿದ್ದ ರೈತರು, ಈ ವರ್ಷಅತಿಯಾದ ಮಳೆಯಾದರೂ ಅದನ್ನು ಸಮರ್ಪಕ ಪ್ರಮಾಣದಲ್ಲಿ ಸಂಗ್ರಹಿಸಿಟ್ಟು ಕೊಳ್ಳಲಾಗದೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಆಗ ಹಾಗೆ..ಈಗ ಹೀಗೆ: ಜಿಲ್ಲೆಯಲ್ಲಿ ಹರಿದಿರುವ ತುಂಗಾ, ವರದಾ ನದಿಗಳು ಈ ಬಾರಿ ಅಪಾಯಮಟ್ಟದ ವರೆಗೆ ತುಂಬಿ ಹರಿದವು. ತಾಲೂಕಿನ ನೂರಾರು ಎಕರೆ ಕೃಷಿ ಭೂಮಿಗೆ ನದಿಗಳ ನೀರು ಉಕ್ಕಿ ಬೆಳೆ ಕೂಡ ನಾಶವಾಯಿತು.ಆಗ ಅತಿವೃಷ್ಟಿಯಿಂದ ಬೆಳೆ ನಾಶವಾಗಿದ್ದು, ಬೇಸಿಗೆ ಹಂಗಾಮಿನಲ್ಲಾದರೂ ಬೆಳೆ ಬೆಳೆದು ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು ಎಂದು ರೈತರು ಲೆಕ್ಕಹಾಕಿದ್ದರು. ಆದರೆ, ನದಿಯಲ್ಲಿನ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಹೋಗಿರುವುದರಿಂದ ರೈತರ ಬೇಸಿಗೆ ಬೆಳೆಯ ನಿರೀಕ್ಷೆಯೂ ಹುಸಿಯಾದಂತಾಗಿದೆ.
50 ಬ್ಯಾರೇಜ್‌ಗಳು: ಜಿಲ್ಲೆಯಲ್ಲಿ ವರದಾ ನದಿಯ 16, ಕುಮದ್ವತಿ ನದಿಯ 10, ಧರ್ಮಾ ನದಿಯ 12, ಹಳ್ಳಗಳು 12 ಹೀಗೆ 50 ಬ್ಯಾರೇಜ್‌ಗಳಿವೆ. ಇವುಗಳಲ್ಲಿ ವರದಾ, ಧರ್ಮಾ ನದಿಗಳ ಬ್ಯಾರೇಜ್ ಗಳು ಜಿಲ್ಲೆಯ ರೈತರಿಗೆ ಹೆಚ್ಚು ವರದಾನವಾಗಿದ್ದು, ಈ ಬ್ಯಾರೇಜ್‌ಗಳಿಗೆಲ್ಲ ಸಕಾಲದಲ್ಲಿ ಗೇಟ್ ಹಾಕಿದರೆ ವರದಾ ನದಿಯ ಕಳಸೂರ, ಮನ್ನಂಗಿ, ನಾಗನೂರ, ಸಂಗೂರ, ಆಡೂರ, , ಕೂಸನೂರ, ಶೇಷಗಿರಿ, ಹೊಂಕಣ, ಮಕರಳ್ಳಿ, ಗೊಂದಿ, ಕರಜಗಿ, ಹಿರೇಮರಳಿಹಳ್ಳಿ, ಹೊಸರಿತ್ತಿ, ಬೆಳವಿಗಿ, ಮರೊಳಗಳ ಗ್ರಾಮಗಳ ಸಾವಿರಾರು ಹೆಕ್ಟೇರ್ ರೈತರ ಕೃಷಿ ಭೂಮಿಗೆ, ಜನ, ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಅತಿವೃಷ್ಠಿಯಾದ ಈ ವರ್ಷವೂ ರೈತರು ನೀರಿನ ಸಮಸ್ಯೆ ಎದುರಿಸುವಂತಾದದ್ದು ವಿಪರ್ಯಾಸ.
ಎಚ್.ಕೆ. ನಟರಾಜ