Advertisement

ಇಲ್ಲಿ 2 ದಿನಕ್ಕೊಮೆ 200 ಲೀ. ನೀರು ಸಿಕ್ಕರೆ ಅದೇ ಭಾಗ್ಯ

12:06 PM Apr 27, 2019 | Team Udayavani |

ಅಜೆಕಾರು,ಎ.26: ಎರಡು ದಿನಕ್ಕೊಮ್ಮೆ 200 ಲೀ. ನೀರು ಪೂರೈಕೆಯಾದರೆ ಅದೇ ಇಲ್ಲಿನ ಜನತೆಯ ಭಾಗ್ಯ. ಮರ್ಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನೀರಿನ ಅಭಾವ ಬಿಗಡಾಯಿಸಿದ್ದು, ಬರಗಾಲದಛಾಯೆ ಆವರಿಸಿದೆ.

Advertisement

ಕೆಲ ಭಾಗಗಳಿಗೆ ನಳ್ಳಿಯಲ್ಲಿ 2 ದಿನಕ್ಕೊಮ್ಮೆ 1 ಗಂಟೆ ನೀರು ಪೂರೈಕೆಯಾಗುತ್ತದೆ. ಆದರೆ ಕೆಲ ಮನೆಗಳಿಗೆ ನೀರು ಬರುತ್ತಲೇ ಇಲ್ಲ. ಪಂಚಾಯತ್‌ ವ್ಯಾಪ್ತಿಯ ಗುಡ್ಡೆಯಂಗಡಿ, ಕಾಡುಹೊಳೆ, ದೆಪುತ್ತೆ, ಕಿರೆಂಚಿಬೈಲು, ಕೊಟ್ಟಾರಿಬೆಟ್ಟು, ನಂದಾರು, ಅಜೆಕಾರು, ನೀರಲ್ಕೆ, ಗುಂಡ್ಯಡ್ಕ, ಅಂಬೇಡ್ಕರ್‌ ಕಾಲನಿ, ಬಂಡಸಾಲೆ, ಕುರುಡೇಲು, ಜ್ಯೋತಿನಗರ, ಹೆರ್ಮುಂಡೆ, ನೇಲ್‌ನೆಕ್ಕರೆ, ಎಣ್ಣೆಹೊಳೆ, ಬೊಂಡುಕುಮೇರಿ, ಕೈಕಂಬ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಹಿಂದೆಂದಿಗಿಂತಲೂ ತೀವ್ರವಾಗಿ ಕಾಡಿದೆ. ವರ್ಷಗಳ ಹಿಂದೆ ನಳ್ಳಿ ನೀರಿನ ವ್ಯವಸ್ಥೆ ಇದ್ದಾಗ ಕುಡಿಯುವ ನೀರಿಗೆ ಸಮಸ್ಯೆ ಇರಲಿಲ್ಲ. ಇತ್ತೀಚೆಗೆ ನಳ್ಳಿ ನೀರು ಸ್ಥಗಿತಗೊಂಡಿರುವುದರಿಂದ ಸಮಸ್ಯೆ ತೀವ್ರವಾಗಿದ್ದು, ಯಾವಾಗ ನೀರು ಬರುತ್ತದೆ ಎಂದು ಕಾಯಬೇಕಾಗಿದೆ.

200 ಲೀ. ನೀರಲ್ಲಿ ಎಲ್ಲವೂ ಆಗಬೇಕು :

ಪಂಚಾಯತ್‌ನಿಂದ ಪೂರೈಕೆಯಾಗುವ 200 ಲೀಟರ್‌ ನೀರಿನಿಂದಲೇ ಅಡುಗೆ, ಸ್ನಾನ,ಬಟ್ಟೆ ಒಗೆಯಲು, ಶೌಚ್ಚಕ್ಕೆ ಉಪಯೋಗಿಸುವ ಅನಿವಾರ್ಯತೆ ಇದೆ. ಮನೆಯಲ್ಲಿ ಹೆಚ್ಚಿನ ಜನವಿದ್ದರೆ ಸಮಸ್ಯೆ ಹೇಳತೀರದು. ರಜೆ ದಿನಗಳಲ್ಲಿ ನೆಂಟರು ಬಂದರಂತೂ ಸಮಸ್ಯೆ ಬಿಗಡಾಯಿಸುತ್ತದೆ.

ದೂರದೃಷ್ಟಿ ಇಲ್ಲದ ಯೋಜನೆಗಳು :

Advertisement

7-8 ವರ್ಷಗಳ ಹಿಂದೆ ತೆರೆದ ಬಾವಿ, ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಲಾಗಿತ್ತಾದರೂ ಬಾವಿಯ ಆಳ ಕಡಿಮೆ ಇರುವುದರಿಂದ ಡಿಸೆಂಬರ್‌ ತಿಂಗಳಿನಲ್ಲಿಯೇ ನೀರಿನ ಕೊರತೆ ಕಾಡುತ್ತದೆ.  ಇದರಿಂದ ಟ್ಯಾಂಕ್‌ ನಿಷ್ಪ್ರಯೋಜಕವಾಗಿದೆ. ಕಳೆದವರ್ಷ ಬೇಸಗೆಯಲ್ಲೇ ಮಳೆಯಾದ್ದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚೇನು ಉದ್ಭವವಾಗಿರಲಿಲ್ಲ. ಆದರೆ ಈ ಬಾರಿ ಮಳೆ ಸುರಿಯದೆ ಸಮಸ್ಯೆ ಹೆಚ್ಚಾಗಿದೆ.

ಬಾವಿ, ಕೊಳವೆ ಬಾವಿಗಳಲ್ಲಿ ನೀರಿಲ್ಲ:  ಜನವರಿ ವೇಳೆ ಈ ಭಾಗದಲ್ಲಿ ಬಾವಿ, ಕೊಳವೆ ಬಾವಿಗಳ ಜಲಮಟ್ಟ ಕುಸಿದಿದೆ. ಒಂದೆರಡು ಖಾಸಗಿ ಬಾವಿಗಳ ತಳಮಟ್ಟದಲ್ಲಿ ಅಲ್ಪಸ್ವಲ್ಪ ಇದ್ದ ನೀರು ವಠಾರದ ಪ್ರತಿಯೊಂದು ಮನೆಗೂ ಆಸರೆಯಾಗಿತ್ತು. ಆದರೆ ಎ.15ರ ನಂತರ ಆ ಬಾವಿಗಳೂ ಬತ್ತಿವೆ. ಕೊಳವೆ ಬಾವಿಗಳೂ ಬರಿದಾಗಿವೆ. ಪ್ರತಿವರ್ಷ ನೀರಿನ ಸಮಸ್ಯೆ ಕಾಡುತ್ತಿದ್ದು, ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

 

ಸ್ಥಳೀಯವಾಗಿ ಇಲ್ಲಿ ನೀರಿನ ಸಂಪನ್ಮೂಲ ಕಡಿಮೆಯಿದೆ. ಕುಡಿಯುವ ನೀರಿನ ಬಗ್ಗೆ ಸಮರ್ಪಕ ಕ್ರಿಯಾ ಯೋಜನೆಗಳಿಲ್ಲದೆ ಜನರು ಬೇಸಗೆಯಲ್ಲಿ ನಿತ್ಯವೂ ಪರಿತಪಿಸುವಂತಾಗಿದೆ. ಇದಕ್ಕಾಗಿ ತಾತ್ಕಾಲಿಕ ಪರಿಹಾರಗಳೊಂದಿಗೆ ಶಾಶ್ವತ ಯೋಜನೆ ರೂಪಿಸಲು ಆಡಳಿತ ಒತ್ತು ನೀಡಬೇಕು.
ವಾರ್ಡ್‌ ಜನರ ಬೇಡಿಕೆ:
•ಪ್ರತೀ ದಿನ ಟ್ಯಾಂಕರ್‌ ನೀರು ಪೂರೈಕೆ
• ಸಮರ್ಪಕ ನಳ್ಳಿ ನೀರಿನ ಪೂರೈಕೆ
• ದೆಪ್ಪುತ್ತೆ ನದಿ ಸಮೀಪ ಬೃಹತ್‌ ಬಾವಿ ನಿರ್ಮಾಣ
• ಟ್ಯಾಂಕರ್‌ ನೀರಿನ ಪ್ರಮಾಣ ಹೆಚ್ಚಳ
• ಪಂಚಾಯತ್‌ ವ್ಯಾಪ್ತಿಯಲ್ಲಿ ಶಾಶ್ವತ
 
200 ಲೀ. ನೀರು:

ಪಂಚಾಯತ್‌ ವ್ಯಾಪ್ತಿಯ ಬಹುತೇಕ ಭಾಗಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಈಗಾಗಲೇ ಕೆಲ ಭಾಗಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಉಳಿದ ಭಾಗಗಳಲ್ಲಿಯೂ ಬೇಡಿಕೆ ಬರುತ್ತಿದ್ದು ಅಗತ್ಯವಿರುವ ಪಂಚಾಯತ್‌ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ಮಳೆಗಾಲ ಪ್ರಾರಂಭವಾಗುವವರೆಗೆ ಪ್ರತೀ 2 ದಿನಕ್ಕೊಮ್ಮೆ 200 ಲೀಟರ್‌ ನೀರು ಪೂರೈಕೆ ಮಾಡಲಾಗುವುದು. -ತಿಲಕ್‌ರಾಜ್‌, ಪಿಡಿಒ ಮರ್ಣೆ ಪಂಚಾಯತ್‌
 
ಉದಯವಾಣಿ ಆಗ್ರಹ:

ಈ ಪ್ರದೇಶದವರಿಗೆ ಕೂಡಲೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು. ಹೆಚ್ಚು ಸಮಸ್ಯೆ ಇರುವಲ್ಲಿಗೆ ಆದ್ಯತೆ ಅನುಸಾರ ನೀರು ನೀಡಬೇಕು.
ಸಮರ್ಪಕ ನೀರು ಪೂರೈಕೆಯಿಲ್ಲ:

ದೆಪ್ಪುತ್ತೆ ಭಾಗದ ಸಾರ್ವಜನಿಕ ಬಾವಿಯಲ್ಲಿ ಮಾರ್ಚ್‌ ತಿಂಗಳವರೆಗೆ ಕುಡಿಯುವ ನೀರು ಸಿಗುತ್ತಿತ್ತು. ಆದರೆ ಕೆಲ ವಾರಗಳಿಂದ ಬಾವಿಯ ನೀರು ಸಂಪೂರ್ಣ ಬತ್ತಿಹೋಗಿದ್ದು ಟ್ಯಾಂಕರ್‌ ಮೂಲಕ ಪಂಚಾಯತ್‌ ನವರು ಎರಡು ದಿನಕೊಮ್ಮೆ ನೀಡುವ ನೀರನ್ನೇ ಕುಡಿಯಲು ಉಪಯೋಗಿಸುತ್ತಿದ್ದೇವೆ. ಈ ವಠಾರದ ಕೆಲವರಿಗೆ ನಳ್ಳಿ ನೀರಿನ ಸಂಪರ್ಕವಿದ್ದು ಕೆಲ ಮನೆಗಳಿಗೆ ಸಮರ್ಪಕ ಪೂರೈಕೆಯಾಗದೇ ಸಮಸ್ಯೆ ಉಂಟಾಗುತ್ತಿದೆ.
ಜುಬೇದಾ, ಸ್ಥಳೀಯ ನಿವಾಸಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ ‘ಉದಯವಾಣಿ’ ವಾಟ್ಸಪ್‌ ನಂಬರ್‌ 9148594259 ಬರೆದು ಕಳುಹಿಸಿ.

 

Advertisement

Udayavani is now on Telegram. Click here to join our channel and stay updated with the latest news.

Next