ಅಫಜಲಪುರ: ಭೀಕರ ಬರದಿಂದ ತಾಲೂಕಿನ ಜೀವನದಿ ಭೀಮಾ ನದಿ ಬತ್ತಿರುವುದರಿಂದ ನದಿ ದಡದಲ್ಲಿರುವ ಪುಣ್ಯಕ್ಷೇತ್ರ ಘತ್ತರಗಿಯಲ್ಲೀಗ ಪುಣ್ಯಸ್ನಾನಕ್ಕಲ್ಲ, ಪೂಜೆಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು. ಸದಾ ಭಕ್ತರಿಂದ ಪ್ರತಿ ಅಮಾವಾಸ್ಯೆ ಮತ್ತು ಶುಕ್ರವಾರ ತುಂಬಿರುತ್ತಿದ್ದ ಘತ್ತರಗಿಯಲ್ಲೀಗ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಭಾಗ್ಯವಂತಿ ಕ್ಷೇತ್ರದಲ್ಲಿಗ ಜಲಕ್ಷಾಮ ಉಂಟಾಗಿದೆ. ಭಕ್ತರಷ್ಟೇ ಅಲ್ಲ ಜಾನುವಾರುಗಳು ಪರದಾಡುವಂತಾಗಿದೆ.
ಕೊಳಚೆ ನೀರೇ ಪಾವನ ತೀರ್ಥ: ಎಂತಹ ಬರ ಬಂದರೂ ಭಾಗ್ಯವಂತಿ ದೇವಿಯ ದರ್ಶನಕ್ಕೆ ಭಕ್ತರು ಬರುತ್ತಾರೆ. ಆದರೆ ಇತಿಹಾಸದಲ್ಲೇ ಇಷ್ಟೊಂದು ಭೀಕರ ಬರ ಬಂದಿರಲಿಲ್ಲ. ನದಿಗಿಳಿದು ಪುಣ್ಯಸ್ನಾನ ಇಲ್ಲ ಬಿಡಿ, ಪಾವನ ತೀರ್ಥವಾದರೂ ತೆಗೆದುಕೊಂಡು ಹೋಗಬೇಕೆಂದರೆ ನದಿಯಲ್ಲಿ ಕೊಳಚೆ ನೀರು ನಿಂತಿರುವುದರಿಂದ ಬಂದ ಭಕ್ತರಿಗೆ ಈಗ ಕೊಳಚೇ ನೀರೇ ‘ಪಾವನ ತೀರ್ಥ’ವಾಗಿದೆ. ಹೀಗಾಗಿ ಭಕ್ತರು ಇದೇ ನೀರನ್ನು ಬಾಟಲಿಗಳಲ್ಲಿ ಹಿಡಿದುಕೊಂಡು ಭಕ್ತರು ಪಾವನ ತೀರ್ಥವೆಂದು ಕುಡಿಯುವಂತಾಗಿದೆ. ಇದೇ ನೀರನ್ನೇ ಬಾಟಲಿಯಲ್ಲಿ ಹಿಡಿದುಕೊಂಡು ಪುಣ್ಯಸ್ನಾನವೆಂದು ಮಾಡುತ್ತಿದ್ದಾರೆ.
ನದಿಯಲ್ಲೇ ಬಟ್ಟೆ ಬಿಡುವ ಭಕ್ತರು: ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡುವ ಭಕ್ತರು ಬಳಿಕ ಸೀರೆ, ಪ್ಯಾಂಟ್, ಶರ್ಟ್ ಸೇರಿದಂತೆ ಬಟ್ಟೆಗಳನ್ನು ಬಿಡುತ್ತಿದ್ದಾರೆ. ಹೀಗಾಗಿ ನದಿ ಮಲೀನವಾಗುತ್ತಿದೆ. ಬಟ್ಟೆ ಬದಲಾಯಿಸಲೆಂದೇ ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಲಾಗಿದ್ದರೂ ಯಾರೂ ಕೋಣೆಗಳಲ್ಲಿ ಬಟ್ಟೆ ಬದಲಾಯಿಸಲ್ಲ. ಸಂಬಂಧಪಟ್ಟವರು ನದಿ ಉಳಿವಿಗೆ ಕ್ರಮ ಕೈಗೊಳ್ಳಬೇಕಿದೆ.